ADVERTISEMENT

ನಾಳೆ ಡಿಕೆಶಿ ವಿರುದ್ಧದ ದೋಷಾರೋಪ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2012, 19:30 IST
Last Updated 3 ಜುಲೈ 2012, 19:30 IST

ಬೆಂಗಳೂರು: ಕಾಂಗ್ರೆಸ್ ಶಾಸಕ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ದೋಷಾರೋಪ ಪಟ್ಟಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕೇ,  ಬೇಡವೇ ಎಂಬ ಬಗ್ಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಗುರುವಾರ ವಿಚಾರಣೆ ಮುಂದುವರಿಸಲಿದೆ.

ಬೆಂಗಳೂರಿನ ಹಳೆ ಮದ್ರಾಸ್ ರಸ್ತೆಯಲ್ಲಿರುವ ಬೆನ್ನಿಗಾನಹಳ್ಳಿಯಲ್ಲಿ 4.1 ಎಕರೆ ಭೂಮಿಯನ್ನು ಸ್ವಾಧೀನ ಪ್ರಕ್ರಿಯೆಯಿಂದ ಅಕ್ರಮವಾಗಿ ಕೈಬಿಟ್ಟ ಪ್ರಕರಣದಲ್ಲಿ ಶಿವಕುಮಾರ್  ವಿರುದ್ಧ ಲೋಕಾಯುಕ್ತ ಪೊಲೀಸರು ಜೂನ್ 21ರಂದು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ವಿಧಾನ ಪರಿಷತ್ ಸದಸ್ಯ ಲೆಹರ್ ಸಿಂಗ್ ಅವರ ಹೆಸರುಗಳನ್ನು ಸಾಕ್ಷ್ಯಗಳ ಕೊರತೆ ಕಾರಣ ದೋಷಾರೋಪ ಪಟ್ಟಯಿಂದ ಕೈಬಿಡಲಾಗಿತ್ತು.  `ದೋಷಾರೋಪ ಪಟ್ಟಿಯ ಪ್ರತಿ ಇನ್ನೂ ದೊರೆತಿಲ್ಲ.
 
ಅದು ದೊರೆತ ನಂತರ, ಕೂಲಂಕಷವಾಗಿ ಪರಿಶೀಲಿಸಿ, ಯಡಿಯೂರಪ್ಪ ಹಾಗೂ ಲೆಹರ್ ಸಿಂಗ್ ಅವರ ಹೆಸರನ್ನು ಕೈಬಿಟ್ಟಿರುವ ಕುರಿತು ಆಕ್ಷೇಪಣೆ ಸಲ್ಲಿಸಲಾಗುವುದು. ಇದಕ್ಕೆ ಕಾಲಾವಕಾಶ ನೀಡಬೇಕು~ ಎಂದು ದೂರುದಾರ ಕಬ್ಬಾಳೇಗೌಡ ಅವರ ಪರ ವಕೀಲರು ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ. ಸುಧೀಂದ್ರ ರಾವ್ ಅವರಲ್ಲಿ ಕೋರಿಕೊಂಡರು.

ವೈಯಾಲಿಕಾವಲ್, ಶಾಂತಿನಗರ, ಜಯನಗರ, ಎನ್‌ಟಿಐ ಹಾಗೂ ಭವಾನಿ ಗೃಹ ನಿರ್ಮಾಣ ಸಹಕಾರಿ ಸಂಘಗಳು ನಡೆಸಿವೆ ಎನ್ನಲಾದ ಅಕ್ರಮಗಳಲ್ಲಿ ಶಿವಕುಮಾರ್ ಅವರ ಪಾತ್ರ ಇದೆ ಎಂಬ ಆರೋಪ ಕುರಿತು ತನಿಖೆ ನಡೆಸಲು ಲೋಕಾಯುಕ್ತ ಪೊಲೀಸರು ವಿಫಲರಾಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಮನವಿ (ಮೆಮೊ) ಸಲ್ಲಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.