ADVERTISEMENT

ನಿಗೂಢ ಸಂಗತಿಗಳ ಸುತ್ತ ಅನುಮಾನಗಳ ಹುತ್ತ...

​ಪ್ರಜಾವಾಣಿ ವಾರ್ತೆ
Published 14 ಮೇ 2012, 18:35 IST
Last Updated 14 ಮೇ 2012, 18:35 IST

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲ್ಲೂಕಿನ ಹೊರವಲಯದ ಬೀಡಗಾನಹಳ್ಳಿ ಮತ್ತು ದೇವನಹಳ್ಳಿ ತಾಲ್ಲೂಕಿನ ಗಡಿಯಲ್ಲಿರುವ ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಅಲೋಕ್‌ರಂಜನ್ (21) ಸಾವು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಪ್ರಕರಣವು ದಿನಕ್ಕೆ ಒಂದೊಂದು ರೀತಿಯ ತಿರುವು ಪಡೆದುಕೊಳ್ಳುತ್ತಿದೆ. ಪ್ರೇಮವೈಫಲ್ಯದಿಂದ ಮನನೊಂದು ರೈಲಿಗೆ ತಲೆಯೊಡ್ಡಿ ಆತ ಆತ್ಮಹತ್ಯೆ ಮಾಡಿಕೊಂಡ ಎಂಬ ಅಭಿಪ್ರಾಯ ಕೆಲವರು ವ್ಯಕ್ತಪಡಿಸಿದರೆ, ಇನ್ನೂ ಕೆಲವರು, `ದುಷ್ಕರ್ಮಿಗಳು ಆತನನ್ನು ಕೊಂದ ಬಳಿಕ ಶವವನ್ನು ರೈಲು ಹಳಿ ಬಳಿ ಎಸೆದಿದ್ದಾರೆ~ ಎಂದು ಆರೋಪಿಸುತ್ತಿದ್ದಾರೆ.

ಅಚ್ಚುಮೆಚ್ಚಿನ ಪುತ್ರ ಅಲೋಕ್‌ರಂಜನ್ ಕಳೆದುಕೊಂಡು ಕುಟುಂಬ ಸದಸ್ಯರು ಆಘಾತಕ್ಕೆ ಒಳಗಾಗಿದ್ದಾರೆ. ಮೊಮ್ಮಗನ ಸಾವಿನ ಸುದ್ದಿ ಕೇಳಿ ಅಸ್ವಸ್ಥಗೊಂಡ ಅಜ್ಜಿ ಪ್ರಾಣಬಿಟ್ಟಿದ್ದು, ಕುಟುಂಬ ಸದಸ್ಯರ ದುಗುಡ ಇನ್ನಷ್ಟು ಹೆಚ್ಚಿಸಿದೆ. ಬೆಂಗಳೂರಿನ ಹೆಬ್ಬಾಳದಲ್ಲಿ ಭಾನುವಾರ ಅಲೋಕ್‌ನ ಅಂತ್ಯಕ್ರಿಯೆ ನೆರವೇರಿಸಿದ ಕುಟುಂಬ ಸದಸ್ಯರು ಬಿಹಾರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಅಲೋಕ್ ಸಾವಿಗೆ ಶರಣಾದನೇ ಅಥವಾ ಕೊಲೆ ಮಾಡಲಾಗಿದೆಯೇ ಎಂಬ ಸಂಶಯ ಕುಟುಂಬ ಸದಸ್ಯರಿಗೆ ಕಾಡುತ್ತಿದ್ದು, ಈ ಆಘಾತದಿಂದ ಹೊರಬರಲು ಅವರಿಗೆ ಸಾಕಷ್ಟು ಸಮಯ ಬೇಕು.

ವಿವರ: ಬಿಹಾರ ರಾಜ್ಯದ ದರ್ಬಾಂಗ್ ಜಿಲ್ಲೆಯ ಬಸಂತ್ ತಾಲ್ಲೂಕಿನ ಪಟೋರಿ ಗ್ರಾಮ ಸಮೀಪದ ಕೊಲ್ಹಂತ ಗ್ರಾಮದ ನಿವಾಸಿ ಅಲೋಕ್‌ರಂಜನ್ ನಾಗಾರ್ಜುನ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ವಿಭಾಗದಲ್ಲಿ 4ನೇ ಸೆಮಿಸ್ಟರ್ ಓದುತ್ತಿದ್ದ. ಮೊದಲ ಎರಡೂ ಸೆಮಿಸ್ಟರ್‌ಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದ ಆತ ಮೂರನೇ ಸೆಮಿಸ್ಟರ್‌ನಲ್ಲಿ ಓದಿನಿಂದ ವಿಮು ಖಗೊಂಡ. ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದಕ್ಕೆ ಆತ ಖಿನ್ನತೆಗೆ ಒಳಗಾಗಿದ್ದ ಎಂದು ಕಾಲೇಜಿನ ಪ್ರಾಧ್ಯಾಪಕರು ಹೇಳುತ್ತಾರೆ.

`ಕಾಲೇಜಿನಲ್ಲಿ ಓದುವಾಗಲೇ ಅಲೋಕ್ ಒಬ್ಬ ಯುವತಿಯೆಡೆಗೆ ಆಕರ್ಷಿತನಾಗಿದ್ದ. ಆಕೆ ಬೇರೆ ವಿಭಾಗದಲ್ಲಿ ಓದುತ್ತಿದ್ದರೂ ಆತ ಆಕೆಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದ. ಇತ್ತೀಚಿನ ಕೆಲ ದಿನಗಳಿಂದ ಆಕೆ ಇನ್ನೊಬ್ಬ ಸಹಪಾಠಿಯೊಂದಿಗೆ ಮಾತನಾಡುತ್ತಿರುವುದು ಕಂಡು ಬೇಸರಗೊಂಡಿದ್ದ. ಇದೇ ಕಾರಣದಿಂದ ಮೇ 11ರಂದು ಆಕೆಯ ಕಪಾಳಕ್ಕೆ ಹೊಡೆದಿದ್ದ. ಆಕೆಯ ಸಹಪಾಠಿಗಳು ಆತನ ವಿರುದ್ಧ ಅಸಮಾಧಾನಗೊಂಡು ಹಲ್ಲೆಗೂ ಮುಂದಾಗಿದ್ದರು. ಜಗಳ ವಿಕೋಪಕ್ಕೆ ತಿರುಗುವುದನ್ನು ತಪ್ಪಿಸಲು ನಾವು ಅಲೋಕ್‌ನನ್ನು ಕೋಣೆಯೊಂದರಲ್ಲಿ ಕೂರಿಸಿದೆವು. ಆದರೆ, ಭಯಗೊಂಡ ಆತ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರಿಗೆ ದೂರವಾಣಿ ಕರೆ ಮಾಡಿದ. ಬಳಿಕ ಅಲ್ಲಿಂದ ಕೆಲವೇ ನಿಮಿಷಗಳಲ್ಲಿ ಕಾಲೇಜಿನಿಂದ ಹೊರಟುಬಿಟ್ಟ. ಮೇ 12ರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಆತ ಮೃತಪಟ್ಟಿರುವುದು ಬೆಳಕಿಗೆ ಬಂತು~ ಎಂದು ನಾಗರ್ಜುನ ಕಾಲೇಜು ಪ್ರಾಂಶುಪಾಲ ಡಾ. ಎಸ್.ಜಿ.ಗೋಪಾಲಕೃಷ್ಣ`ಪ್ರಜಾವಾಣಿ~ಗೆ ತಿಳಿಸಿದರು.

`ಪೋಷಕರಿಗೊಂದು ಮತ್ತು ಪೊಲೀಸರಿಗೊಂದು ಪ್ರತ್ಯೇಕ ಪತ್ರ ಬರೆದಿರುವ ಅಲೋಕ್ ತುಂಬ ನೊಂದುಕೊಂಡಿರುವ ಬಗ್ಗೆ ಮಾತ್ರ ಹೇಳಿಕೊಂಡಿದ್ದಾನೆ ಹೊರತು ಆತ್ಮಹತ್ಯೆಯ ಬಗ್ಗೆ ಪ್ರಸ್ತಾಪಿಸಿಲ್ಲ. ಕಾಲೇಜಿನ ಆಡಳಿತ ಮಂಡಳಿ ಮತ್ತು ಹಲ್ಲೆ ಮಾಡಲೆತ್ನಿಸಿದವರ ಬಗ್ಗೆ ಪತ್ರದಲ್ಲಿ ಬೇಸರ ವ್ಯಕ್ತಪಡಿಸಿದ್ದಾನೆ.

ದೇವನಹಳ್ಳಿ ತಾಲ್ಲೂಕಿನ ಆವತಿ ಗ್ರಾಮ ಸಮೀಪದ ಅತ್ತಿಬೆಲೆಯ ರೈಲ್ವೆ ಹಳಿ ಬಳಿ ಆತನ ಶವವು ಅಸಹಜ ಸ್ಥಿತಿಯಲ್ಲಿ ಕಂಡು ಬಂದಾಗ ಒಂದೊಂದೇ ವಿಷಯವು ಬೆಳಕಿಗೆ ಬಂತು. ಆದರೆ, ಆತ ಕೊಲೆಯಾಗಿದ್ದಾನೆಯೇ ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೇ ಎಂಬುದು ಶವದ ಮರಣೋತ್ತರ ಪರೀಕ್ಷಾ ವರದಿಯಿಂದ ಮಾತ್ರ ತಿಳಿಯಲು ಸಾಧ್ಯ~ ಎಂದು ಪೊಲೀಸರು ತಿಳಿಸಿದ್ದಾರೆ.

`ಅಲೋಕ್ ಮೃತಪಟ್ಟ ವಿಷಯ ತಿಳಿದು ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಮೇ 12ರಂದು ಕಾಲೇಜು ಎದುರಿನ ರಾಷ್ಟ್ರೀಯ ಹೆದ್ದಾರಿ-7ರಲ್ಲಿ ಒಂದು ಗಂಟೆ ಕಾಲ ರಸ್ತೆ ತಡೆಯನ್ನು ನಡೆಸಿದ್ದರು. ಅಲೋಕ್ ಸ್ನೇಹ ಬೆಳೆಸಿಕೊಂಡಿದ್ದ ಯುವತಿಯನ್ನು ತಮ್ಮ ಎದುರಿಗೆ ಹಾಜರುಪಡಿಸಬೇಕು, ಕಾಲೇಜು ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಸಾವಿನ ಕುರಿತು ಸಮಗ್ರ ತನಿಖೆಯಾಗಬೇಕೆಂದು ಒತ್ತಾಯಿಸಿದ್ದರು.

ರಸ್ತೆ ತಡೆಯಾದ ಹಿನ್ನೆಲೆಯಲ್ಲಿ ಅಲ್ಲಿನ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳ ನಡುವೆ ಘರ್ಷಣೆ ಆಗಿತ್ತು. ನಂತರ ನಾವೇ ಮಧ್ಯೆಪ್ರವೇಶಿಸಿ, ಪರಿಸ್ಥಿತಿ ತಿಳಿಗೊಳಿಸಿದೆವು~ ಎಂದು ಅವರು ಹೇಳಿದರು.

ನಾಲ್ಕು ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ!!
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲ್ಲೂಕಿನ ಬೀಡಗಾನಹಳ್ಳಿ ಮತ್ತು ದೇವನಹಳ್ಳಿ ತಾಲ್ಲೂಕಿನ ಗಡಿಭಾಗದಲ್ಲಿರುವ ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜು ಆವರಣವು ಒಟ್ಟಾರೆ ಮೂರು ಪೊಲೀಸ್ ಠಾಣೆಗಳ ವ್ಯಾಪ್ತಿಗೆ ಸೇರುತ್ತದೆ. ಕಾಲೇಜಿನ ಮುಂಭಾಗವು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ, ಎಡಭಾಗವು ದೇವನಹಳ್ಳಿ ಠಾಣೆ ಮತ್ತು ಹಿಂಭಾಗವು ವಿಜಯಪುರ ಠಾಣೆ ವ್ಯಾಪ್ತಿಗೆ ಸೇರುತ್ತದೆ. ಅಲೋಕ್ ಮೃತಪಟ್ಟಿರುವ ವಿಷಯ ಬೆಳಕಿಗೆ ಬಂದಾಗ ಮೂರೂ ಠಾಣೆಗಳ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾಲೇಜು ಆವರಣಕ್ಕೆ ಧಾವಿಸಿದ್ದರು.

`ಕಾಲೇಜು ವ್ಯಾಪ್ತಿಯಲ್ಲಿ ಅಹಿತಕರ ಘಟನೆ ಸಂಭವಿಸಿದರೆ, ಮೂರು ಠಾಣೆಗಳ ಪೈಕಿ ಒಂದು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಾರೆ. ಆದರೆ, ಕಾಲೇಜಿನ ವಿದ್ಯಾರ್ಥಿ ಅಲೋಕ್‌ರಂಜನ್ ಶವ ದೇವನಹಳ್ಳಿ ತಾಲ್ಲೂಕಿನ ಆವತಿ ಗ್ರಾಮದ ಅತ್ತಿಬೆಲೆಯ ರೈಲ್ವೆ ಹಳಿ ಬಳಿ ಪತ್ತೆಯಾಗಿದೆ. ಶವ ಪತ್ತೆಯಾಗಿರುವ ಪ್ರಕರಣವನ್ನು ವಿಜಯಪುರ ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಆದರೆ ಶವವು ರೈಲ್ವೆ ಹಳಿಯ ಮೇಲೆ ಪತ್ತೆಯಾದ ಹಿನ್ನೆಲೆಯಲ್ಲಿ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ~ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT