ADVERTISEMENT

ನಿಮ್ಹಾನ್ಸ್ಗೆ ರಾಷ್ಟ್ರೀಯ ಮಾನ್ಯತೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2012, 19:10 IST
Last Updated 13 ಆಗಸ್ಟ್ 2012, 19:10 IST

ಮಸೂದೆಗೆ ರಾಜ್ಯಸಭೆ ಅಸ್ತು; ಹೆಚ್ಚಿನ ಸ್ವಾಯತ್ತತೆ

ನವದೆಹಲಿ:
ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಗೆ (ನಿಮ್ಹಾನ್ಸ್) ರಾಷ್ಟ್ರೀಯ ಮಾನ್ಯತೆ ಮತ್ತು ಹೆಚ್ಚಿನ ಸ್ವಾಯತ್ತತೆ ನೀಡುವ ಮಸೂದೆಗೆ ರಾಜ್ಯಸಭೆ ಸೋಮವಾರ ಅಂಗೀಕಾರ ನೀಡಿದೆ.

 `ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ, ಬೆಂಗಳೂರು ಮಸೂದೆ- 2010~ರಲ್ಲಿ  ಹೆಚ್ಚಿನ ಸ್ವಾಯತ್ತತೆ ಕಲ್ಪಿಸಲಾಗಿದೆ. ಪಠ್ಯಕ್ರಮ ರೂಪಿಸುವುದು, ಪದವಿ ಪ್ರದಾನ, ಹೊಸ ಕೋರ್ಸ್ ಆರಂಭ, ಸೀಟು ಸಂಖ್ಯೆ ಹೆಚ್ಚಳ ಮತ್ತು ಸಿಬ್ಬಂದಿ ನೇಮಕಾತಿಯನ್ನು `ನಿಮ್ಹಾನ್ಸ್~ ನೇರವಾಗಿ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ಭಾರತೀಯ ವೈದ್ಯಕೀಯ ಮಂಡಳಿಯ ಅನುಮತಿ ಪಡೆಯುವ ಅಗತ್ಯ ಇರುವುದಿಲ್ಲ.

ಈ ಮಸೂದೆಯ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಗುಲಾಂ ನಬಿ ಆಜಾದ್, ` ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್)ಯಂತೆ `ನಿಮ್ಹಾನ್ಸ್‌ಗೆ~ ಸ್ವಾಯತ್ತತೆ ಇರುತ್ತದೆ. ಪದವಿ ಪ್ರದಾನ, ಆಡಳಿತ ನಿರ್ವಹಣೆ ಮತ್ತು ಹಣಕಾಸು ನಿರ್ವಹಣೆಯ ಅಧಿಕಾರವನ್ನು ನೀಡುವ ಮಸೂದೆ ಇದಾಗಿದೆ~ ಎಂದರು.

`ಈ ಸಂಸ್ಥೆಯಲ್ಲಿ ಪ್ರತಿ ವರ್ಷ 4.5 ಲಕ್ಷ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬದವರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. `ನಿಮ್ಹಾನ್ಸ್~ಗೆ ರಾಷ್ಟ್ರೀಯ ಮಾನ್ಯತೆ ದೊರಕಿದ ನಂತರವೂ ಈ ಸೇವೆ ಮುಂದುವರಿಯಲಿದೆ~ ಎಂದರು.

`135 ಎಕರೆಗಳಲ್ಲಿ ಚಾಚಿಕೊಂಡಿರುವ ಈ ಸಂಸ್ಥೆಯಲ್ಲಿ ಹೊಸದಾಗಿ ಹೆಲಿಪ್ಯಾಡ್ ನಿರ್ಮಿಸಲಾಗುವುದು. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ನೇರವಾಗಿ `ನಿಮ್ಹಾನ್ಸ್~ ಆವರಣಕ್ಕೆ ಕರೆತಂದು ಶೀಘ್ರದಲ್ಲಿ ಸೂಕ್ತ ಚಿಕಿತ್ಸೆ ಒದಗಿಸುವ ದೃಷ್ಟಿಯಿಂದ ಈ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗುತ್ತದೆ~ ಎಂದು ಆಜಾದ್ ಹೇಳಿದರು.

`ಸದ್ಯ ಈ ಸಂಸ್ಥೆಯಲ್ಲಿ ಉದ್ಯೋಗದಲ್ಲಿರುವ ಆಡಳಿತ, ಬೋಧಕ ಮತ್ತು ಇತರ ಸಿಬ್ಬಂದಿ ವರ್ಗದವರು ಸೇವೆಯಲ್ಲಿ ಮುಂದುವರಿಯುವರು. ಅಗತ್ಯಕ್ಕೆ ತಕ್ಕಂತೆ ಹೊಸ ನೇಮಕಾತಿಯನ್ನು ಮಾಡಿಕೊಳ್ಳುವ ಅಧಿಕಾರ `ನಿಮ್ಹಾನ್ಸ್~ಗೆ ಇರುತ್ತದೆ~ ಎಂದರು.

`ದೇಶದ ಇತರೆಡೆಯಲ್ಲೂ `ನಿಮ್ಹಾನ್ಸ್~ನಂತಹ ಸಂಸ್ಥೆಗಳ ಅವಶ್ಯಕತೆ ಇದೆ ಎನ್ನುವುದನ್ನು ಒಪ್ಪಿಕೊಳ್ಳುವೆ. ಆದರೆ, ಇದಕ್ಕೆ ಅಗತ್ಯವಿರುವ ತಜ್ಞರ ಕೊರತೆ ತೀವ್ರ ಸ್ವರೂಪದಲ್ಲಿ ಇದೆ. 11,500 ಮನೋವೈದ್ಯರ ಅಗತ್ಯವಿದ್ದು, ಸದ್ಯ 3,500 ಮಂದಿ ಮಾತ್ರ ದೇಶದಲ್ಲಿದ್ದಾರೆ~ ಎಂದರು.

ಈ ಮಸೂದೆಯ ಅನ್ವಯ ನಿಮ್ಹಾನ್ಸ್‌ಗೆ ಆಡಳಿತ ಮಂಡಳಿ ರಚನೆ ಆಗಲಿದ್ದು, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಅಧ್ಯಕ್ಷರಾಗಿರುತ್ತಾರೆ. ಕರ್ನಾಟಕದ ಆರೋಗ್ಯ ಖಾತೆ ಸಚಿವರೂ ಸೇರಿದಂತೆ 21 ಸದಸ್ಯರಿರುತ್ತಾರೆ. ಇದರಲ್ಲಿ ಮೂವರು ಸಂಸತ್ ಸದಸ್ಯರು ಮತ್ತು ವೈದ್ಯಕೀಯ ಕ್ಷೇತ್ರದ ತಜ್ಞರು ಇರುತ್ತಾರೆ.

ರಾಜ್ಯಸಭೆ ಅಂಗೀಕರಿಸಿರುವ ಈ ಮಸೂದೆಯನ್ನು ಲೋಕಸಭೆಯ ಒಪ್ಪಿಗೆಗಾಗಿ ಆ ಸದನದಲ್ಲಿ ಮಂಡಿಸಬೇಕಿದೆ.
ಎಐಐಎಂಎಸ್ ಹೊರತಾಗಿ ಚಂಡೀಗಡದ `ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ~, ಪುದಚೇರಿಯ `ಜವಾಹರಲಾಲ್ ಸ್ನಾತಕೋತ್ತರ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ~ಗಳಿಗೆ ದೇಶದಲ್ಲಿ ರಾಷ್ಟ್ರೀಯ ಮಾನ್ಯತೆ ದೊರಕಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.