ADVERTISEMENT

ನೀರಿನ ಸಮಸ್ಯೆ: ಶಾಶ್ವತ ಪರಿಹಾರಕ್ಕೆ ಹೊಸ ನೀತಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2011, 18:30 IST
Last Updated 9 ಮಾರ್ಚ್ 2011, 18:30 IST

ಬೆಂಗಳೂರು: ಗ್ರಾಮೀಣ ಭಾಗದಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಸದ್ಯದಲ್ಲೇ ಹೊಸ ನೀತಿಯನ್ನು ರೂಪಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ ಶೆಟ್ಟರ್ ಬುಧವಾರ ವಿಧಾನಸಭೆಗೆ ತಿಳಿಸಿದರು.

ಕುಡಿಯುವ ನೀರಿನ ಸಮಸ್ಯೆ ಕುರಿತು ನಿಯಮ 69ರಡಿ ಚರ್ಚೆ ನಡೆಸಿದ ನಂತರ ಅವರು ಮಾತನಾಡಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ತಮ್ಮ ಕ್ಷೇತ್ರಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸೆಳೆದರು.

ಈ ಸಲದ ಬಜೆಟ್‌ನಲ್ಲಿ ಕುಡಿಯುವ ನೀರಿನ ಸಲುವಾಗಿಯೇ 100 ಕೋಟಿ ರೂಪಾಯಿ ಮೀಸಲಿಟ್ಟಿದ್ದು, ಅದನ್ನು ಆದಷ್ಟು ಬೇಗ ಬಿಡುಗಡೆ ಮಾಡಿಸಿ, ಸಮಸ್ಯೆ ಇರುವ ಭಾಗಗಳಿಗೆ ನೀಡಲಾಗುವುದು. ಕುಡಿಯುವ ನೀರಿನ ವಿಚಾರದಲ್ಲಿ ಸರ್ಕಾರ ಗಂಭೀರವಾಗಿದ್ದು, ಎಷ್ಟೇ ಕಷ್ಟವಾದರೂ ಹಣ ನೀಡಲಾಗುವುದು ಎಂದರು. ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ತುರ್ತು ಕ್ರಮ ಕೈಗೊಳ್ಳಲು 151 ಕೋಟಿ ರೂಪಾಯಿಗಳ ಕ್ರಿಯಾಯೋಜನೆ ಸಿದ್ಧಪಡಿಸಿ, ಕೇಂದ್ರ ಸರ್ಕಾರಕ್ಕೆ ರವಾನಿಸಲಾಗಿದೆ ಎಂದು ಹೇಳಿದರು.

ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ವಿತರಣೆಗೆ ಸಂಬಂಧಿಸಿದಂತೆ ಪ್ರತ್ಯೇಕ ವಿಭಾಗ ಸ್ಥಾಪಿಸಿದ್ದು, ಅದಕ್ಕೆ ಎಂಜಿನಿಯರ್‌ಗಳು ಸೇರಿದಂತೆ ಇತರ  ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಕೇಂದ್ರ ಸರ್ಕಾರದ ಸಲಹೆ ಮೇರೆಗೆ ಈ ಕೆಲಸ ಮಾಡಿದ್ದು ಇದರಿಂದ ಮುಂದಿನ ದಿನಗಳಲ್ಲಿ ಗ್ರಾಮೀಣ ನೀರು ಸರಬರಾಜು ವ್ಯವಸ್ಥೆ ಸುಧಾರಿಸಲಿದೆ ಎಂದರು.

ಪ್ರತಿ ವರ್ಷ ಕುಡಿಯುವ ನೀರಿನ ಸಲುವಾಗಿಯೇ ರಾಜ್ಯದಲ್ಲಿ 1200 ಕೋಟಿ ರೂಪಾಯಿ ಖರ್ಚು ಮಡುತ್ತಿದ್ದೇವೆ. ಹೀಗಾಗಿ ಅದನ್ನು ಜಿಲ್ಲಾ ಪಂಚಾಯಿತಿಯ ಎಂಜಿನಿಯರಿಂಗ್ ವಿಭಾಗದಿಂದ ಪ್ರತ್ಯೇಕಿಸಿ, ಹೊಸ ವಿಭಾಗ ಮಾಡಲಾಗಿದೆ ಎಂದು ಅವರು ವಿವರಣೆ ನೀಡಿದರು. ಪ್ರತಿಯೊಂದು ಗ್ರಾಮ ಪಂಚಾಯಿತಿಗೂ ಒಬ್ಬ ಕಿರಿಯ ಎಂಜಿನಿಯರ್ ನೇಮಕ ಮಾಡಬೇಕೆನ್ನುವ ಚಿಂತನೆ ಇದ್ದು, ಆ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. ಇವರು ಎಲ್ಲ ರೀತಿಯ ಕಾಮಗಾರಿಗಳ ನೇತೃತ್ವವಹಿಸಲಿದ್ದು, ಇದರಿಂದ ಅನುಕೂಲವಾಗಲಿದೆ ಎಂದರು.

ಇದಕ್ಕೂ ಮುನ್ನ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಕನಿಷ್ಠ ಒಂದು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.