ADVERTISEMENT

ನೂರೊಂದು ಗುಡಿಯ ಊರಲ್ಲಿ ಇವರಿಗೆ ಬಯಲೇ ಆಲಯ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2011, 19:30 IST
Last Updated 27 ಫೆಬ್ರುವರಿ 2011, 19:30 IST

ಗದಗ:  ‘ಒಂದು ತಿಂಗಳಾಯ್ತು ಮನೆ ಬಿದ್ದು. ಬಿದ್ದ ಮನೆಯನ್ನು ಕಟ್ಟಲು ಪ್ರಾರಂಭಿಸುತ್ತಿದ್ದಂತೆಯೇ ದೇವಸ್ಥಾನದ ಡಿಪಾರ್ಟ್‌ಮೆಂಟ್‌ನವರು ಬಂದು ತಡೆದರು. ಇಲ್ಲಿ ನೀವು ಮನೆ ಕಟ್ಟಬಾರದು ಎಂದರು. ನನಗೆಲ್ಲಿದೆ ಜಾಗ. ಅವತ್ತಿನಿಂದಲೂ ಇಲ್ಲೇ ವಾಸ. ಮಳೆಯಾಗಲಿ, ಬಿಸಿಲಾಗಲಿ...’ ಎನ್ನುತ್ತಾ ನಿಟ್ಟುಸಿರು ಬಿಟ್ಟರು 70 ವರ್ಷ ಪ್ರಾಯದ ಶೇಖಪ್ಪ ಅಂದಾನಪ್ಪ ಕುಂಬಾರ.

ಗದುಗಿನಿಂದ 12 ಕಿ.ಮೀ. ದೂರದಲ್ಲಿ ಇರುವ ಐತಿಹಾಸಿಕ ಪಟ್ಟಣ, ನೂರೊಂದು ಗುಡಿ ಇರುವ ಲಕ್ಕುಂಡಿಯಲ್ಲಿ ಕುಂಬಾರ ಸಿದ್ದೇಶ್ವರನ ದೇವಸ್ಥಾನದ ಮಗ್ಗುಲಲ್ಲಿ ಮನೆ ಕಟ್ಟಿಕೊಂಡು 40 ವರ್ಷಗಳಿಂದ ವಾಸ ಮಾಡುತ್ತಿದ್ದ ಶೇಖಪ್ಪ ಕುಂಬಾರ, ಈಗ ಮನೆಯ ಸೂರು ನೆಲಕಚ್ಚಿದ ಮೇಲೆ ಎಲ್ಲೂ ಆಶ್ರಯವಿಲ್ಲದೆ, ದೇವಸ್ಥಾನದ ಬಳಿ ವಾಸ ಮಾಡುತ್ತಿದ್ದಾರೆ.ಹೋದ ವರ್ಷ ಬಿದ್ದ ಭಾರೀ ಮಳೆಗೆ ಶೇಖಪ್ಪ ಕುಂಬಾರ ಅವರ ಮನೆ ಕುಸಿದು ಹೋಗಿತ್ತು. ಆದರೂ ಅದರಲ್ಲೇ ವಾಸ ಮಾಡುತ್ತಿದ್ದರು. ಒಂದೆರಡು ತಿಂಗಳ ಹಿಂದೆ ಪೂರ್ತಿ ಬಿದ್ದು ಹೋಯಿತು. ತಕ್ಷಣ ಅದೇ ಜಾಗದಲ್ಲಿ ಮನೆ ಕಟ್ಟಲು ಪ್ರಾರಂಭಿಸಿದರು. ಸುಮಾರು ಒಂದು ಮೀಟರ್ ಎತ್ತರದ ಗೋಡೆಯನ್ನು ಕಟ್ಟಿದ್ದು ಆಯಿತು.

ಅಷ್ಟರಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳು ಬಂದು ‘ಇದು ದೇವಸ್ಥಾನಕ್ಕೆ ಸೇರಿದ ಜಾಗ. ಇಲ್ಲಿ ಯಾವುದೇ ರೀತಿಯ ಕಟ್ಟಡ ಕಾಮಗಾರಿಗಳು ನಡೆಯಬಾರದು. ಅಲ್ಲದೆ ಇರುವ ಕಟ್ಟಡಗಳ ದುರಸ್ತಿಯನ್ನು ಮಾಡಬಾರದು’ ಎಂದು ಹೇಳಿ ಮನೆ ಕಟ್ಟುವ ಕೆಲಸವನ್ನು ನಿಲ್ಲಿಸಿಬಿಟ್ಟು ಹೋದರು ಎಂದು ಕುಂಬಾರ ಓಣಿಯ ಹಿರಿಯರೊಬ್ಬರು ಘಟನೆಯನ್ನು ವಿವರಿಸಿದರು.

‘ನನಗೆ ಮೂರು ಜನ ಗಂಡು ಮಕ್ಕಳು. ಅವರು ಬೇರೆ ಊರಿನಲ್ಲಿ ವಾಸವಾಗಿದ್ದಾರೆ. ಮುದಿ ಜೀವ ಯಾವ ಕಡೆ ಹೋಗುವುದಕ್ಕೂ ಆಗುವುದಿಲ್ಲ. ಕೆಲಸ ಮಾಡಲೂ ಸಾಧ್ಯವಿಲ್ಲ. ಅಧಿಕಾರಿಗಳು ಮನೆ ಕಟ್ಟಬೇಡ ಎಂದರು. ನಾವೇನು ಮಾಡುವುದಕ್ಕೆ ಆಗುತ್ತದೆ. ಅಳಿದು-ಉಳಿದ ಸಾಮಾನುಗಳನ್ನು ಇಟ್ಟುಕೊಂಡು ಇಲ್ಲೇ ಮಲಗುತ್ತೇನೆ’ ಎಂದರು ಶೇಖಪ್ಪ.ದೇವಸ್ಥಾನದ ಸುತ್ತಲೂ ಸುಮಾರು 18 ಮನೆಗಳು ಇವೆ. ಇವುಗಳಲ್ಲಿ ಗೋಡೆ ಬಿರುಕು ಬಿಟ್ಟರೂ ಅದನ್ನು ಮುಚ್ಚುವ ಹಾಗಿಲ್ಲ. ಪುರಾತತ್ವ ಇಲಾಖೆಯವರು ಜಾಗ ಖಾಲಿ ಮಾಡಿ ಎನ್ನುತ್ತಾರೆ.

ಆದರೆ ನಮಗೆ ಬೇರೆ ಜಾಗವೇ ಇಲ್ಲ. ಪಂಚಾಯ್ತಿಯವರೂ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದಾರೆ. ಇವತ್ತು ನಿವೇಶನ ಮಂಜೂರು ಮಾಡುತ್ತೇವೆ. ನಾಳೆ ಮಾಡುತ್ತೇವೆ ಎಂದು ಹತ್ತಾರೂ ವರ್ಷದಿಂದಲೂ ಸಬೂಬು ಹೇಳಿಕೊಂಡೇ ಬರುತ್ತಿದ್ದಾರೆ.ಯಾರೂ ಕಾರ್ಯಗತ ಮಾಡಿಲ್ಲ.... ಎನ್ನುವುದು ಕುಂಬಾರ ಸಿದ್ಧೇಶ್ವರ ದೇವಸ್ಥಾನದ ಸುತ್ತಮುತ್ತ ಇರುವ ಮನೆಯವರ ಅಳಲು.
ಮಧ್ಯಾಹ್ನ ಸಮೀಪಿಸುತ್ತಿದ್ದರಿಂದ ಆಡುಗೆ ಮಾಡಲು ಉರುವಲು ಸಿದ್ಧಪಡಿಸುವುದಕ್ಕೆ ಪ್ರಾರಂಭಿಸಿದ ಶೇಖಪ್ಪ, ಸರ್ಕಾರ ಕೊಡುತ್ತಿರುವ ನಾಲ್ಕು ನೂರು ರೂಪಾಯಿಯೇ ಆಧಾರ. ಅದು ಬಿಟ್ಟರೆ ಬೇರೆನೂ ಇಲ್ಲ. ನೋಡೋಣ ಜೀವನ ಎಲ್ಲಿವರೆಗೆ ನಡೆಯುತ್ತೆ ಎನ್ನುತ್ತ ತಮ್ಮ ಕೆಲಸದಲ್ಲಿ ತೊಡಗಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.