ADVERTISEMENT

ನೆಮ್ಮದಿ ಕೇಂದ್ರ ಶೀಘ್ರ ರಾಜ್ಯ ಸರ್ಕಾರದ ಸುಪರ್ದಿಗೆ

ಪಿ.ಎಂ.ರಘುನಂದನ್
Published 14 ಆಗಸ್ಟ್ 2012, 19:20 IST
Last Updated 14 ಆಗಸ್ಟ್ 2012, 19:20 IST

ಬೆಂಗಳೂರು: ಜನಸಾಮಾನ್ಯರಿಗೆ ಅಗತ್ಯ ಇರುವ ಪ್ರಮುಖ ದಾಖಲೆಗಳನ್ನು ಒಂದೇ ಸೂರಿನಡಿ ನೀಡುವ ಸಂಬಂಧ ಆರಂಭಗೊಂಡಿರುವ ನೆಮ್ಮದಿ ಕೇಂದ್ರಗಳು (ಟೆಲಿಸೆಂಟರ್ಸ್‌) ಜನರಿಗೆ ಅಗತ್ಯ ಸೇವೆ ಒದಗಿಸುವಲ್ಲಿ ವಿಫಲವಾಗಿರುವ ಕಾರಣದಿಂದ ಸರ್ಕಾರವೇ ಇವುಗಳನ್ನು ತನ್ನ ಸುಪರ್ದಿಗೆ ಪಡೆಯಲು ಚಿಂತನೆ ನಡೆಸಿದೆ.

ಸದ್ಯ, ಕಾರ್ಯ ನಿರ್ವಹಿಸುತ್ತಿರುವ ಕೇಂದ್ರಗಳಲ್ಲಿ ಗುಣಮಟ್ಟದ ಸೇವೆ ಸಿಗುತ್ತಿಲ್ಲ ಎಂಬ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿರುವ ಕಾರಣ, ತನ್ನ ಸಿಬ್ಬಂದಿಯನ್ನೇ ಬಳಸಿಕೊಂಡು ನೆಮ್ಮದಿ ಕೇಂದ್ರಗಳನ್ನು ನಡೆಸಲು ಸರ್ಕಾರ ತಯಾರಿ ನಡೆಸಿದೆ. ಸೆಪ್ಟೆಂಬರ್‌ನಿಂದಲೇ ಈ ಪ್ರಕ್ರಿಯೆ ಆರಂಭವಾಗಲಿದೆ ಎಂದು ಕಂದಾಯ ಇಲಾಖೆ ಮೂಲಗಳು ಹೇಳಿವೆ.

ಸದ್ಯ, ರಾಜ್ಯದಲ್ಲಿ 800 ಕೇಂದ್ರಗಳು ಹಾಗೂ 176 ತಾಲ್ಲೂಕು ಮಟ್ಟದ ಗ್ರಾಮೀಣ ಡಿಜಿಟಲ್ ಸೇವಾ ಕೇಂದ್ರಗಳು (ಆರ್‌ಡಿಎಸ್) ಕಾರ್ಯ ನಿರ್ವಹಿಸುತ್ತಿವೆ. ಹೋಬಳಿ ಮಟ್ಟದಲ್ಲಿ ಜನರು ಸಲ್ಲಿಸುವ ಅರ್ಜಿಗಳನ್ನು ಅಲ್ಲಿ ಪರಿಶೀಲನೆ ಮಾಡಿದ ನಂತರ  ಮುಂದಿನ ಪ್ರಕ್ರಿಯೆಗೆ ಅವುಗಳನ್ನು ಆರ್‌ಡಿಎಸ್‌ಗೆ ಕಳುಹಿಸಿಕೊಡಲಾಗುತ್ತದೆ. ಅರ್ಜಿದಾರರಿಗೆ ಪ್ರಮಾಣ ಪತ್ರ ನೀಡುವ ಮೊದಲು ತಪಾಸಣೆ ಅಗತ್ಯ ಇರುವ ಕಾರಣದಿಂದ ಕಂದಾಯ ಅಥವಾ ಗ್ರಾಮ ಲೆಕ್ಕಿಗರಿಗೆ ಈ ಅರ್ಜಿಗಳನ್ನು ವರ್ಗಾಯಿಸಲಾಗುತ್ತದೆ. ಸೂಕ್ತ ತಪಾಸಣೆ ಬಳಿಕ ದಾಖಲೆಗಳನ್ನು ಕಂಪ್ಯೂಟರ್‌ನಲ್ಲಿ ಅಪ್‌ಲೋಡ್ ಮಾಡಿ, ಸಂಬಂಧಿತ ಪ್ರಮಾಣ ಪತ್ರ ನೀಡಲಾಗುತ್ತದೆ.

ಆದರೆ, ಈ ಸೇವೆಯ ಗುಣಮಟ್ಟದ ಬಗ್ಗೆ ಬಹಳಷ್ಟು ದೂರುಗಳು ದಾಖಲಾಗಿವೆ. ಐ.ಟಿ ಕಂಪೆನಿ ಸರಿಯಾದ ಸೇವೆ ಒದಗಿಸುತ್ತಿಲ್ಲ. ಇದರಿಂದ ಜನಸಾಮಾನ್ಯರಿಗೆ ತೊಂದರೆ ಆಗಿದೆ ಎಂದು ಜನಪ್ರತಿನಿಧಿಗಳೂ ದೂರು ಸಲ್ಲಿಸಿದ್ದಾರೆ. ಆದ ಕಾರಣ, ಸರ್ಕಾರ ತಾನೇ ಉಸ್ತುವಾರಿ ವಹಿಸಿಕೊಳ್ಳಲು ಚಿಂತನೆ ನಡೆಸಿದೆ ಎಂದು ಕಂದಾಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ಮುಂದೆ ಹೇಗೆ?: `ಅರ್ಜಿಗಳನ್ನು ಪರಿಶೀಲನೆ ಮಾಡುವ ಕೆಲಸವನ್ನು ಉಪತಹಶೀಲ್ದಾರ್ ಅವರಿಗೆ ವಹಿಸಲಾಗುವುದು. ಅಗತ್ಯ ಬಿದ್ದಲ್ಲಿ ಮಾತ್ರ ಅವುಗಳನ್ನು ತಾಲ್ಲೂಕು ಕಚೇರಿಗಳಿಗೆ ಕಳುಹಿಸಲಾಗುವುದು. ಅಲ್ಲಿ ತಹಶೀಲ್ದಾರರು ಇದನ್ನು ಪರಿಶೀಲನೆ ಮಾಡುತ್ತಾರೆ. ಇಲಾಖೆಯೇ ಅಭಿವೃದ್ಧಿಪಡಿಸಿದ ಸಾಫ್ಟ್‌ವೇರ್ ಮೂಲಕ ದಾಖಲೆಗಳನ್ನು ಜನರಿಗೆ ನೀಡಲಾಗುವುದು~ ಎಂದು ಈ ಅಧಿಕಾರಿ ಹೇಳಿದರು.

`ಈ ಕಾರ್ಯಕ್ಕಾಗಿ ಕಂದಾಯ ಇಲಾಖೆಯನ್ನು ಇನ್ನಷ್ಟು ಬಲಗೊಳಿಸುವ ಅಗತ್ಯ ಇದೆ. 90 ಕೋಟಿ ರೂಪಾಯಿ ವೆಚ್ಚ ಮಾಡಿ ಕಟ್ಟಡ, ಕಂಪ್ಯೂಟರ್ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಒದಗಿಸಲು ಯೋಚನೆ ಇದೆ~ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಏನಿದು ಕೇಂದ್ರ

ಜಾತಿ ಪ್ರಮಾಣ ಪತ್ರ, ಆದಾಯ, ವಾಸಸ್ಥಳ,  ಜನನ- ಮರಣ ಪ್ರಮಾಣ ಪತ್ರ ಹೀಗೆ 38 ರೀತಿಯ ವಿವಿಧ ಪ್ರಮಾಣ ಪತ್ರಗಳು ಒಂದೆಡೆ ಸಿಗಲು ಅನುಕೂಲ ಆಗುವ ನಿಟ್ಟಿನಲ್ಲಿ ಸರ್ಕಾರ ನೆಮ್ಮದಿ ಕೇಂದ್ರ  ಆರಂಭಿಸಿದೆ.

ಕೇವಲ 15 ರೂಪಾಯಿ ಪಡೆದು ಸಾರ್ವಜನಿಕರಿಗೆ ಬೇಕಾದ ದಾಖಲೆಗಳನ್ನು ಒದಗಿಸುವುದು ಈ ಕೇಂದ್ರದ ಉದ್ದೇಶ. ಮೈಸೂರಿನ `ಐ.ಟಿ ಸಲ್ಯೂಷನ್ಸ್~ ಎಂಬ ಖಾಸಗಿ ಕಂಪೆನಿಗೆ ಈ ಕೇಂದ್ರಗಳ ಉಸ್ತುವಾರಿ ವಹಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.