ADVERTISEMENT

ನೆರವು ನೀಡಲು ಕೇಂದ್ರ ಸಿದ್ಧ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2013, 19:59 IST
Last Updated 17 ಏಪ್ರಿಲ್ 2013, 19:59 IST

ನವದೆಹಲಿ: `ಕರ್ನಾಟಕ ಸರ್ಕಾರದ ಜೊತೆಗೆ ನಿರಂತರ ಸಂಪರ್ಕದಲ್ಲಿ ಇದ್ದೇವೆ ಮತ್ತು ರಾಜ್ಯ ಅಪೇಕ್ಷಿಸುವ ಯಾವುದೇ ರೀತಿಯ ನೆರವು ನೀಡಲು ನಾವು ಸಿದ್ಧ' ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಆರ್‌ಪಿಎನ್ ಸಿಂಗ್ ಬುಧವಾರ ತಿಳಿಸಿದರು.

`ಸ್ಫೋಟಕ್ಕೆ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಬಳಕೆ ಮಾಡಿರುವ ಸಾಧ್ಯತೆ ಇದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. ಆದ ಕಾರಣ ಇದು ಭಯೋತ್ಪಾದಕರ ಕೃತ್ಯ ಎಂದೇ ಮೇಲ್ನೋಟಕ್ಕೆ ತೋರುತ್ತದೆ. ಆದರೂ ಸ್ಫೋಟದ ರೀತಿ ಮತ್ತು ಸ್ಫೋಟಕ ಸಾಮಗ್ರಿ ಬಳಕೆ ಬಗ್ಗೆ ನಿಖರವಾದ ಮಾಹಿತಿ ಸದ್ಯಕ್ಕೆ ಇಲ್ಲ' ಎಂದು ಅವರು `ನಾರ್ತ್ ಬ್ಲಾಕ್'ನಲ್ಲಿ ಸುದ್ದಿಗಾರರಿಗೆ ಹೇಳಿದರು.

`ಘಟನೆ ಕುರಿತು ಕೂಲಂಕಷ ತನಿಖೆ ನಡೆಸಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯದ ತಂಡಗಳು ಬೆಂಗಳೂರಿಗೆ ಹೋಗಿವೆ' ಎಂದ ಅವರು, `ಜನರು ಶಾಂತಿ ಕಾಪಾಡಬೇಕು. ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡಬಾರದು. ಕಿಡಿಗೇಡಿಗಳ ಪ್ರಚೋದನೆಗೆ ಒಳಗಾಗಬಾರದು. ರಾಷ್ಟ್ರದ ಏಕತೆಯನ್ನು ಕಾಪಾಡಲು ರಾಜಕೀಯ ಪಕ್ಷಗಳು ಪರಸ್ಪರ ಸಹಕಾರದಿಂದ ಇರಬೇಕು' ಎಂದೂ ಕೋರಿದರು.

ದೆಹಲಿಯಲ್ಲಿ ಕಟ್ಟೆಚ್ಚರ: ಬೆಂಗಳೂರಿನಲ್ಲಿ ಸ್ಫೋಟ ಸಂಭವಿಸಿರುವ ಹಿನ್ನೆಲೆಯಲ್ಲಿ ರಾಜಧಾನಿ ನವದೆಹಲಿಯಲ್ಲಿ ಕಟ್ಟೆಚ್ಚರದಿಂದ ಇರಲು ಪೋಲಿಸರಿಗೆ ಸೂಚಿಸಲಾಗಿದೆ. ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿ ನಗರದಲ್ಲಿ ವಹಾನಗಳ ತಪಾಸಣೆ ಮಾಡಲಾಗುತ್ತಿದೆ. ಜನ ನಿಬಿಡ ಸ್ಥಳಗಳಲ್ಲಿ ತೀವ್ರ ನಿಗಾ ಇರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.