ADVERTISEMENT

`ನೆಲದ ಭಾಷೆಗೆ ಆರ್‌ಟಿಇ ಮಾರಕ'

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2013, 19:59 IST
Last Updated 18 ಫೆಬ್ರುವರಿ 2013, 19:59 IST
ಪಾಪು
ಪಾಪು   

ಧಾರವಾಡ: ಸರ್ಕಾರ ಜಾರಿಗೆ ತಂದ ಶಿಕ್ಷಣ ಪಡೆಯುವ ಹಕ್ಕು ಕಾಯ್ದೆಯು (ಆರ್‌ಟಿಇ) ಪ್ರಾದೇಶಿಕ ಭಾಷೆಗಳಿಗೆ ಮಾರಕವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಹಿರಿಯ ಪತ್ರಕರ್ತ ಡಾ.ಪಾಟೀಲ ಪುಟ್ಟಪ್ಪ ಅವರು, ಇದರ ವಿರುದ್ಧ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಧ್ವನಿ ಎತ್ತಬೇಕು ಎಂದು ಆಗ್ರಹಿಸಿದ್ದಾರೆ.

ಕನ್ನಡ ಭಾಷೆ, ಪ್ರಾಥಮಿಕ ಶಾಲೆಯ ಹಂತದಲ್ಲಿಯೂ ಸತ್ತು ಹೋಗುವ ಸ್ಥಿತಿಯನ್ನೇ ತಂದುಕೊಂಡರೆ ಅದು ಬದುಕುವ ಬಗೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ರಾಜ್ಯದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಿಗೆ ಪತ್ರ ಬರೆದಿರುವ ಅವರು, `ಭಾರತದಲ್ಲಿ ಭಾಷಾನ್ವಯ ರಾಜ್ಯಗಳು ನಿರ್ಮಾಣಗೊಳ್ಳಬೇಕಾದ ಉದ್ದೇಶ ಏನಿದ್ದಿತೆನ್ನುವ ಸಂಗತಿಯನ್ನೇ ಮರೆತು ಭಾರತ ಸರ್ಕಾರವು ದೇಶೀಯ ಭಾಷೆಗಳಿಗೆ ಕುಠಾರಪ್ರಾಯವೆನಿಸಿದ ಶಿಕ್ಷಣ ಪಡೆಯುವ ಹಕ್ಕು ಎನ್ನುವ ಕಾನೂನನ್ನು, ಅದರ ಪೂರ್ವಾಪರವನ್ನು ಯೋಚಿಸದೇ ಜಾರಿಗೆ ತಂದಿದೆ. ಭಾರತದಲ್ಲಿ ಜನ್ಮವೆತ್ತಿದ ಪ್ರತಿಯೊಂದು ಮಗುವೂ ಶಿಕ್ಷಣ ಪಡೆಯುವ ಹಕ್ಕನ್ನು ಪಡೆದಿರುವುದು ನ್ಯಾಯವೇ ಆಗಿದೆ.

ಆದರೆ, ಮಗುವಿನ ಓದು, ಮಾತೃಭಾಷೆಯಲ್ಲಿ ಇಲ್ಲವೇ ಪ್ರಾದೇಶಿಕ ಭಾಷೆಯಲ್ಲಿ ನಡೆಯಬೇಕೆಂದಿಲ್ಲ. ಆ ಮಗುವನ್ನು, ಅದರ ತಂದೆ-ತಾಯಿಗಳು ತಮಗೆ ಬೇಕೆನಿಸಿದ ಭಾಷೆಯಲ್ಲಿ ಓದಿಸಬಹುದು. ಇದರಿಂದ, ಮಾತೃಭಾಷೆಯಲ್ಲಿ ಇಲ್ಲವೇ ಪ್ರಾದೇಶಿಕ ಭಾಷೆಯಲ್ಲಿ ಮಗುವಿನ ಶಿಕ್ಷಣ ನಡೆಯಬೇಕೆನ್ನುವ ಸೂತ್ರಕ್ಕೆ ಯಾವ ಬೆಲೆಯೂ ಇರುವುದಿಲ್ಲ. ಮಾತೃ ಭಾಷೆಯನ್ನು, ಪ್ರಾದೇಶಿಕ ಭಾಷೆಯನ್ನು ತಳ್ಳಿಕೊಂಡು ಇಂಗ್ಲಿಷ್ ಭಾಷೆ ಬರುತ್ತದೆ' ಎಂದು ಪಾಪು ತಿಳಿಸಿದ್ದಾರೆ.

`ಸುಪ್ರೀಂ ಕೋರ್ಟ್ ಮಕ್ಕಳ ಶಿಕ್ಷಣ ಮಾಧ್ಯಮ ಏನಿರಬೇಕೆಂಬ ಬಗೆಗೆ ನ್ಯಾಯ ನಿರ್ಣಯ ಕೊಡುವ ಅಧಿಕಾರವನ್ನು ಹೊಂದಿಲ್ಲ. ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ನಮ್ಮ ಪ್ರತಿಷ್ಠಿತರು, ಮಗುವಿನ ಶಿಕ್ಷಣದ ಹಕ್ಕು ಕಾನೂನಿನ ಬಗೆಗೆ, ದೇಶದ ಇನ್ನುಳಿದ ಎಲ್ಲ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರನ್ನು ಕೂಡಿಕೊಂಡು ಪ್ರಧಾನ ಮಂತ್ರಿಗಳನ್ನು ಕಂಡು, ಈ ಶಿಕ್ಷಣ ಹಕ್ಕಿನ ಗಂಡಾಂತರ ಸ್ವರೂಪವನ್ನು ಅವರ ಮನಸ್ಸಿನ ಮೇಲೆ ಬಿಂಬಿಸಬೇಕು.

ಇದಕ್ಕೋಸುಗ ಅವರು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನಾ ಆಂದೋಲನ ನಡೆಸಿ ದೇಶದ ಎಲ್ಲ ಭಾಷಾ ಬಂಧುಗಳ ಗಮನ ಸೆಳೆಯಬೇಕು. ಸಾವಿರಾರು ವರ್ಷಗಳಿಂದ ಭಾರತದ ಸಂಸ್ಕೃತಿ ಸಂವರ್ಧನ ಮಾಡಿದ ದೇಶಿಯ ಭಾಷೆಗಳು ಭಾರತ ಸರ್ಕಾರದ ವಿವೇಚನಾ ರಹಿತ ಶಿಕ್ಷಣದ ಹಕ್ಕು ಕಾನೂನಿನ ಕಾರಣದಿಂದ ಅವಸಾನದ ಸ್ಥಿತಿಯನ್ನು ಕಾಣಬಾರದು' ಎಂದು ಪಾಪು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.