ಬೆಂಗಳೂರು: ರೈಲ್ವೆ ಸಚಿವ ದಿನೇಶ್ ತ್ರಿವೇದಿ ಅವರು ಬುಧವಾರ ಮಂಡಿಸಿದ ರೈಲ್ವೆ ಬಜೆಟ್ ಕರ್ನಾಟಕದ ಪಾಲಿಗೆ ನಿರಾಶಾದಾಯಕವಾಗಿದ್ದು, ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕಕ್ಕೆ ನ್ಯಾಯ ದೊರೆತಿಲ್ಲ ಎಂದು ಮುಖ್ಯ ಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಪ್ರತಿಕ್ರಿಯಿಸಿದ್ದಾರೆ.
ರೈಲ್ವೆ ಯೋಜನೆಗಳ ಶೇಕಡ 50ರಷ್ಟು ವೆಚ್ಚ ಭರಿಸಲು ಮುಂದಾದ ಮೊದಲ ರಾಜ್ಯ ಕರ್ನಾಟಕ. ಈ ಕಾರಣಕ್ಕಾಗಿ ರೈಲ್ವೆ ಬಜೆಟ್‌ನಲ್ಲಿ ರಾಜ್ಯಕ್ಕೆ ಆದ್ಯತೆ ದೊರೆಯಬೇಕಿತ್ತು. ಬಜೆಟ್‌ಗೂ ಮುನ್ನ ರೈಲ್ವೆ ಸಚಿವರು ನಡೆಸಿದ ಸಭೆಯಲ್ಲಿ ನೀಡಿದ್ದ ಭರವಸೆಗಳನ್ನೂ ಪೂರ್ಣವಾಗಿ ಈಡೇರಿಸಿಲ್ಲ. ರಾಜ್ಯದಲ್ಲಿ ಏಳು ಹೊಸ ರೈಲ್ವೆ ಯೋಜನೆಗಳು ಮತ್ತು 18 ಹೊಸ ರೈಲುಗಳ ಸಂಚಾರ ಆರಂಭಿಸಬೇಕಿರುವ ಬಗ್ಗೆ ಪತ್ರದ ಮೂಲಕ ಗಮನ ಸೆಳೆಯಲಾಗಿತ್ತು. ಆದರೆ, ಸರಿಯಾದ ಸ್ಪಂದನೆ ದೊರೆತಿಲ್ಲ ಎಂದು ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವೇ ಸಂಪೂರ್ಣ ವೆಚ್ಚವನ್ನೂ ಭರಿಸುವ ಯಾವುದೇ ಯೋಜನೆಯನ್ನೂ ರಾಜ್ಯಕ್ಕೆ ನೀಡಿಲ್ಲ. ರಾಜ್ಯಕ್ಕೆ ಹತ್ತು ಯೋಜನೆಗಳನ್ನು ಮಂಜೂರು ಮಾಡುವಂತೆ ಮನವಿ ಮಾಡಲಾಗಿತ್ತು. ಆದರೆ ಶೇ 50ರ ವೆಚ್ಚ ಹಂಚಿಕೆ ಆಧಾರದಲ್ಲಿ ಕೇವಲ ಐದು ಯೋಜನೆಗಳನ್ನು ಮಂಜೂರು ಮಾಡಲಾಗಿದೆ. ಬೆಂಗಳೂರು ನಗರದಲ್ಲಿ, ಮಂಗಳೂರು- ಸುಬ್ರಹ್ಮಣ್ಯ ನಡುವೆ ಪ್ರಯಾಣಿಕರ ರೈಲು ಸಂಚಾರ ಆರಂಭಿಸಬೇಕೆಂಬ ಬೇಡಿಕೆಯನ್ನೂ ಈಡೇರಿಸಿಲ್ಲ ಎಂದು ಸದಾನಂದ ಗೌಡ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಎರಡು ರೈಲ್ವೆ ಬೋಗಿ ಉತ್ಪಾದನಾ ಘಟಕ ಪ್ರಾರಂಭಿಸುವ ಘೋಷಣೆ ಬಜೆಟ್‌ನಲ್ಲಿದೆ. ಈ ಪೈಕಿ ಒಂದು ಕೋಲಾರದಲ್ಲಿ ಆರಂಭವಾಗಲಿದೆ. ಮತ್ತೊಂದು ಗುಜರಾತ್‌ನ ಕಛ್‌ನಲ್ಲಿ ಅಸ್ತಿತ್ವಕ್ಕೆ ಬರಲಿದೆ. ಕಛ್ ಘಟಕಕ್ಕೆ ಪೂರ್ಣ ವೆಚ್ಚವನ್ನು ಕೇಂದ್ರವೇ ಭರಿಸಲಿದೆ. ಆದರೆ, ಕೋಲಾರ ಘಟಕ ಪ್ರಾರಂಭಿಸಲು ರಾಜ್ಯ ಸರ್ಕಾರವೂ ವೆಚ್ಚ ಭರಿಸಬೇಕು ಎಂಬ ನಿರೀಕ್ಷೆಯನ್ನು ಕೇಂದ್ರ ಸರ್ಕಾರ ಹೊಂದಿದೆ. ಕೆಲವು ಮಾರ್ಗಗಳನ್ನು ಜೋಡಿ ಮಾರ್ಗಗಳಾಗಿ ಮೇಲ್ದರ್ಜೆಗೇರಿಸಬೇಕೆಂಬ ಬೇಡಿಕೆಗೂ ಸ್ಪಂದನೆ ದೊರೆತಿಲ್ಲ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.