ADVERTISEMENT

`ನ್ಯಾಯ ಸಿಗದಿದ್ದರೆ ಆಮರಣಾಂತ ಉಪವಾಸ'

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2012, 22:00 IST
Last Updated 7 ಡಿಸೆಂಬರ್ 2012, 22:00 IST

ಬೆಂಗಳೂರು:   ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯಕ್ಕೆ ನ್ಯಾಯ ಸಿಗದಿದ್ದರೆ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಶುಕ್ರವಾರ ಇಲ್ಲಿ ಘೋಷಿಸಿದರು.

`ಪ್ರಧಾನಿ ಡಾ.ಮನಮೋಹನಸಿಂಗ್, ಕೇಂದ್ರ ಜಲಸಂಪನ್ಮೂಲ ಸಚಿವ ಹರೀಶ್ ರಾವತ್ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿನ ವಸ್ತುಸ್ಥಿತಿಯನ್ನು ವಿವರಿಸಲು ಪ್ರಯತ್ನಿಸುತ್ತೇನೆ. ಲೋಕಸಭೆಯಲ್ಲೂ ಈ ವಿಷಯ ಪ್ರಸ್ತಾಪಿಸಲು ಬಯಸಿದ್ದೇನೆ. ಆದರೆ, ಅದಕ್ಕೆ ಅವಕಾಶ ಸಿಗದೆ ಹೋದರೆ ಅಂತಿಮವಾಗಿ ಅಹಿಂಸಾತ್ಮಕ ಹೋರಾಟ ಆರಂಭಿಸುತ್ತೇನೆ' ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

  ಕಾವೇರಿ ನದಿ ನೀರಿನ ವಿಚಾರದ ಬಗ್ಗೆ ಮಾತನಾಡಲು ಅನುಮತಿ ಕೋರಿ ಲೋಕಸಭೆಯ ಸ್ಪೀಕರ್ ಅವರಿಗೆ ಈ ಹಿಂದೆ ನಾಲ್ಕು ಬಾರಿ ನೋಟಿಸ್ ನೀಡಿದ್ದೆ. ಒಮ್ಮೆ ಮಾತನಾಡಲು ಅವಕಾಶ ದೊರೆತಿತ್ತು. ಆದರೆ, ತಮಿಳುನಾಡಿನ ಸಂಸದರು ಒಟ್ಟಾಗಿ ಸಭಾಧ್ಯಕ್ಷರ ಪೀಠದ ಮುಂಭಾಗ ಧರಣಿ ನಡೆಸುವ ಮೂಲಕ ಅಡ್ಡಿಪಡಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.

`ತಮಿಳುನಾಡು ಸಂಸದರು ಸದನದಲ್ಲಿ ಮಾತನಾಡಲು ಅವಕಾಶ ನೀಡದೆ ನಮ್ಮ ಕುತ್ತಿಗೆ ಹಿಡಿಯುತ್ತಾರೆ. ಈ ರೀತಿಯ ವರ್ತನೆ ಸರಿಯಲ್ಲ. ಜನಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಲು ಅವಕಾಶವನ್ನೇ ನೀಡದಿದ್ದರೆ ನಮ್ಮ ನೋವನ್ನು ಎಲ್ಲಿ ಹೇಳಿಕೊಳ್ಳಬೇಕು' ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸೋಮವಾರ ಅಥವಾ ಮಂಗಳವಾರ ಪ್ರಧಾನಿ ಅವರನ್ನು ಭೇಟಿ ಮಾಡಿ ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಮನವರಿಕೆ ಮಾಡಿಕೊಡಲು ಉದ್ದೇಶಿಸಿದ್ದೇನೆ. ಲೋಕಸಭೆಯಲ್ಲೂ ಪ್ರಸ್ತಾಪಿಸುತ್ತೇನೆ. ಎಲ್ಲಾ ಪ್ರಯತ್ನಗಳು ವಿಫಲವಾದರೆ ಅನ್ಯ ಮಾರ್ಗವಿಲ್ಲದೆ ನಗರದ ಗಾಂಧಿ ಪ್ರತಿಮೆ ಮುಂಭಾಗದ ಸತ್ಯಾಗ್ರಹ ನಡೆಸುವುದಾಗಿ ಹೇಳಿದರು.

ಕಾವೇರಿ ಉಸ್ತುವಾರಿ ಸಮಿತಿ (ಸಿಎಂಸಿ) ಸಭೆಗೂ ಮೊದಲೇ ತಜ್ಞರ ತಂಡವನ್ನು ಎರಡೂ ರಾಜ್ಯಗಳಿಗೆ ಕಳುಹಿಸಿ ವರದಿ ತರಿಸಿಕೊಳ್ಳಬೇಕು ಎಂದು ಒತ್ತಾಯ ಮಾಡಿದ್ದೆ. ಸಮಿತಿಯು ಸಭೆ ಸೇರಿ ವರದಿ ನೀಡುವುದಕ್ಕೂ ಮೊದಲೇ ರಾಜ್ಯ ಸರ್ಕಾರ ತರಾತುರಿಯಲ್ಲಿ ನೀರು ಬಿಟ್ಟಿರುವುದು ಸರಿಯಲ್ಲ. ಸಮಿತಿ ವರದಿ ನೀಡುವವರೆಗೂ ಕಾಯಬೇಕಾಗಿತ್ತು ಎಂದರು.

ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಶುಕ್ರವಾರ ರಾತ್ರಿ ದೂರವಾಣಿ ಕರೆ ಮಾಡಿದಾಗ ಈ ವಿಷಯವನ್ನು ತಿಳಿಸಿದ್ದೆ. ಸಹನೆ, ತಾಳ್ಮೆಗೂ ಮಿತಿ ಇರುತ್ತದೆ. ಕೃಷ್ಣರಾಜಸಾಗರದಲ್ಲಿ ನೀರು ಖಾಲಿಯಾದರೆ, ಮೆಟ್ಟೂರಿನಿಂದ ಬೆಂಗಳೂರಿಗೆ ಕುಡಿಯುವ ನೀರು ತರಲು ಸಾಧ್ಯವೇ? ಎಂದು ಅವರು ಪ್ರಶ್ನಿಸಿದರು.

ತಮಿಳುನಾಡಿಗೆ ನೀರು ಬಿಡಿ ಎಂದು ನಾನು ಹೇಳಿಲ್ಲ. ಈ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ. ಕರ್ನಾಟಕ ಯಾವುದೇ ತಪ್ಪು ಮಾಡದಿದ್ದರೂ ದೆಹಲಿ ಮಟ್ಟದಲ್ಲಿ ನಮ್ಮನ್ನು ಅಪರಾಧಿ ದೃಷ್ಟಿಯಿಂದ ನೋಡಲಾಗುತ್ತಿದೆ. ಇದು ಸರಿಯಲ್ಲ. 1991ರಲ್ಲಿ ಕಾವೇರಿ ನ್ಯಾಯಮಂಡಳಿ ಮಧ್ಯಂತರ ತೀರ್ಪು ಬಂದ ನಂತರ ನಾಲ್ಕು ಬಾರಿ ಮಾತ್ರ ನೀರಿನ ಬಿಕ್ಕಟ್ಟು ಉಂಟಾಗಿದೆ. ಉಳಿದಂತೆ ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿದು ಹೋಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.