ADVERTISEMENT

ನ್ಯಾ. ಬನ್ನೂರಮಠರನ್ನೂ ಬಿಡದ ನಿವೇಶನ ವಿವಾದ !

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2011, 19:30 IST
Last Updated 27 ಅಕ್ಟೋಬರ್ 2011, 19:30 IST

ಬೆಂಗಳೂರು:  ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರು ನಿವೇಶನ ವಿವಾದದ ಸುಳಿಯಲ್ಲಿ ಸಿಲುಕಿ ಲೋಕಾಯುಕ್ತ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಅವರ ಉತ್ತರಾಧಿಕಾರಿಯಾಗಿ ಸರ್ಕಾರದಿಂದ ಶಿಫಾರಸುಗೊಂಡಿರುವ ನ್ಯಾ. ಎಸ್.ಆರ್.ಬನ್ನೂರಮಠ ಅವರು ಕೂಡ ಈಗ ಅದೇ ಬಗೆಯ ವಿವಾದಕ್ಕೆ ಸಿಲುಕುವ ಸಾಧ್ಯತೆಗಳು ಗೋಚರಿಸಿವೆ.

ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆಯ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ಇವರು `ಬೈಲಾ~ ಉಲ್ಲಂಘಿಸಿ ನಿವೇಶನ ಮಂಜೂರು ಮಾಡಿಸಿಕೊಂಡಿರುವ ಅಂಶ ಬೆಳಕಿಗೆ ಬಂದಿದೆ. 6,600 ಚದರ ಅಡಿ ನಿವೇಶನವನ್ನು ಅವರು ಪಡೆದುಕೊಂಡಿರುವ ಕುರಿತು `ಪ್ರಜಾವಾಣಿ~ಗೆ ದಾಖಲೆ ಲಭ್ಯವಾಗಿದೆ. ಇನ್ನೂ ಕುತೂಹಲದ ಅಂಶವೆಂದರೆ, ಈ ಹುದ್ದೆಗೆ ವಿರೋಧ ಪಕ್ಷಗಳಿಂದ ಶಿಫಾರಸುಗೊಂಡಿರುವ ನ್ಯಾಯಮೂರ್ತಿ ಆರ್.ವಿ.ರವೀಂದ್ರನ್ ಅವರು ಕೂಡ ಬೈಲಾ ಉಲ್ಲಂಘನೆ ಮಾಡಿರುವ ದಾಖಲೆಗಳೂ ದೊರೆತಿವೆ.

ನ್ಯಾ.ಬನ್ನೂರಮಠ ಅವರ ಈ ವಿವಾದದ ಕುರಿತು ಪ್ರತಿಕ್ರಿಯೆಗೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರನ್ನು ಪತ್ರಿಕೆ ಸಂಪರ್ಕಿಸಿದಾಗ, `ನನಗೆ ಈ ವಿಷಯ ತಿಳಿದಿಲ್ಲ. ಆರೋಪದ ಸತ್ಯಾಸತ್ಯತೆ ಕುರಿತು ಪರಿಶೀಲನೆ ನಡೆಸುತ್ತೇವೆ. ಸರಿಯಾದ ತನಿಖೆ ನಡೆಸಿದ ನಂತರವೇ ಲೋಕಾಯುಕ್ತರ ನೇಮಕದ ಮುಂದಿನ ಹೆಜ್ಜೆ ಇಡುತ್ತೇವೆ~ ಎಂದರು.

ನಿವೇಶನ ಸೌಲಭ್ಯ:
ದಾಖಲೆಗಳ ಅನ್ವಯ ಬನ್ನೂರಮಠ ಅವರಿಗೆ 2001ರ ಸೆಪ್ಟೆಂಬರ್ 18ರಂದು `2118/ಎ~ ಸಂಖ್ಯೆಯ ನಿವೇಶನ ಮಂಜೂರು ಆಗಿದೆ. ಇದು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ- 1959ಕ್ಕೆ ವಿರುದ್ಧವಾಗಿದೆ. ನಿವೇಶನ ಮಂಜೂರಾತಿ, ಸಂಘದ ಬೈಲಾಗೂ ವ್ಯತಿರಿಕ್ತವಾಗಿದೆ. ಈ ಬೈಲಾದ 10(ಬಿ) ಕಲಮಿನ ಅನ್ವಯ ಕರ್ನಾಟಕದ ನ್ಯಾಯಾಂಗ ಇಲಾಖೆಯಲ್ಲಿ ನಿವೇಶನ ಆಕಾಂಕ್ಷಿಗಳು ಸದಸ್ಯರಾಗಿರಬೇಕು. ಇಲ್ಲದಿದ್ದರೆ ಅವರು ನಿವೇಶನ ಅಥವಾ ಮನೆ ಪಡೆಯಲು ಅರ್ಹರಲ್ಲ.

ಆದರೆ ಸಂವಿಧಾನದ 124(2) ಮತ್ತು 127ನೇ ವಿಧಿಯ ಪ್ರಕಾರ ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್ ನ್ಯಾಯಮೂರ್ತಿಗಳು ನ್ಯಾಯಾಂಗ ಇಲಾಖೆಗೆ ಸಂಬಂಧಿಸಿದ ಸಂಘಕ್ಕೆ ಸದಸ್ಯರಾಗಲು ಅರ್ಹರಲ್ಲ. ಇದೇ ವಿಷಯವನ್ನು ಸುಪ್ರೀಂಕೋರ್ಟ್ ಪೂರ್ಣಪೀಠವೂ ಸ್ಪಷ್ಟಪಡಿಸಿದೆ. ಇದನ್ನು ಗಣನೆಗೆ ತೆಗೆದುಕೊಂಡರೆ ಸಂಘದಿಂದ ನ್ಯಾ. ಬನ್ನೂರಮಠ ಅವರು ನಿವೇಶನ ಪಡೆದಿರುವುದು ಇವುಗಳ ಉಲ್ಲಂಘನೆ ಆದಂತಾಗಿದೆ.

ನ್ಯಾ.ಬನ್ನೂರಮಠ ಅವರ ನಿವೇಶನ ವಿವಾದದ ಕುರಿತು ಪ್ರತಿಕ್ರಿಯೆ ನೀಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, `ವಿವಾದದ ಕುರಿತು ದಾಖಲೆ ದೊರೆತ ತಕ್ಷಣ ಈ ವಿಷಯವನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರುತ್ತೇವೆ~ ಎಂದರು.

ನ್ಯಾ. ರವೀಂದ್ರನ್ ಅವರು, ನಗರದ ಯಲಹಂಕದ ಬಳಿ 7,623 ಚದರ ಅಡಿಯ ನಿವೇಶನವನ್ನು 2.9 ಲಕ್ಷ ರೂಪಾಯಿಗಳಿಗೆ ಬೈಲಾ ಉಲ್ಲಂಘಿಸಿ ಖರೀದಿ ಮಾಡಿದ್ದಾರೆ. ಬನಶಂಕರಿ ಬಳಿ 75 ಸಾವಿರ ರೂಪಾಯಿಗೆ ಬಿಡಿಎಯಿಂದ 368.49 ಚದರ ಮೀಟರ್ ನಿವೇಶನವನ್ನೂ ಖರೀದಿ ಮಾಡಿದ್ದಾರೆ. ಇವುಗಳ ಜೊತೆ, ಬೆಂಗಳೂರು ಒಂದರಲ್ಲಿಯೇ ಅವರ ಪತ್ನಿ ಹೆಸರಿನಲ್ಲಿ ಆರು ನಿವೇಶನಗಳು ಇವೆ.

ವಿಶೇಷವೆಂದರೆ ಇವರಿಬ್ಬರೂ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಅಧಿಕಾರ ಸ್ವೀಕರಿಸಿದ ಮೇಲೆ 1995ರಲ್ಲಿ ನ್ಯಾಯಾಂಗ ಬಡಾವಣೆಯಲ್ಲಿ ನಿವೇಶನ ಮಂಜೂರು ಮಾಡಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.