ADVERTISEMENT

ಪಂಡಿತ್ ಉಲ್ಲಾಸ್ ಕಶಲ್ಕರ್‌ರಿಗೆ ಮನ್ಸೂರ್ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2011, 19:30 IST
Last Updated 5 ಸೆಪ್ಟೆಂಬರ್ 2011, 19:30 IST

ಬೆಂಗಳೂರು: `ಬೆಂಗಳೂರು ಕಿಡ್ನಿ ಪ್ರತಿಷ್ಠಾನ~ವು (ಬಿಕೆಎಫ್) ನೀಡುವ ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಪ್ರಶಸ್ತಿಗೆ ಕೋಲ್ಕತ್ತಾದ ಐಟಿಸಿ ಸಂಗೀತ ಸಂಶೋಧನಾ ಅಕಾಡೆಮಿಯ ಗುರುಗಳಾದ ಪಂಡಿತ್ ಉಲ್ಲಾಸ್ ಕಶಲ್ಕರ್ ಆಯ್ಕೆಯಾಗಿದ್ದಾರೆ.

`ಪ್ರಶಸ್ತಿಯು 50 ಸಾವಿರ ರೂಪಾಯಿ ನಗದು, ಪ್ರಶಸ್ತಿ ಪತ್ರ ಹಾಗೂ ಮನ್ಸೂರರ ಕಂಚಿನ ಪುತ್ಥಳಿಯನ್ನು ಒಳಗೊಂಡಿರುತ್ತದೆ. ಸೆಪ್ಟೆಂಬರ್ 24 ರಂದು ಸಂಜೆ ಜಯನಗರ 8ನೇ ಬ್ಲಾಕ್‌ನಲ್ಲಿರುವ ಜೆಎಸ್‌ಎಸ್ ಸಭಾಂಗಣದಲ್ಲಿ ನಡೆಯಲಿರುವ ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಸಂಗೀತೋತ್ಸವದಲ್ಲಿ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ~ ಎಂದು ಪ್ರತಿಷ್ಠಾನದ ಗೌರವ ನಿರ್ದೇಶಕ ಎಂ.ವಿ.ಎನ್.ರಾಜ್  ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

`ಬಿಕೆಎಫ್ ಧ್ವನಿ- ಮನ್ಸೂರ್ ಸಂಗೀತೋತ್ಸವ ಸರಣಿಯಲ್ಲಿ ಈ ಬಾರಿಯದು ಎಂಟನೇ ವರ್ಷದ ಕಾರ್ಯಕ್ರಮ. ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಜನ್ಮ ಶತಾಬ್ಧಿ ವರ್ಷದ ಅಂಗವಾಗಿ ಈ ಇದೇ 24 ಮತ್ತು 25ರಂದು ಎರಡು ದಿನಗಳ ಕಾಲ ಸಂಗೀತೋತ್ಸವ ನಡೆಯಲಿದೆ.
 
24ರಂದು ಸಂಜೆ 5.45ಕ್ಕೆ ಸುಗಾತೊ ಬಾದುರಿ ಅವರ ಮ್ಯಾಂಡೊಲಿನ್ ವಾದನದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಸಂಜೆ 7.30ಕ್ಕೆ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಭಾ ಕಾರ್ಯಕ್ರಮದ ನಂತರ ಪಂಡಿತ್ ಉಲ್ಲಾಸ್ ಕಶಲ್ಕರ್ ಗಾಯನ, ಸೆ. 25ರಂದು ಸಂಜೆ 6 ಗಂಟೆಗೆ ಪಂಡಿತ ಗಣಪತಿ ಭಟ್ ಗಾಯನ ಹಾಗೂ ರಾತ್ರಿ 8.10ಕ್ಕೆ ಮಾಲಿನಿ ರಾಜೂರ್ಕರ್ ಗಾಯನ ಕಾರ್ಯಕ್ರಮವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.