ADVERTISEMENT

ಪಡಿತರ ವಿತರಣೆ ಸ್ಥಗಿತದ ಬೆದರಿಕೆ

ಆದೇಶ ವಾಪಸ್‌ ಪಡೆಯಲು ಸರ್ಕಾರಕ್ಕೆ ವಾರದ ಗಡುವು

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2014, 19:30 IST
Last Updated 11 ಮಾರ್ಚ್ 2014, 19:30 IST

ಬೆಂಗಳೂರು: ‘ರಾಜ್ಯದ ಎಲ್ಲ ನ್ಯಾಯಬೆಲೆ ಅಂಗಡಿಗಳು ಬೆಳಿಗ್ಗೆ 8ರಿಂದ ರಾತ್ರಿ 8ರ ವರೆಗೆ ತೆರೆದಿರಬೇಕು ಎಂಬುದೂ  ಸೇರಿದಂತೆ ಸರ್ಕಾರ ಹೊರಡಿಸಿರುವ 10 ಆದೇಶಗಳನ್ನು ವಾರದೊಳಗೆ ವಾಪಸ್‌ ಪಡೆಯಬೇಕು. ಇಲ್ಲದಿದ್ದರೆ ಏಪ್ರಿಲ್‌ ತಿಂಗಳಿನಲ್ಲಿ ಪಡಿತರ ವಿತರಣೆ ಸ್ಥಗಿತ ಮಾಡಲಾಗುವುದು’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ ಎಚ್ಚರಿಸಿದರು.

ಕಬ್ಬನ್‌ ಉದ್ಯಾನದ ಸರ್ಕಾರಿ ನೌಕರರ ಸಭಾಂ­ಗಣದಲ್ಲಿ ಮಂಗಳವಾರ ನಡೆದ ಸಂಘದ ಪದಾಧಿ­ಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ 22,000 ಪಡಿತರ ಅಂಗಡಿಗಳಿವೆ. ಇಲಾಖೆ ಹೊರಡಿಸಿರುವ ಆದೇಶ ಜಾರಿಯಾದರೆ 3,000 ಅಂಗಡಿಗಳು ಮಾತ್ರ ಉಳಿಯಲಿವೆ.
ಪಡಿತರ ವ್ಯವಸ್ಥೆಯಲ್ಲಿ ಅಧಿಕಾರಿಗಳೇ ಭ್ರಷ್ಟಾಚಾರ ನಡೆಸು­ತ್ತಿದ್ದಾರೆ. ಅನಗತ್ಯವಾಗಿ ಅಂಗಡಿ ಮಾಲೀಕರನ್ನು ಬಲಿ­ಪಶು ಮಾಡಲಾಗುತ್ತಿದೆ’ ಎಂದು ಅವರು ದೂರಿದರು.

‘ನ್ಯಾಯಬೆಲೆ ಅಂಗಡಿ ಮಾಲೀಕರ ವಯಸ್ಸು 60 ಮೀರಿರಬಾರದು. ನ್ಯಾಯಬೆಲೆ ಅಂಗಡಿ ಮಾಲೀಕರು ಒಂದು ತಿಂಗಳ ದಾಸ್ತಾನನ್ನು ಮುಂಗಡವಾಗಿ ಪಡೆ­ಯಲು ಅಗತ್ಯ ಸ್ಥಳಾವಕಾಶ ಹೊಂದಿರಬೇಕು.

ಅಂಗಡಿ ಮಾಲೀಕರನ್ನು ಹೊರತುಪಡಿಸಿ ಉಳಿದವರು ಅಂಗಡಿ­ಯಲ್ಲಿ ಕೆಲಸ ಮಾಡಬಾರದು ಎಂಬ ಆದೇಶವನ್ನು ಹೊರಡಿಸಲಾಗಿದೆ. ಇಲಾಖೆ ದಿನಕ್ಕೊಂದು ಆದೇಶ ಹೊರಡಿಸುತ್ತಿದ್ದು, ಅಧಿಕಾರಿಗಳು ಅಂಗಡಿ ಮಾಲೀ­ಕರಿಗೆ ನಿತ್ಯ ಕಿರುಕುಳ ನೀಡುತ್ತಿದ್ದಾರೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

‘ಇಲಾಖೆ ಈಗ ನ್ಯಾಯಬೆಲೆ ಅಂಗಡಿಗಳಿಗೆ 200 ಬಿಪಿಎಲ್‌ ಕಾರ್ಡ್‌ನ ಕಮಿಷನ್ ನೀಡುತ್ತಿದೆ. ಇದರಿಂದ ತಿಂಗಳಿಗೆ ₨ 5,000 ಕಮಿಷನ್‌ ಸಿಗುತ್ತಿದೆ. ಆದರೆ, ಸಿಬ್ಬಂದಿಗೆ ತಿಂಗಳಿಗೆ ₨9,000 ವೇತನ ನೀಡಬೇಕಿದೆ. ಒಟ್ಟು ಖರ್ಚು ₨20,000 ದಾಟುತ್ತದೆ. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ವಿತರಕರು ಇದ್ದಾರೆ’ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಶಿವಪ್ರಸಾದ್‌, ‘ಬಹು ರಾಷ್ಟ್ರೀಯ ಕಂಪೆನಿಗಳಿಗೆ ನೆರವಾಗುವ ಉದ್ದೇಶ­ದಿಂದ ಇಲಾಖೆ ಈ ಆದೇಶ ಹೊರಡಿಸಿದೆ. ಇದೊಂದು ಕರಾಳ ಕಾನೂನು. ಇಂತಹ ಕಾನೂನು ತಂದ  ಸರ್ಕಾ­ರಕ್ಕೆ ಚುನಾವಣೆಯಲ್ಲಿ ಬುದ್ಧಿ ಕಲಿಸಲಾಗುವುದು’ ಎಂದು ಎಚ್ಚರಿಸಿದರು.

ಸ್ಥಗಿತಕ್ಕೆ ವಿರೋಧ: ಸಭಾತ್ಯಾಗ
‘ಬೆಂಗಳೂರಿನಿಂದಲೇ ಸಾಕಷ್ಟು ಸಂಖ್ಯೆಯ ಪಡಿತರ ವಿತರಕರು ಬಂದಿಲ್ಲ. ನಾವು ಸಂಘಟಿತ­ರಾಗಿಲ್ಲ. ಇಂತಹ ಸ್ಥಿತಿಯಲ್ಲಿ ಪಡಿತರ ವಿತರಣೆ ಸ್ಥಗಿತ ಮಾಡುವುದು ಸರಿಯಲ್ಲ’ ಎಂದು ನಗರದ ವಿತರಕ ಜಯರಾಮ್‌  ಸಭಾತ್ಯಾಗ ಮಾಡಿದರು.

ಸಂಘದ ಅಧ್ಯಕ್ಷರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿ ಅವರು ಸಭಾತ್ಯಾಗ ಮಾಡಿದರು. ಈ ಸಂದರ್ಭದಲ್ಲಿ ಸಭೆಯಲ್ಲಿ ಗದ್ದಲ ಉಂಟಾಯಿತು. ಜಯರಾಮ್‌ ಅವರನ್ನು ಸಮಾಧಾನಪಡಿಸಿ ಸಭೆಗೆ ಕರೆ ತಂದು ಭಾಷಣ ಮಾಡಲು ಅವಕಾಶ ನೀಡಲಾಯಿತು. ಅವರು ಮಾತನಾಡಿದಾಗ ಕೆಲವರು ವಿರೋಧ ವ್ಯಕ್ತಪಡಿಸಿದರು. ಇದರಿಂದ ಬೇಸತ್ತ ಅವರು ಸಭೆಯಿಂದ ನಿರ್ಗಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT