ADVERTISEMENT

ಪತ್ನಿಗೆ ಮೂತ್ರಪಿಂಡ ದಾನ ಮಾಡಿದ ಪತಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 19:30 IST
Last Updated 3 ಡಿಸೆಂಬರ್ 2012, 19:30 IST
ಪತ್ನಿಗೆ ಮೂತ್ರಪಿಂಡ ದಾನ ಮಾಡಿದ ಪತಿ
ಪತ್ನಿಗೆ ಮೂತ್ರಪಿಂಡ ದಾನ ಮಾಡಿದ ಪತಿ   

ಬೀದರ್: ಮೂತ್ರಪಿಂಡ ವೈಫಲ್ಯ ಪ್ರಕರಣಗಳಲ್ಲಿ ಪತಿಯ ಉಳಿವಿಗಾಗಿ ಪತ್ನಿ ಮೂತ್ರಪಿಂಡ ಕೊಡುಗೆ ನೀಡಿದ ನಿದರ್ಶನಗಳಿವೆ. ತಂದೆ-ತಾಯಿಗೆ ಮಕ್ಕಳು, ಸೋದರ-ಸೋದರಿ ನೆರವು ನೀಡಿದ ಪ್ರಕರಣಗಳನ್ನೂ ಕೇಳಿದ್ದೇವೆ. ಇಲ್ಲೊಬ್ಬರು, ಎರಡೂ ಮೂತ್ರಪಿಂಡ ವಿಫಲವಾದ ಪತ್ನಿಯನ್ನು ಉಳಿಸಿಕೊಳ್ಳಲು ತಾವೇ ಮೂತ್ರಪಿಂಡ ನೀಡಿದ್ದಾರೆ.

ಇವರು, ನಗರದ ನಿವಾಸಿ ಶೇಖ್ ಶಫಿಖುರ್ ರೆಹಮಾನ್ (58). ಇವರ ಮೂತ್ರಪಿಂಡವನ್ನು ಯಶಸ್ವಿಯಾಗಿ ಕಸಿ ಮಾಡಿಸಿಕೊಂಡಿರುವ ಪತ್ನಿ ಸಾದತ್ (54) ಬೇಗಂ ಈಗ ಮತ್ತೆ ಜೀವನೋತ್ಸಾಹ ಕಂಡುಕೊಂಡಿದ್ದಾರೆ. ಈ ದಂಪತಿಗೆ ಮೂವರು ಹೆಣ್ಣು, ಒಬ್ಬ ಪುತ್ರ ಇದ್ದಾರೆ.

ಇವರ ಕುಟುಂಬದಲ್ಲಿ ಆತಂಕದ ಸ್ಥಳದಲ್ಲಿ ಸಂತಸ ಮನೆಮಾಡಿದೆ. `ಸಾಂಸಾರಿಕ ಬದುಕಿನಲ್ಲಿ ಅವರಿಂದ ನಾನು ಏನನ್ನೂ ಬಯಸಿರಲಿಲ್ಲ; ಈಗ ಅವರ ಮೂತ್ರಪಿಂಡವನ್ನೇ ಪಡೆಯಬೇಕಾಯಿತು' ಎಂದು ಹೇಳುವಾಗ ಕಣ್ಣು ತುಂಬಿಕೊಳ್ಳುತ್ತಾರೆ. `ಅಲ್ಲಾ ಕಾ ದುವಾ. ಸಬ್ ಠೀಕ್ ಹುವಾ. ಅಬ್ ಆರಾಮ್ ಹೈ' ಎಂಬ ಅವರ ಮಾತಿನಲ್ಲಿ ಪತಿ ರೆಹಮಾನ್ ನೆಮ್ಮದಿ ಕಂಡುಕೊಳ್ಳುತ್ತಾರೆ.

ADVERTISEMENT

ಸಾದತ್ ಬೇಗಂಗೆ ಆಗಾಗ್ಗೆ ಸುಸ್ತಾಗುತ್ತಿತ್ತು. ಬೆವರು ಕಾಣಿಸಿಕೊಳ್ಳುತ್ತಿತ್ತು. ವೈದ್ಯಕೀಯ ತಪಾಸಣೆಗೆ ಸೋಲಾಪುರಕ್ಕೆ ತೆರಳಿದಾಗ ಪರಿಶೀಲಿಸಿದ ವೈದ್ಯರು `ಎರಡೂ ಮೂತ್ರಪಿಂಡಗಳು ವಿಫಲವಾಗಿವೆ' ಎಂದು ಹೇಳಿದರು. ಅವರ ಶಿಫಾರಸಿನಂತೆ ಮೊದಲು ಚೆನ್ನೈ, ಬಳಿಕ ಹೈದರಾಬಾದ್‌ಗೆ ತೆರಳಿದಾಗ `ಮೂತ್ರಪಿಂಡದ ಕಸಿ ಅನಿವಾರ್ಯ, ಅಂದಾಜು 12 ಲಕ್ಷ ವೆಚ್ಚ ಬರಬಹುದು' ಎಂದಿದ್ದರು.

ಬದುಕು ಹಂಚಿಕೊಂಡ ಪತ್ನಿಯ ಎರಡೂ ಮೂತ್ರಪಿಂಡಗಳು ವಿಫಲ ಎಂಬ ವಿಷಯವನ್ನು ತಿಳಿದಾಗ ರೆಹಮಾನ್ ಅವರಿಗೆ ಏನು ಮಾಡಬೇಕು ಎಂದೇ ತೋಚದೆ ಬದುಕಿಗೇ ಮಂಕು ಕವಿದಂಥ ಸ್ಥಿತಿ ಉಂಟಾಯಿತು. ಬೀದರ್ ನಗರದ ವೈದ್ಯರೊಬ್ಬರ ಸಲಹೆ ಮೇರೆಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಡಾ.ಸುದರ್ಶನ್ ಬಲ್ಲಾಳರನ್ನು ಭೇಟಿ ಮಾಡಿದರು. ಮೂತ್ರಪಿಂಡ ಕಸಿ ಮಾಡಿಸಬೇಕು ಎಂಬ ನಿರ್ಧಾರದ ಜೊತೆಗೆ ತಾವೇ ಮೂತ್ರಪಿಂಡ ಕೊಡಲು ಮುಂದಾದರು.

ಮೂತ್ರಪಿಂಡ ಹೊಂದಾಣಿಕೆಯಾಗುತ್ತದೆ ಎಂದು ವೈದ್ಯರು ಖಾತರಿಪಡಿಸಿದ ಬಳಿಕ ಮೂತ್ರಪಿಂಡ ದಾನ ಸಂದರ್ಭದಲ್ಲಿ ಅನುಸರಿಸಬೇಕಾದ ಕಾನೂನು ಪ್ರಕ್ರಿಯೆಯ ಪಾಲನೆ, ಪರಸ್ಪರ ಸಮ್ಮತಿಯಿಂದ ಆ. 31ರಂದು ಮೂತ್ರಪಿಂಡ ಕಸಿ ಆಗಿದ್ದು, ತಿಂಗಳ ತರುವಾಯ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.

ಮೂತ್ರಪಿಂಡ ಕೊಡುಗೆ, ಶಸ್ತ್ರಚಿಕಿತ್ಸೆಯ ನಂತರ ಪರಿಚಿತರು, ಆತ್ಮೀಯರ ಬೆಂಬಲದ ಮಾತುಗಳು ಈ ದಂಪತಿಗೆ ಇನ್ನಷ್ಟು ಧೈರ್ಯ ತಂದಿವೆ. ರೆಹಮಾನ್ ಮೊ. ಸಂಖ್ಯೆ  9900607391.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.