ADVERTISEMENT

ಪತ್ರಕರ್ತ ವಿಶ್ವೇಶ್ವರ ಭಟ್‌ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2017, 19:37 IST
Last Updated 13 ಮಾರ್ಚ್ 2017, 19:37 IST

ಬೆಂಗಳೂರು: ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳ ವಿರುದ್ಧದ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ವರದಿ ಪ್ರಕಟಿಸಿದ ಪತ್ರಕರ್ತ ವಿಶ್ವೇಶ್ವರ ಭಟ್ ಹಾಗೂ ವರದಿಗಾರ ವಿನಾಯಕ ಭಟ್ ಮೂರೂರು ವಿರುದ್ಧ ಕಬ್ಬನ್‌ ಪಾರ್ಕ್‌ ಪೊಲೀಸರು ನಗರದ 8ನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಹೈಕೋರ್ಟ್‌ ವಕೀಲ ಶಶಿಧರ ಬೆಳಗುಂಬ ಅವರು ನೀಡಿದ್ದ ದೂರಿನ ಅನುಸಾರ 2017ರ ಜನವರಿ 24ರಂದು ಕಬ್ಬನ್‌ ಪಾರ್ಕ್‌ ಪೊಲೀಸರು  ದೋಷಾರೋಪ ಪಟ್ಟಿ ಸಿದ್ಧಪಡಿಸಿ ನ್ಯಾಯಾಯಲಕ್ಕೆ ಸಲ್ಲಿಸಿದ್ದಾರೆ.

ದೋಷಾರೋಪ ಪಟ್ಟಿಯ ವಿವರ: ‘ರಾಘವೇಶ್ವರ ಶ್ರೀಗಳು ರಾಮಕಥಾ ಗಾಯಕಿಯೊಬ್ಬರ ಮೇಲೆ ಅತ್ಯಾಚಾರ ನಡೆಸಿದ್ದಾರೆ’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ  ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಈ ಸಮಯದಲ್ಲಿ ಆರೋಪಿ ವಿಶ್ವೇಶ್ವರ ಭಟ್‌ ಪ್ರಧಾನ ಸಂಪಾದಕರಾಗಿದ್ದ ‘ಕನ್ನಡಪ್ರಭ’ ಪತ್ರಿಕೆಯಲ್ಲಿ 2014ರ ನವೆಂಬರ್ 22 ಮತ್ತು 23ರ ಸಂಚಿಕೆಗಳಲ್ಲಿ ವಿನಾಯಕ ಭಟ್ಟ ಮೂರೂರು ಅವರ ಹೆಸರಿನಲ್ಲಿ ವರದಿ  ಪ್ರಕಟವಾಗಿದ್ದವು.

ADVERTISEMENT

ಈ ವರದಿಗಳಲ್ಲಿ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯ ನಿಜವಾದ ಹೆಸರು ಮತ್ತು ಭಾವಚಿತ್ರ  ಪ್ರಕಟಿಸಿರುವುದು ಅಪರಾಧ. ವಿಶ್ವೇಶ್ವರ ಭಟ್‌ ಮತ್ತು ವಿನಾಯಕ ಭಟ್ಟ ಮೂರೂರು ಅವರು ಭಾರತೀಯ ದಂಡ ಸಂಹಿತೆ–1860 (ಐಪಿಸಿ) ಕಲಂ 228 ಅನ್ನು ಉಲ್ಲಂಘಿಸಿದ್ದಾರೆ. ಆದ್ದರಿಂದ ಇಬ್ಬರೂ ಶಿಕ್ಷೆಗೆ ಅರ್ಹರು’ ಎಂದು ದೋಷಾರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.

ಐಪಿಸಿ 228 ಏನು ಹೇಳುತ್ತದೆ..?
ಯಾವುದೇ ಸಾರ್ವಜನಿಕ ಅಧಿಕಾರಿ ನಡೆಸುವ ನ್ಯಾಯಾಂಗ ವಿಚಾರಣಾ ಪ್ರಕ್ರಿಯೆ ಸಂದರ್ಭದಲ್ಲಿ, ಅಂತಹ ಸಾರ್ವಜನಿಕ ಅಧಿಕಾರಿಯನ್ನು ಯಾರಾದರೂ ಉದ್ದೇಶಪೂರ್ವಕವಾಗಿ ಅವಮಾನಿಸಿದರೆ, ಇಲ್ಲವೇ; ಅಡೆತಡೆ ಉಂಟು ಮಾಡಿದರೆ, ಅಂತಹವನನ್ನು  ಆರು ತಿಂಗಳವರೆಗಿನ (ಒಂದು ದಿನದಿಂದ ಆರು ತಿಂಗಳಿನವರೆಗೆ) ಸಾದಾ ಸಜೆ  ವಿಧಿಸಬಹುದು. ಅಥವಾ ₹ 1  ಸಾವಿರ ದಂಡ ವಿಧಿಸಬಹುದು. ಇಲ್ಲವೇ ಸಜಾ ಮತ್ತು ದಂಡ ಎರಡನ್ನೂ ವಿಧಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.