ADVERTISEMENT

ಪರಮಾಣು ಪರೀಕ್ಷೆ: `ನೆಹರೂ- ಇಂದಿರಾ' ಬೂಟಾಟಿಕೆ ವ್ಯಕ್ತಿಗಳು'

ಭಾರತದ ಸಮರ್ಥನೆ ಒಪ್ಪದ ಚೀನಾ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 19:59 IST
Last Updated 10 ಏಪ್ರಿಲ್ 2013, 19:59 IST

ನವದೆಹಲಿ (ಪಿಟಿಐ): `ಮೊದಲ ಬಾರಿಗೆ 1974ರಲ್ಲಿ ನಡೆಸಿದ ಪರಮಾಣು ಸ್ಫೋಟ ಸಂಪೂರ್ಣ ಶಾಂತಿ ಉದ್ದೇಶ ಹೊಂದಿತ್ತು' ಎಂಬ ಭಾರತದ ಸಮರ್ಥನೆಯನ್ನು ಚೀನಾ ಒಪ್ಪಿಕೊಂಡಿರಲಿಲ್ಲ. ಭಾರತ ಹೇಳುತ್ತಿರುವುದು `ಶುದ್ಧ ಸುಳ್ಳು' ಎಂಬ ಭಾವನೆ ಅದಕ್ಕಿತ್ತು...

ಕಳೆದ ಎರಡು ಮೂರು ದಿನಗಳಿಂದ ಭಾರತಕ್ಕೆ ಸಂಬಂಧಿಸಿದ ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸುವ ಮೂಲಕ  ಬಿರುಗಾಳಿ ಎಬ್ಬಿಸಿರುವ ವಿಕಿಲೀಕ್ಸ್ ಬುಧವಾರ ಭಾರತ-ಚೀನಾಕ್ಕೆ ಸಂಬಂಧಿಸಿದ ಈ ಗೋಪ್ಯ ಮಾಹಿತಿಯನ್ನು ಹೊರಬಿಟ್ಟಿದೆ.

ಭಾರತದ ಅಣ್ವಸ್ತ್ರ ಸ್ಫೋಟವನ್ನು ಸಮರ್ಥಿಸಿಕೊಂಡ ಅಂದಿನ ಪ್ರಧಾನಿ ಇಂದಿರಾ ಗಾಂಧಿ ತಮ್ಮ ತಂದೆ ಜವಾಹರಲಾಲ್ ನೆಹರೂ ಅವರಿಂದ  ಬೂಟಾಟಿಕೆಯನ್ನು ಬಳುವಳಿಯಾಗಿ ಪಡೆದಿದ್ದಾರೆ ಎಂದು ಚೀನಾದ ಅಂದಿನ ರಾಜತಾಂತ್ರಿಕರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು.

ಪರಮಾಣು ಪರೀಕ್ಷೆಯ ಬಗ್ಗೆ ಏಷ್ಯಾ ಮತ್ತು ಆಫ್ರಿಕಾ ರಾಜತಾಂತ್ರಿಕರಿಗೆ ವಿವರಣೆ ನೀಡಿದ್ದ ಭಾರತ, ತನಗೆ ಮಾತ್ರ ಯಾವುದೇ ಮಾಹಿತಿಯನ್ನೂ ನೀಡಿರಲಿಲ್ಲ. ಈ ಬಗ್ಗೆ ಮೊದಲೇ ಎಲ್ಲ ಮಾಹಿತಿ ಇದ್ದ ರಷ್ಯಾ, ಭಾರತಕ್ಕೆ ನೆರವು ನೀಡಿರುವ ಸಾಧ್ಯತೆ ಎಂದು ಚೀನಾ ಶಂಕೆ ವ್ಯಕ್ತಪಡಿಸಿತ್ತು. ಈ ಬೆಳವಣಿಗೆಯಿಂದ ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯ ವೃದ್ಧಿ ವಿಳಂಬವಾಗಬಹುದು ಎಂಬ ಅಭಿಪ್ರಾಯವನ್ನು ಚೀನಾದ ಸರ್ಕಾರದ ಅಂದಿನ ಕಾರ್ಯದರ್ಶಿ ಲಿ ತಾನಾನ್ ಅಮೆರಿಕ ರಾಯಭಾರ ಕಚೇರಿಗೆ ತಿಳಿಸಿದ್ದರು.

ಪರಮಾಣು ಪರೀಕ್ಷೆ ಚೀನಾಕ್ಕೆ ಆಶ್ಚರ್ಯಕರ ಅಥವಾ ಆಘಾತಕರ ವಿಷಯವಾಗಿರಲಿಲ್ಲ. ಅಮೆರಿಕ ಮತ್ತು ರಷ್ಯಾ ಪರಮಾಣು ಪರೀಕ್ಷೆಗೆ ಎಲ್ಲ ನೆರವು ಒದಗಿಸಿದ್ದ ಕಾರಣ ಆ ರಾಷ್ಟ್ರಗಳಿಗೂ ಇದು ಹೊಸ ಸಂಗತಿಯಾಗಿ ಪರಿಣಮಿಸಿರಲಿಲ್ಲ ಎಂದು ಚೀನಾ ರಾಯಭಾರಿ ವೇ ಚಿಹ್ ತಿಳಿಸಿದ್ದರು.

ಆದರೆ, ಪೋಖರಣ್ ಪರಮಾಣು ಪರೀಕ್ಷೆಯಯನ್ನು ಮಾತ್ರ `ಮಹತ್ವದ ಸಂಗತಿ' ಎಂದು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದು ತನ್ನ ಮೇಲೆ ಯಾವುದೇ ಪರಿಣಾಮ ಬೀರದು ಎಂದು ಚುಟುಕಾಗಿ ಪ್ರತಿಕ್ರಿಯಿಸಿತ್ತು. ಇಂತಹ ಹಲವಾರು ರಹಸ್ಯ ಮಾಹಿತಿಗಳನ್ನು ವಿಕಿಲೀಕ್ಸ್ ಬಹಿರಂಗಪಡಿಸಿದೆ.

ತಪ್ಪು ಮಾಹಿತಿ:ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ಸಂಬಂಧಿಸಿದಂತೆ ವಿಕಿಲೀಕ್ಸ್ ಬಹಿರಂಗ ಪಡಿಸಿದ್ದ ಮಾಹಿತಿಗಳೆಲ್ಲವೂ `ಅಪ್ಪಟ ಸುಳ್ಳು' ಎಂದು ಪ್ರಧಾನಿ ಕಾರ್ಯಾಲಯದ ರಾಜ್ಯ ಸಚಿವ ವಿ. ನಾರಾಯಣ ಸ್ವಾಮಿ ಬುಧವಾರ ಚೆನ್ನೈನಲ್ಲಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.