ADVERTISEMENT

ಪರಮೇಶ್ ಹೆಸರಲ್ಲಿ 13 ಬ್ಯಾಂಕ್ ಖಾತೆಗಳು

ಲೋಕಾಯುಕ್ತ ಪೊಲೀಸರ ತನಿಖೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 19:59 IST
Last Updated 20 ಡಿಸೆಂಬರ್ 2012, 19:59 IST
ಬೆಂಗಳೂರು: ಅಕ್ರಮ ಆಸ್ತಿ ಹೊಂದಿರುವ ಆರೋಪ ಎದುರಿಸುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ತಾಂತ್ರಿಕ ನಿರ್ದೇಶಕ ಎಸ್.ಕೆ.ಪರಮೇಶ್ ಅವರ ನಿವಾಸ ಮತ್ತು ಕಚೇರಿಗಳ ಶೋಧ ಕಾರ್ಯ ಪೂರ್ಣಗೊಂಡಿದೆ. ಬ್ಯಾಂಕ್ ಖಾತೆಗಳ ಪರಿಶೀಲನೆ ಮುಂದುವರಿದಿದೆ.
 
`ಪರಮೇಶ್ ಮನೆಯಲ್ಲಿ ಸ್ಥಿರಾಸ್ತಿ ಒಡೆತನಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳು ದೊರೆತಿವೆ. ಆರೋಪಿಯ ಪತ್ನಿ ವೈದ್ಯೆ. ಸ್ಥಿರಾಸ್ತಿ ಖರೀದಿಗೆ ಸಂಬಂಧಿಸಿದ ದಾಖಲೆಗಳು ಅವರ ಕ್ಲಿನಿಕ್‌ನಲ್ಲೂ ಪತ್ತೆಯಾಗಿವೆ. ಪರಮೇಶ್ ಅವರ ಮನೆ ಹಾಗೂ ಕಚೇರಿಯ ಶೋಧ ಕಾರ್ಯ ಪೂರ್ಣಗೊಂಡಿದೆ. ಆರೋಪಿಯು 13 ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ. ಶುಕ್ರವಾರ ಅವುಗಳ ಪರಿಶೀಲನೆ ನಡೆಯಲಿದೆ' ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ತಿಳಿಸಿವೆ.
 
ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಎಂಟು ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಬುಧವಾರ ಬೆಳಿಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಆದರೆ, ಪರಮೇಶ್ ಚೆನ್ನೈಗೆ ತೆರಳಿದ್ದ ಕಾರಣ ಸಂಜೆಯವರೆಗೂ ಅವರ ಮನೆ, ಕಚೇರಿಗಳ ತಪಾಸಣೆ ಸಾಧ್ಯವಾಗಿರಲಿಲ್ಲ. ಅವರು ಬುಧವಾರ ಸಂಜೆ ಬೆಂಗಳೂರಿಗೆ ಹಿಂದಿರುಗಿದ ಬಳಿಕ ಶೋಧ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.