ADVERTISEMENT

ಪರಿವರ್ತನ ಯಾತ್ರೆ ಸಮಾರೋಪಕ್ಕೆ ಮೋದಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2017, 20:14 IST
Last Updated 13 ಅಕ್ಟೋಬರ್ 2017, 20:14 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಬೆಂಗಳೂರು : ನವೆಂಬರ್ 2ರಿಂದ ಜನವರಿ 28ರವರೆಗೆ ರಾಜ್ಯದಾದ್ಯಂತ ನಡೆಯಲಿರುವ ನವ ಕರ್ನಾಟಕ ನಿರ್ಮಾಣ ಪರಿವರ್ತನ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ.

ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಸಮ್ಮುಖದಲ್ಲಿ ಶುಕ್ರವಾರ ನಡೆದ ಬಿಜೆಪಿ ಪ್ರಮುಖರ ಸಮಿತಿ ಸಭೆಯಲ್ಲಿ ಪರಿವರ್ತನ ಯಾತ್ರೆಯ ಮಾರ್ಗ, ಅದಕ್ಕೆ ಪೂರ್ವಭಾವಿಯಾಗಿ ಕೈಗೊಳ್ಳಬೇಕಾದ ಸಿದ್ಧತೆ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.

ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದ ಸಮೀಪದಲ್ಲಿ ನ.2ರಂದು ರಥಯಾತ್ರೆ ಉದ್ಘಾಟನೆ ನಡೆಯಲಿದ್ದು, ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಭಾಗವಹಿಸಲಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಲು ಸಭೆಯಲ್ಲಿ ಚರ್ಚಿಸಲಾಗಿದೆ.

ADVERTISEMENT

ಯಾತ್ರೆ ಡಿಸೆಂಬರ್ 17ರಂದು ಹುಬ್ಬಳ್ಳಿ ತಲುಪಲಿದ್ದು, ರಾಜ್ಯದ ವಿವಿಧ ಕಡೆಗಳಿಂದ ಹೊರಡಲಿರುವ ಬೈಕ್ ರ‍್ಯಾಲಿಯೂ ಅದೇ ದಿನ ಸೇರಿಕೊಳ್ಳಲಿದೆ. ಅಂದಿನ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಭಾಗಿಯಾಗಲಿದ್ದಾರೆ.

ಮೈಸೂರಿನಲ್ಲಿ ಶಕ್ತಿ ಪ್ರದರ್ಶನ: ಜನವರಿ 28ರಂದು ಬೆಂಗಳೂರಿನಲ್ಲಿ ಸಮಾರೋಪ ನಡೆಯಲಿದ್ದು, ಮೋದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇದಕ್ಕೆ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜಿಲ್ಲೆ ಮೈಸೂರಿನಲ್ಲಿ ಶಕ್ತಿ ಪ್ರದರ್ಶನ ನಡೆಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬೂತ್‌ ಮಟ್ಟದಲ್ಲಿ ಸಂಘಟನೆ: ವಿಧಾನಸಭಾ ಕ್ಷೇತ್ರಗಳನ್ನು ಎ,ಬಿ ಮತ್ತು ಸಿ ಎಂದು ವಿಂಗಡಿಸಲಾಗಿದ್ದು, ಬಿ ಮತ್ತು ಸಿ ಕ್ಷೇತ್ರಗಳಲ್ಲಿ ಬೂತ್ ಮಟ್ಟದ ಸಂಘಟನೆ ಬಲಗೊಳಿಸಲು ರಾಜ್ಯಮಟ್ಟದ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ.

ಎ ಕ್ಷೇತ್ರಗಳಲ್ಲಿ ಪಕ್ಷ ಸುಲಭವಾಗಿ ಗೆಲ್ಲಬಹುದು. ಸ್ವಲ್ಪ ಪರಿಶ್ರಮ ಹಾಕಿದರೆ ಬಿ ಕ್ಷೇತ್ರಗಳಲ್ಲಿ ಪಕ್ಷದ ಗೆಲುವು ಸಾಧ್ಯ. ಪಕ್ಷದ ತಳಮಟ್ಟದ ಕಾರ್ಯಕರ್ತರು ಇಲ್ಲದ ಸಿ ಕ್ಷೇತ್ರಗಳಲ್ಲಿ ಹೆಚ್ಚಿನ ಶ್ರಮ ಹಾಕಬೇಕಾದ ಅಗತ್ಯವಿದೆ ಎಂದೂ ಸಭೆಯಲ್ಲಿ ಚರ್ಚೆ ನಡೆದಿದೆ.

ಭ್ರಷ್ಟಚಾರ ವಿರೋಧಿ ಯಾತ್ರೆಯಾಗಿ ಪರಿವರ್ತನೆ
ಕಾಂಗ್ರೆಸ್ ಮತ್ತು ಭ್ರಷ್ಟಾಚಾರ ಒಂದೇ ಎಂಬಂತಾಗಿದೆ. ರಾಜ್ಯದ ಸರ್ಕಾರದ ಎಲ್ಲ ಸಚಿವರೂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಹೀಗಾಗಿ, ಭ್ರಷ್ಟಾಚಾರ ವಿರೋಧಿ ಜಾಗೃತಿ ಮೂಡಿಸುವುದು ಪರಿವರ್ತನಾ ಯಾತ್ರೆ ಆಶಯವಾಗಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್‌ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ಯಾತ್ರೆ ಸಾಗುವ ಉದ್ದಕ್ಕೂ ಜನಾಭಿಪ್ರಾಯ ಸಂಗ್ರಹಿಸಲು ಆಲೋಚಿಸಲಾಗಿದೆ ಎಂದೂ ಅವರು ಹೇಳಿದರು.

ಈಶ್ವರಪ್ಪ ಗೈರಿಗೆ ಆಕ್ಷೇಪ
‘ಪ್ರಮುಖರ ಸಮಿತಿ ಸಭೆಗೆ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಕೆ.ಎಸ್. ಈಶ್ವರಪ್ಪ ಪದೇ ಪದೇ ಗೈರು ಹಾಜರಾಗುತ್ತಿರುವುದರಿಂದ ಪಕ್ಷದಲ್ಲಿ ಭಿನ್ನಮತ ಇದೆ ಎಂಬ ಸಂದೇಶ ರವಾನೆಯಾಗುತ್ತಿದೆ’ ಎಂದು ಯಡಿಯೂರಪ್ಪ ಅವರು ಜಾವಡೇಕರ್‌ಗೆ ದೂರು ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಸಭೆಯಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಎಂದು ಎಲ್ಲರಿಗೂ ಸೂಚನೆ ನೀಡಲಾಗಿತ್ತು. ಹಾಗಿದ್ದರೂ ಈಶ್ವರಪ್ಪ ಬಂದಿಲ್ಲ. ಚುನಾವಣೆಯ ಹೊತ್ತಿನಲ್ಲಿ ವೈಯಕ್ತಿಕ ಕೆಲಸಗಳನ್ನು ಬದಿಗಿಟ್ಟು ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗಿಯಾಗುವುದು ಎಲ್ಲರ ಜವಾಬ್ದಾರಿ. ಈಶ್ವರಪ್ಪ ಈ ರೀತಿ ತಪ್ಪಿಸಿಕೊಳ್ಳುತ್ತಿರುವುದರಿಂದಾಗಿ, ಪಕ್ಷದಲ್ಲಿ ಭಿನ್ನಮತ ಮುಂದುವರಿದಿದೆ ಎಂದು ಮಾಧ್ಯಮಗಳು ಬಿಂಬಿಸುವಂತಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಯಡಿಯೂರಪ್ಪ ಹೇಳಿದರು.

ಈ ಸಂಗತಿಯನ್ನು ಅಮಿತ್ ಷಾ ಗಮನಕ್ಕೆ ತರುವುದಾಗಿ ಜಾವಡೇಕರ್ ತಿಳಿಸಿದರು ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.