ADVERTISEMENT

ಪಶ್ಚಿಮಘಟ್ಟ: ಚೆಲುವು ಅರಳಿದೆ ಇಲ್ಲಿ..!

ಕೆ.ಎಂ.ಸಂತೋಷಕುಮಾರ್
Published 11 ಜೂನ್ 2011, 19:30 IST
Last Updated 11 ಜೂನ್ 2011, 19:30 IST
ಪಶ್ಚಿಮಘಟ್ಟ: ಚೆಲುವು ಅರಳಿದೆ ಇಲ್ಲಿ..!
ಪಶ್ಚಿಮಘಟ್ಟ: ಚೆಲುವು ಅರಳಿದೆ ಇಲ್ಲಿ..!   

ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತಕ್ಕೆ ಈಗ ಚಂದ್ರನಂತಹ ಕಳೆ. ಹಚ್ಚಹಸಿರು ಹೊದ್ದ ಬೆಟ್ಟಸಾಲು, ಗಿರಿಶೃಂಗ ಚುಂಬಿಸುವ ಮೋಡಗಳ ಪರದೆ, ಅರಳಿ ನಿಂತ ಬಗೆಬಗೆಯ ಹೂವುಗಳು, ಪರಿಮಳ ಬೀರುವ ಆರ್ಕಿಡ್‌ಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.

ಮದುವಣಗಿತ್ತಿಯಂತೆ ಕಂಗೊಳಿಸುತ್ತಿರುವ ಪಶ್ಚಿಮಘಟ್ಟ ಸಾಲಿನ ಚೆಲುವು ಪ್ರವಾಸಿಗರ ಮನ ತಣಿಸಲು ಸಜ್ಜಾಗಿ ನಿಂತಿದ್ದರೆ, ಪ್ರವಾಸದ ಆಯಾಸ ತಣಿಸುವಂತೆ ಒಳ್ಳೆಯ ಮುಂಗಾರು ಮಳೆ ಕೂಡ ಸುರಿಯುತ್ತಿದೆ. ಜಲಪಾತಗಳ ಆಗರ, ಕಾಫಿ ಕಣಿವೆ ಚಿಕ್ಕಮಗಳೂರು ಜಿಲ್ಲೆಯ ಪ್ರವಾಸ ಪರಿಸರ ಪ್ರೇಮಿಗಳಿಗೆ, ಪ್ರಣಯದ ಜೋಡಿಗಳಿಗೆ ಇದು ಹೇಳಿ ಮಾಡಿಸಿದ ಋತು.

ಮುಂಗಾರು ಮಳೆಗೆ ಇಳಿ ತಣಿದಂತೆ ಕಾಡು ಹೂವುಗಳು ಅರಳಿ ನಿಂತಿವೆ. ಸೈಪ್ರಸ್ ಹುಲ್ಲು ಹಸಿರು ಮೊಗೆಯುವ ಜತೆಗೆ ಹೂವು ಅರಳಿ, ಮದುವಣಗಿತ್ತಿಯ ಜಡೆ ಅಲಂಕರಿಸಿದಂತೆ ಗೋಚರಿಸುತ್ತಿವೆ. ಕೆಂಪು, ಹಳದಿ ಮತ್ತು ಶ್ವೇತವರ್ಣದ ಕಾಡು ಅರಿಸಿಣವೂ ಅರಳಿದ್ದು ಬೆಟ್ಟದ ದೃಷ್ಟಿಬೊಟ್ಟಿನಂತೆ ಕಂಗೊಳಿಸುತ್ತಿವೆ. ವಿವಿಧ ಬಗೆಯ ಆರ್ಕಿಡ್ ಹೂವು ಅರಳಿ, ಸುಗಂಧ ಸೂಸುತ್ತಿವೆ.

ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿ, ಕೆಮ್ಮಣ್ಣುಗುಂಡಿ, ಕುದುರೆಮುಖದ ಗಿರಿಶ್ರೇಣಿಗಳ ಶೋಲಾ ಕಾಡುಗಳಲ್ಲಿ ಈಗ ಆರ್ಕಿಡ್ ಮತ್ತು ಕಾಡು ಹೂವು, ಸೇವಂತಿಗೆ ಹೋಲುವ ಬಣ್ಣಬಣ್ಣದ ಹೂವು, ಸೈಪ್ರಸ್ ಹುಲ್ಲಿನ ಹೂವು, ಅತ್ಯಂತ ವಿಶಿಷ್ಟ ಮತ್ತು ವಿರಳವೆನಿಸಿಕೊಂಡಿರುವ ಬಲ್ಬೊಫಿಲಂ ಆರ್ಕಿಡ್‌ನ ಶ್ವೇತವರ್ಣದ ಹೂವು ಅರಳಿವೆ.

ಶೋಲಾ ಕಾಡುಗಳಲ್ಲಿ ಮಾತ್ರ ಕಂಡುಬರುವ ದಾಲ್ಚಿನ್ನಿ ಮರಗಳು ಚಿಗುರೊಡೆದಿವೆ. ಬೇಸಿಗೆಗೆ ಎಲೆ ಉದುರಿಸಿದ್ದ ಗಿಡ, ಮರಗಳೆಲ್ಲವೂ ಹೊಸ ಚಿಗುರಿನಿಂದ ಕಂಗೊಳಿಸುತ್ತಿದ್ದು, ಕಾನನದ ಚೆಲುವು ಇಮ್ಮಡಿಸಿದೆ.

ಜಗತ್ತಿನ 25 ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಒಂದೆನಿಸಿಕೊಂಡಿರುವ ಪಶ್ಚಿಮಘಟ್ಟದ ಚಂದ್ರದ್ರೋಣ ಪರ್ವತದಲ್ಲಿ ಸುಮಾರು 400ಕ್ಕೂ ಹೆಚ್ಚು ಅತೀ ಅಮೂಲ್ಯವಾದ ಸಸ್ಯ ಸಂಕುಲವಿದೆ. ಬಲ್ಬೊಫಿಲಂ ಆರ್ಕಿಡ್ ಸೇರಿದಂತೆ ಔಷಧಿ ಸಸ್ಯಗಳು ಕಳವು ನಿಯಂತ್ರಣಕ್ಕೆ ಸಿಗದಂತೆ ನಡೆಯುತ್ತಿರುವುದು ಮಾತ್ರ ದುರಂತ.

ಆರ್ಕಿಡ್‌ಗಳ ಸೌಂದರ್ಯಕ್ಕೆ ಮಾರುಹೋಗಿ ಕೆಲವರು ಕದ್ದರೆ, ಮತ್ತೆ ಕೆಲವರು ಅವುಗಳಲ್ಲಿ ಔಷಧಿಯ ಗುಣವಿದೆ ಎಂದು ಭಾವಿಸಿ ಕದಿಯುತ್ತಿದ್ದಾರೆ. ಅಲ್ಲದೆ ಕದ್ದ ಔಷಧಿ ಸಸ್ಯಗಳನ್ನು ಬಾಬಾಬುಡನ್‌ಗಿರಿ ಮತ್ತು ಮಾಣಿಕ್ಯಧಾರಾ ಪ್ರದೇಶಗಳಲ್ಲಿ ಮಾರುವುದು ಅವ್ಯಾಹತವಾಗಿ ನಡೆಯುತ್ತಿದೆ.
 
ಅಮೂಲ್ಯ ಸಸ್ಯಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಜತೆಗೆ ಪ್ರವಾಸಿಗರು ಕೂಡ ಪ್ರಕೃತಿ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸಬೇಕು ಎನ್ನುತ್ತಾರೆ ವನ್ಯಜೀವಿ ಕಾರ್ಯಕರ್ತ ಜಿ.ವೀರೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.