ADVERTISEMENT

ಪಶ್ಚಿಮ ಘಟ್ಟ: ಅಧಿಕೃತ ವಿರೋಧ ಸಲ್ಲಿಸದ ರಾಜ್ಯ

​ಪ್ರಜಾವಾಣಿ ವಾರ್ತೆ
Published 18 ಜೂನ್ 2011, 19:30 IST
Last Updated 18 ಜೂನ್ 2011, 19:30 IST

ಹುಬ್ಬಳ್ಳಿ: ಪಶ್ಚಿಮ ಘಟ್ಟವನ್ನು ವಿಶ್ವ ಪರಂಪರೆ ತಾಣವೆಂದು ಘೋಷಿಸುವುದಕ್ಕೆ ರಾಜ್ಯ  ಸರ್ಕಾರ ವಿರೋಧ ವ್ಯಕ್ತಪಡಿಸಿದ್ದರೂ, ಈ ಸಂಬಂಧ ತನ್ನ ಅಧಿಕೃತ ವಿರೋಧವನ್ನು ಶನಿವಾರ ಸಂಜೆವರೆಗೂ ದಾಖಲಿಸಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ಹೀಗಾಗಿ ಈಗ ವ್ಯಕ್ತಪಡಿಸುತ್ತಿರುವ ವಿರೋಧ ಕೇಂದ್ರದ ನಿಲುವಿನ ಮೇಲೆ ಯಾವುದೇ ಪರಿಣಾಮ ಬೀರುವ ಸಂಭವ ಇಲ್ಲ.

ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಗೆ ಶನಿವಾರದವರೆಗೂ ರಾಜ್ಯದ ನಿಲುವು ತಿಳಿಸುವ ಮಾಹಿತಿ ಹೋಗಿಲ್ಲ. ಈ ನಡುವೆ ಭಾನುವಾರದಿಂದಲೇ ಪ್ಯಾರಿಸ್‌ನಲ್ಲಿ ವಿಶ್ವ ಪರಂಪರೆ ತಾಣಗಳ ಪಟ್ಟಿ ಮಾಡುವ ಕುರಿತು ಯುನೆಸ್ಕೊದ ಮಹತ್ವದ ಸಭೆ ನಡೆಯಲಿದ್ದು, ಭಾರತದ ಕಾರ್ಯದರ್ಶಿಗಳ ಮಟ್ಟದ ನಿಯೋಗ ಶನಿವಾರ ಪ್ಯಾರಿಸ್‌ಗೆ ತೆರಳಿದೆ.

`ಪಶ್ಚಿಮ ಘಟ್ಟವನ್ನು ವಿಶ್ವ ಪರಂಪರೆ ತಾಣದ ಪಟ್ಟಿಯಲ್ಲಿ ಸೇರಿಸುವ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯ ಪ್ರಸ್ತಾವಕ್ಕೆ ಶನಿವಾರದವರೆಗೂ ಕರ್ನಾಟಕ  ಸರ್ಕಾರದಿಂದ ಯಾವುದೇ ವಿರೋಧ ಅಧಿಕೃತವಾಗಿ ದಾಖಲಾಗಿಲ್ಲ. ಆದ್ದರಿಂದ ಈಗಾಗಲೇ ನಿರ್ಧರಿಸಿರುವಂತೆ ಪಶ್ಚಿಮ ಘಟ್ಟವನ್ನು ವಿಶ್ವ ಪರಂಪರೆ ತಾಣಗಳ ಪಟ್ಟಿಯಲ್ಲಿ ಸೇರಿಸುವ ಪ್ರಸ್ತಾವವನ್ನು ನಾವು ಸಭೆಯಲ್ಲಿ ಮಂಡಿಸುವುದು ಅನಿವಾರ್ಯ~ ಎಂದು ಅರಣ್ಯ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದರು.

ಪಶ್ಚಿಮ ಘಟ್ಟವನ್ನು ವಿಶ್ವ ಪರಂಪರೆ ತಾಣ ಪಟ್ಟಿಯಲ್ಲಿ ಸೇರಿಸಬೇಕೆಂಬ ಕೇಂದ್ರದ ಪ್ರಸ್ತಾವವನ್ನು ವಿರೋಧಿಸುವುದು ತಾಂತ್ರಿಕವಾಗಿ ಪ್ರಯೋಜನಕಾರಿಯಲ್ಲ. ಆದರೂ ರಾಜ್ಯ ಸರ್ಕಾರ ತನ್ನ ನಿಲುವನ್ನು ಪರಿಸರ ಇಲಾಖೆಗೆ ತಿಳಿಸಿಲ್ಲ ಎಂಬುದು ಇಲ್ಲಿ ಮುಖ್ಯವಾಗಿದೆ. ಇದಕ್ಕಿಂತ ಮುಖ್ಯವಾಗಿ ಈ ಪ್ರದೇಶವನ್ನು ಪಟ್ಟಿಯಲ್ಲಿ ಸೇರಿಸುವ ಕೇಂದ್ರದ ನಿರ್ಧಾರ ಆರು ವರ್ಷಗಳ ಹಿಂದೆಯೇ ಪ್ರಕಟವಾಗಿದೆ. ಆಗಿನಿಂದಲೂ ಕೇಂದ್ರ ಸರ್ಕಾರ ರಾಜ್ಯದ ಜೊತೆ ಈ ವಿಷಯದಲ್ಲಿ ಸಂಪರ್ಕದಲ್ಲಿತ್ತು ಎಂದು ಅವರು ವಿವರಿಸುತ್ತಾರೆ.

`ಒಂದು ವೇಳೆ ಕರ್ನಾಟಕ ಸರ್ಕಾರದ ವಿರೋಧ ಇದ್ದಲ್ಲಿ ಅದನ್ನು ಕೇಂದ್ರಕ್ಕೆ ತಿಳಿಸಲು ಸಾಕಷ್ಟು ಕಾಲಾವಕಾಶ ಇತ್ತು. ಕೇಂದ್ರದಿಂದ ಪ್ರಸ್ತಾವ ಹೋದ ನಂತರ ಪಶ್ಚಿಮ ಘಟ್ಟ ಪ್ರದೇಶಕ್ಕೆ ಭೇಟಿ ನೀಡಿದ ಯುನೆಸ್ಕೊ ಪರಿಶೀಲನಾ ತಂಡದ ಮುಂದಾದರೂ ತನ್ನ ನಿಲುವನ್ನು ಸ್ಪಷ್ಟಪಡಿಸಬಹುದಿತ್ತು. ಆಗ ರಾಜ್ಯ ಸರ್ಕಾರ ಏನು ಮಾಡುತ್ತಿತ್ತು? ಈಗ ಕಾಲ ಮಿಂಚಿದೆ~ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.