ADVERTISEMENT

ಪಾದುಕೆಗಳಿಂದ ಮೈ ಒತ್ತಿಕೊಂಡ ಸಚಿವ: ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ

ಪರ– ವಿರೋಧ ಚರ್ಚೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2018, 18:33 IST
Last Updated 19 ಜೂನ್ 2018, 18:33 IST
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್‌.ಮಹೇಶ್‌ ಪಾದುಕೆಗಳಿಂದ ಮೈ ಒತ್ತಿಕೊಂಡ ದೃಶ್ಯ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್‌.ಮಹೇಶ್‌ ಪಾದುಕೆಗಳಿಂದ ಮೈ ಒತ್ತಿಕೊಂಡ ದೃಶ್ಯ.    

ಚಾಮರಾಜನಗರ: ಬಿಎಸ್‌ಪಿಯಿಂದ ಆಯ್ಕೆ ಆಗಿರುವ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್‌.ಮಹೇಶ್‌ ಅವರು ಸ್ವಾಮೀಜಿಯೊಬ್ಬರ ಪಾದುಕೆಗಳನ್ನು ಮೈಗೆ ಒತ್ತಿಕೊಳ್ಳುತ್ತಿರುವ ಹಾಗೂ ಸುತ್ತೂರು ಸ್ವಾಮೀಜಿಗೆ ನಮಸ್ಕರಿಸುತ್ತಿರುವ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಈ ಬಗ್ಗೆ ಪರ–ವಿರೋಧ ಚರ್ಚೆ ನಡೆದಿದೆ.

ಮೊದಲ ವಿಡಿಯೊದಲ್ಲಿ, ಎನ್‌.ಮಹೇಶ್‌ ಅವರು ಚಕ್ಕಳ ಮಕ್ಕಳ ಹಾಕಿ ಕುಳಿತುಕೊಂಡು ಸ್ವಾಮೀಜಿ ಪಾದುಕೆಗಳನ್ನು ಕಾಲಿನಿಂದ ಹಿಡಿದು ಭುಜದವರೆಗೆ ಒತ್ತಿಕೊಳ್ಳುವ ದೃಶ್ಯವಿದೆ. 3.02 ನಿಮಿಷಗಳ ವಿಡಿಯೊದಲ್ಲಿ ‘ಬೋಲೋ ಶ್ರೀ ಅಮ್ಮ ಭಗವಾನ್‌ ಕೀ ಜೈ, ಆನಂದ ಪಾದ ಶ್ರೀ ಅಮ್ಮ ಭಗವಾನ್‌ ಕೀ ಜೈ’ ಎಂದು ಘೋಷಣೆ ಕೂಗುವ ಧ್ವನಿಯೂ ಕೇಳುತ್ತದೆ. ಮತ್ತೊಂದು ವಿಡಿಯೊದಲ್ಲಿ ಸುತ್ತೂರು ಸ್ವಾಮೀಜಿಗೆ ನಮಸ್ಕರಿಸಿ, ಅವರಿಗೆ ಸನ್ಮಾನ ಮಾಡುವ ದೃಶ್ಯ ಇದೆ.

‘ಅಂಬೇಡ್ಕರ್‌ವಾದಿ ಎಂದು ಕರೆದುಕೊಳ್ಳುತ್ತಿರುವ ಮಹೇಶ್‌ ಅವರು ಪಾದುಕೆಗಳನ್ನು ಮೈಗೆ ಒತ್ತಿಕೊಳ್ಳುವುದು, ಸ್ವಾಮೀಜಿಗೆ ನಮಸ್ಕರಿಸುವ ಮೂಲಕ ಅಂಬೇಡ್ಕರ್‌ ತತ್ವ ಸಿದ್ಧಾಂತಗಳಿಗೆ ಅಪಚಾರ ಎಸಗಿದ್ದಾರೆ’ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದಾರೆ.ಇನ್ನೂ ಕೆಲವರು ಬೆಂಬಲಕ್ಕೆ ನಿಂತಿದ್ದು, ಸಮರ್ಥಿಸಿಕೊಂಡಿದ್ದಾರೆ.

ADVERTISEMENT

‘ಅಭಿಮಾನಿಯೊಬ್ಬನ ಮಾತಿಗೆ ಕಟ್ಟುಬಿದ್ದು ಈ ರೀತಿ ಮಾಡಿದ್ದಾರೆ. ಮಹೇಶ್‌ ಅವರಿಂದ ಇದನ್ನು ನಿರೀಕ್ಷಿಸಿರಲಿಲ್ಲ. ಈ ದೃಶ್ಯಗಳನ್ನು ನೋಡಲಾಗುತ್ತಿಲ್ಲ’ ಎಂದು ಇನ್ನೂ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಮಹೇಶ್‌ ಅವರ ಅಭಿಪ್ರಾಯ ಕೇಳದೆ, ಯಾವ ನಿರ್ಧಾರಕ್ಕೂ ಬರಬಾರದು ಎಂದು ಮತ್ತೂ ಕೆಲವರು ಪ್ರತಿಪಾದಿಸಿದ್ದಾರೆ.

‘ಅಂಬೇಡ್ಕರ್‌ ಅವರ ಸ್ವಾಭಿಮಾನದ ಚಿಂತನೆಯನ್ನು ಸ್ವಾಮೀಜಿಯೊಬ್ಬರ ಚಪ್ಪಲಿಯ ತಳಕ್ಕಿಟ್ಟು, ಅವರ ಘನತೆಯನ್ನು ಕೆಡವಿದರು’ ಎಂಬ ಶೀರ್ಷಿಕೆಯ ಅಡಿಯಲ್ಲಿ ಫೇಸ್‌ಬುಕ್‌ನಲ್ಲಿ ಹಾರೋಹಳ್ಳಿ ರವೀಂದ್ರ ಲೇಖನವನ್ನು ಬರೆದಿದ್ದಾರೆ. ಅವರು ಈ ಎರಡು ವಿಡಿಯೊ ತುಣುಕುಗಳನ್ನು ಪ್ರಕಟಿಸಿದ್ದಾರೆ. ನೂರಕ್ಕೂ ಹೆಚ್ಚು ಮಂದಿ ಈ ಪೋಸ್ಟ್‌ ಹಂಚಿಕೊಂಡಿದ್ದು, ಪರ– ವಿರೋಧ ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ.

ಎನ್‌.ಮಹೇಶ್‌ ಪರವಾಗಿ ಪೋಸ್ಟ್‌ ಮಾಡಿರುವ ಬಿ.ಆರ್‌.ಭಾಸ್ಕರ್ ಪ್ರಸಾದ್‌, ‘ಉಪ್ಪಾರ ಸಮುದಾಯದ ಒಬ್ಬ ಮತದಾರ ‘ಅಣ್ಣೈ ಮಯೇಸಣ್ಕಾ ಪ್ರಾಣ ಕೊಟ್ಟೇನು’ ಅಂತಾನೆ. ಅದರಂತೆ ಚುನಾವಣೆ ಪೂರ್ತಿ ತನ್ನ ತನು ಮನ ಧನ ಅರ್ಪಿಸಿ ಮಹೇಶಣ್ಣನ ಗೆಲುವಿನಲ್ಲಿ ತನ್ನ ಪಾತ್ರ ವಹಿಸುತ್ತಾನೆ. ಮಹೇಶಣ್ಣ ಗೆದ್ದು ಮಂತ್ರಿಯೂ ಆಗುತ್ತಾರೆ. ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಊರಿಗೆ ಹೋಗಿದ್ದ ಮಹೇಶಣ್ಣನ ಅದೇ ಅಭಿಮಾನಿ ತನ್ನ ನಿಷ್ಠೆಯ ದೇವಾಲಯಕ್ಕೆ ಕರೆದೊಯ್ದು ಕೂರಿಸುತ್ತಾನೆ. ಅಲ್ಲಿನ ಸಂಪ್ರದಾಯದಂತೆ ಪಾದುಕೆಗಳನ್ನು ಪೂಜಿಸಿ ತನ್ನ ಮತದಾರನ ಹರಕೆ ತೀರಿಸಿ, ಆತನ ಮತ್ತು ಆತನಂತಹ ಹತ್ತಾರು ಮತದಾರರ ಮನಸ್ಸಂತೋಷ ಪಡಿಸುತ್ತಾರೆ’ ಎಂದು ಬರೆದಿದ್ದಾರೆ.

ನಾನು ಪ್ರಗತಿಪರ ಅಲ್ಲ: ಮಹೇಶ್

ಬೆಂಗಳೂರು: ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಮಹೇಶ್‌, ‘ಸಮುದಾಯದ ಭಾವನೆಗಳನ್ನು ಗೌರವಿಸುವ ಸಲುವಾಗಿ ಎಲ್ಲಾ ಆಚರಣೆಗಳನ್ನು ಮಾಡಿದ್ದೇನೆ, ಮಾಡುತ್ತೇನೆ’ ಎಂದು ಹೇಳಿದರು.

‘ಅವೆಲ್ಲವೂ ಮೈ ಮೇಲೆ ಧರಿಸಿದ ಅಂಗಿ ಇದ್ದಂತೆ. ಸಂದರ್ಭಕ್ಕೆ ತಕ್ಕಂತೆ ಒಂದೊಂದು ಅಂಗಿ ಹಾಕುತ್ತೇನೆ. ಅದೊರಳಗಿರುವ ನನ್ನ ಚರ್ಮ ಶುದ್ಧವಾಗಿದೆ. ಮಾನಸಿಕವಾಗಿ ಯಾವುದಕ್ಕೂ ಅಂಟಿಕೊಂಡಿಲ್ಲ. ನಾನು ಮೊದಲಿನಿಂದಲೂ ಹೀಗೇ ಇರುವುದು. ಪ್ರಗತಿಪರ ಎಂದು ತಪ್ಪಾಗಿ ಅರ್ಥೈಸಿದ್ದಾರೆ’ ಎಂದರು.

‘ಚುನಾವಣೆ ಸಂದರ್ಭದಲ್ಲಿ ಕೊಳ್ಳೆಗಾಲದದೇವಾಂಗ ಪೇಟೆಯಲ್ಲಿ ಅಮ್ಮ ಭಗವಾನ್‌ ಪಾದ ಪೂಜೆ ಹಮ್ಮಿಕೊಂಡಿದ್ದರು. ಅಲ್ಲಿಗೆ ಹೋದಾಗ ಪಾದುಕೆಗಳಿಗೆ ಪೂಜೆ ಮಾಡಿ ಒಳ್ಳೆಯದಾಗುತ್ತದೆ ಎಂದರು, ಮಾಡಿದೆ. ಇನ್ನೊಬ್ಬರು ಮಂಟೇಸ್ವಾಮಿ ದೇವಸ್ಥಾನಕ್ಕೆ ಹೋಗಿ ತಲೆ ಬೋಳಿಸಿ ಎನ್ನುತ್ತಾರೆ, ಹೋಗುತ್ತೇನೆ. ಮತ್ತೊಬ್ಬರು ಬಿಸಿಲು ಮಾರಮ್ಮ ದೇವಸ್ಥಾನಕ್ಕೆ ಹೋಗಿ ನಮಸ್ಕಾರ ಮಾಡೋಣ ಎನ್ನುತ್ತಾರೆ ಅಲ್ಲಿಗೂ ಹೋಗುತ್ತೇನೆ’ ಎಂದು ಸಮರ್ಥಿಸಿದರು.

‘ಸ್ವಾಮೀಜಿ ಕಾಲಿಗೆ ನಮಸ್ಕಾರ ಮಾಡುತ್ತೇನೆ. ಏಕೆಂದರೆ, ಅದು ನಮ್ಮ ಪರಂಪರೆ. ನನ್ನ ಅಡಿಯಲ್ಲಿ ಬೆಳೆದಿರುವ ಕೆಲವರು ಬೌದ್ಧ ಸನ್ಯಾಸಿಗಳಾಗಿದ್ದಾರೆ. ಅವರ ಕಾಲಿಗೂ ಬೀಳುತ್ತೇನೆ. ವೈಯಕ್ತಿಕವಾಗಿ ನನಗೆ ಇದು ತಪ್ಪು ಎನಿಸುವುದಿಲ್ಲ’ ಎಂದು ಹೇಳಿದರು.

ಇನ್ನೂ ಕೆಲವರು ಮಹೇಶ್‌ ಅವರನ್ನು ಬೆಂಬಲಿಸುವುದಾಗಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.