ADVERTISEMENT

ಪಾವಗಡ ಸೋಲಾರ್ ಪಾರ್ಕ್ ಜಗತ್ತಿನ 8ನೇ ಅದ್ಭುತ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2018, 19:30 IST
Last Updated 1 ಮಾರ್ಚ್ 2018, 19:30 IST
ಪಾವಗಡ ತಾಲ್ಲೂಕಿನ ತಿರುಮಣಿಯಲ್ಲಿ ಸೋಲಾರ್ ಪಾರ್ಕ್ ಮೊದಲ ಹಂತದ ಉದ್ಘಾಟನೆ ನೆರವೇರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಸೌರಶಕ್ತಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ವಿ.ಬಲರಾಮ್, ವಿಧಾನ ಪರಿಷತ್‌ ಸದಸ್ಯ ವಿ.ಎಸ್.ಉಗ್ರಪ್ಪ, ಸಂಸದ ಎಂ.ಚಂದ್ರಪ್ಪ, ಸಚಿವರಾದ ಟಿ.ಬಿ.ಜಯಚಂದ್ರ, ಡಿ.ಕೆ ಶಿವಕುಮಾರ್ ಇದ್ದರು
ಪಾವಗಡ ತಾಲ್ಲೂಕಿನ ತಿರುಮಣಿಯಲ್ಲಿ ಸೋಲಾರ್ ಪಾರ್ಕ್ ಮೊದಲ ಹಂತದ ಉದ್ಘಾಟನೆ ನೆರವೇರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಸೌರಶಕ್ತಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ವಿ.ಬಲರಾಮ್, ವಿಧಾನ ಪರಿಷತ್‌ ಸದಸ್ಯ ವಿ.ಎಸ್.ಉಗ್ರಪ್ಪ, ಸಂಸದ ಎಂ.ಚಂದ್ರಪ್ಪ, ಸಚಿವರಾದ ಟಿ.ಬಿ.ಜಯಚಂದ್ರ, ಡಿ.ಕೆ ಶಿವಕುಮಾರ್ ಇದ್ದರು   

ಪಾವಗಡ: ಇಲ್ಲಿ ನಿರ್ಮಾಣವಾಗಿರುವ ಸೌರ ವಿದ್ಯುತ್‌ ಪಾರ್ಕ್ ಕರ್ನಾಟಕಕ್ಕೆ ಗೌರವ ತಂದುಕೊಡುವಂತಹ ಯೋಜನೆಯಾಗಿದ್ದು, ಜಗತ್ತಿನ 8ನೇ ಅದ್ಭುತವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು.

ಗುರುವಾರ ತಾಲ್ಲೂಕಿನ ನಾಗಲಮಡಿಕೆ ಹೋಬಳಿಯ ತಿರುಮಣಿಯಲ್ಲಿ ವಿಶ್ವದ ಅತಿದೊಡ್ಡ 2000 ಮೆಗಾವಾಟ್‌ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಸೋಲಾರ್ ಪಾರ್ಕ್ ’ಶಕ್ತಿ ಸ್ಥಳ’ದ ಮೊದಲನೇ ಹಂತ ಉದ್ಘಾಟಿಸಿ ಮಾತನಾಡಿದರು.

ಈ ಪಾರ್ಕ್ ನಿರ್ಮಾಣವಾಗಿರುವುದರಿಂದ ಪಾವಗಡಕ್ಕೆ ಈವರೆಗೆ ಅಂಟಿಕೊಂಡಿದ್ದ ಹಿಂದುಳಿದ ಪ್ರದೇಶ, ಬರಪೀಡಿತ ಪ್ರದೇಶ ಎಂಬ ಹಣೆ ಪಟ್ಟಿ ಕಳಚಲಿದೆ. ಇನ್ನು ಮುಂದೆ ಈ ತಾಲ್ಲೂಕಿನ ಜನರ ಭಾಗ್ಯದ ಬಾಗಿಲು ತೆರೆಯಲಿದೆ ಎಂದು ಆಶಯ ವ್ಯಕ್ತಪಡಿಸಿದರು.

ADVERTISEMENT

13 ಸಾವಿರ ಎಕರೆಯಲ್ಲಿ ₹ 16,500 ಕೋಟಿ ಮೊತ್ತದಲ್ಲಿ ಈ ಪಾರ್ಕ್‌ ನಿರ್ಮಾಣವಾಗುತ್ತಿದೆ. ಇದೊಂದು ಪರಿಸರ ಸ್ನೇಹಿ ಯೋಜನೆಯಾಗಿದೆ. ಇಂತಹ ಯೋಜನೆಗೆ ಭೂಮಿ ಕಲ್ಪಿಸಿ ಸಹಕರಿಸಿದ ರೈತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಪ್ರಥಮ ಹಂತದಲ್ಲಿ 600 ಮೆಗಾವಾಟ್‌ ಉತ್ಪಾದನೆಗೆ ಈಗ ಚಾಲನೆ ಸಿಕ್ಕಿದೆ. ಹಂತ ಹಂತವಾಗಿ 2000 ಮೆಗಾವಾಟ್ ವಿದ್ಯುತ್ ಉತ್ಪಾದನೆ ಕೆಲವೇ ತಿಂಗಳಲ್ಲಿ ಆಗಲಿದೆ ಎಂದು ನುಡಿದರು.

ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ,‘ ಸೋಲಾರ್ ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯವೇ ದೇಶದಲ್ಲಿ ಮುಂಚೂಣಿಯಲ್ಲಿದೆ. ಗುಜರಾತ್‌ 1585, ಮಧ್ಯಪ್ರದೇಶ 1537, ತಮಿಳುನಾಡು 1822, ತೆಲಂಗಾಣ 1000 ಮೆಗಾವಾಟ್ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡಿದರೆ ಕರ್ನಾಟಕ ರಾಜ್ಯವು 3,628 ಮೆಗಾವಾಟ್ ಉತ್ಪಾದನೆ ಮಾಡುತ್ತಿದೆ’ ಎಂದು ವಿವರಿಸಿದರು.

’2013ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಕೇವಲ 13 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿತ್ತು. ಈಗ 22,000 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಅನೇಕ ಸಮಸ್ಯೆ, ಸವಾಲುಗಳ ನಡುವೆ ವಿದ್ಯುತ್ ಸ್ವಾವಲಂಬನೆ ಸಾಧಿಸಲಾಗಿದೆ’ ಎಂದು ಹೇಳಿದರು.

ಈ ಪಾರ್ಕ್ ಅನ್ನು ಪ್ರವಾಸಿ ತಾಣವಾಗಿ ರೂಪಿಸಲಾಗುವುದು. ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಕೈಗಾರಿಕೆಗಳ ಸ್ಥಾಪನೆಗೆ ಒತ್ತು ಕೊಡಲಾಗುವುದು. ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸಲು ಈಗಾಗಲೇ ಭದ್ರಾ ಮೇಲ್ದಂಡೆ ಯೋಜನೆಯಡಿ ನೀರು ಪೂರೈಕೆಗೆ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ಅಂಕಿ ಅಂಶಗಳು

13,000  ಎಕರೆ

ಸೋಲಾರ್ ಪಾರ್ಕ್ ನಿರ್ಮಾಣ ಪ್ರದೇಶ

16,500 ಕೋಟಿ

ಪಾರ್ಕ್‌ ನಿರ್ಮಾಣಕ್ಕೆ ನಿಗದಿಪಡಿಸಿದ ಮೊತ್ತ

2000 ಮೆಗಾವಾಟ್

ಸೋಲಾರ್ ಪಾರ್ಕಿನಲ್ಲಿ ವಿದ್ಯುತ್ ಉತ್ಪಾದನೆ

3,628 ಮೆಗಾವಾಟ್

ರಾಜ್ಯದಲ್ಲಿ ಈಗ ಉತ್ಪಾದನೆ ಆಗುತ್ತಿರುವ ಸೋಲಾರ್ ವಿದ್ಯುತ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.