ADVERTISEMENT

ಪಿಯು: ಮೌಲ್ಯಮಾಪನ ಬಹಿಷ್ಕಾರ ಇಲ್ಲ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 19:30 IST
Last Updated 21 ಮಾರ್ಚ್ 2018, 19:30 IST

ಬೆಂಗಳೂರು: ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಬಹಿಷ್ಕರಿಸುವ ನಿರ್ಧಾರವನ್ನು ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಮತ್ತು ಪ್ರಾಂಶುಪಾಲರ ಸಂಘಗಳು ಹಿಂದಕ್ಕೆ ಪಡೆದಿವೆ.

ಇದರಿಂದ ನಿಗದಿತ ಅವಧಿಯಲ್ಲಿ ಮೌಲ್ಯಮಾಪನ ಆರಂಭವಾಗಲಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಅವರೊಂದಿಗೆ ಬುಧವಾರ ನಡೆದ ಸಂಧಾನ ಯಶಸ್ವಿಯಾದ ಕಾರಣ ಬಹಿಷ್ಕಾರ ಹಿಂದಕ್ಕೆ ಪಡೆದಿರುವುದಾಗಿ ಸಂಘಗಳು ಪ್ರಕಟಿಸಿವೆ.

‘ಬಾಕಿ ಇರುವ ವಿಶೇಷ ವಾರ್ಷಿಕ ವೇತನ ಬಡ್ತಿ ಮತ್ತು ವೇತನ ತಾರತಮ್ಯ ಸರಿಪಡಿಸುವ ಬೇಡಿಕೆಗಳ ಈಡೇರಿಕೆಗೆ ಶಿಕ್ಷಣ ಸಚಿವರು ಲಿಖಿತ ಆಶ್ವಾಸನೆ ನೀಡಿದ್ದಾರೆ. ಅಲ್ಲದೆ ಸಭೆಯಲ್ಲಿಯೇ ಮುಖ್ಯಮಂತ್ರಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ತಾತ್ವಿಕ ಒಪ್ಪಿಗೆ ಪಡೆದಿದ್ದಾರೆ. ಈ ಕುರಿತ ಕಡತವನ್ನು ಮುಖ್ಯಮಂತ್ರಿಯಿಂದ ಅನುಮೋದನೆ ಪಡೆದು, ಶೀಘ್ರದಲ್ಲಿಯೇ ಆದೇಶ ಹೊರಡಿಸುವುದಾಗಿ ಸಚಿವರು ಸಭೆಗೆ ತಿಳಿಸಿದ್ದಾರೆ’ ಎಂದು ರಾಜ್ಯ ಪದವಿ ಪೂರ್ವ ಉಪನ್ಯಾಸಕರುಗಳ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ತಿಳಿಸಿದ್ದಾರೆ.

ADVERTISEMENT

ಸಂಧಾನ ಸಭೆಯಲ್ಲಿ ವಿಧಾನ ಪರಿಷತ್ತಿನ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ರಮೇಶ್‌ ಬಾಬು, ಆರ್‌. ಚೌಡರೆಡ್ಡಿ ತೂಪಲ್ಲಿ, ರಾಮಚಂದ್ರಗೌಡ ಪಾಲ್ಗೊಂಡಿದ್ದರು.

ಸಚಿವರು ನೀಡಿರುವ ಲಿಖಿತ ಆಶ್ವಾಸನೆ

* ಪದವಿ ಪೂರ್ವ ಕಾಲೇಜುಗಳು ಪ್ರಾಂಶುಪಾಲರಿಗೆ ಪ್ರತ್ಯೇಕ ವೇತನ ಶ್ರೇಣಿ ನಿಗದಿಪಡಿಸಲು ಮತ್ತು ಈಗಾಗಲೇ ನೀಡಲಾಗುತ್ತಿರುವ ₹ 1,000 ಎಕ್ಸ್‌ಗ್ರೇಷಿಯಾ ಮುಂದುವರೆಸಲು ಆದೇಶ ಹೊರಡಿಸಲಾಗುವುದು. ಈ ಆದೇಶವನ್ನು 6ನೇ ವೇತನ ಆಯೋಗಕ್ಕೆ ಕಳುಹಿಸಿ ಎಕ್ಸ್‌ಗ್ರೇಷಿಯಾವನ್ನು ಮೂಲ ವೇತನ ಶ್ರೇಣಿಯಲ್ಲಿ ವಿಲೀನಗೊಳಿಸಿ ನೂತನ ವೇತನ ಶ್ರೇಣಿ ನಿಗದಿಪಡಿಸಲು ಕೋರಿ ಪತ್ರ ಬರೆಯಲಾಗುವುದು.

* ಪಿಯು ಕಾಲೇಜುಗಳ ಉಪನ್ಯಾಸಕರಿಗೆ ಈಗಾಗಲೇ ನೀಡುತ್ತಿರುವ ವಿಶೇಷ ಭತ್ಯೆಯನ್ನು ಹಿಂದಕ್ಕೆ ಪಡೆದು, 2ನೇ ವಿಶೇಷ ವಾರ್ಷಿಕ ವೇತನ ಬಡ್ತಿಯನ್ನು ನೀಡಲಾಗುವುದು. ಅದನ್ನು ಮೂಲ ವೇತನದಲ್ಲಿ ವಿಲೀನಗೊಳಿಸಿ, ಹೊಸ ವೇತನ ಶ್ರೇಣಿ ನಿಗದಿಪಡಿಸಲಾಗುವುದು.

ಎರಡನೇ ವಿಶೇಷ ವಾರ್ಷಿಕ ವೇತನ ಬಡ್ತಿ ಸೌಲಭ್ಯವನ್ನು ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕ ಮತ್ತು ಮುಖ್ಯ ಶಿಕ್ಷಕರಿಗೂ ಒದಗಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.