ADVERTISEMENT

ಪುಟ್ಟರಾಜರಿಗೆ ಭಾರತರತ್ನ ಸಿಗಲಿ: ಸಿಎಂ ಆಶಯ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2011, 19:30 IST
Last Updated 7 ಸೆಪ್ಟೆಂಬರ್ 2011, 19:30 IST

ಗದಗ: ಅಂಧ-ಅನಾಥರ ಬಾಳಿಗೆ ಬೆಳಕಾಗಿದ್ದ ಡಾ.ಪಂಡಿತ ಪುಟ್ಟರಾಜ ಗವಾಯಿಯವರಿಗೆ ಮರಣೋತ್ತರವಾಗಿಯಾದರೂ  ಭಾರತ ರತ್ನ ಸಿಗಲಿ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಆಶಯ ವ್ಯಕ್ತಪಡಿಸಿದರು.

ಗದುಗಿನ ಸ್ವಾಮಿ ವಿವೇಕಾನಂದ ಸಭಾಂಗಣದ ಗುರು ಕುಮಾರೇಶ್ವರ ವೇದಿಕೆಯಲ್ಲಿ ಬುಧವಾರ ಡಾ.ಪಂಡಿತ ಪುಟ್ಟರಾಜ ಗವಾಯಿಯವರ ಪ್ರಥಮ ಪುಣ್ಯಸ್ಮರಣೋತ್ಸವದ ಧರ್ಮಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಪುಟ್ಟರಾಜ ಗವಾಯಿಯವರ ಸ್ಮಾರಕ ಭವನ ನಿರ್ಮಾಣ ಮಾಡಲು 5 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ. ಅಲ್ಲದೆ ವೀರೇಶ್ವರ ಪುಣ್ಯಾಶ್ರಮದ ಅಭಿವೃದ್ಧಿಗಾಗಿ ಮೂರು ಕೋಟಿ ರೂಪಾಯಿ ನೀಡಲಾಗಿದೆ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ತಾತಗುಣಿ ಎಸ್ಟೇಟ್‌ನಲ್ಲಿ ಸರ್ಕಾರ ಸ್ಥಾಪನೆ ಮಾಡಲು ಉದ್ದೇಶಿಸಿರುವ ಲಲಿತಕಲಾ ಕಾಲೇಜಿಗೆ ಪುಟ್ಟರಾಜ ಗವಾಯಿಯವರ ಹೆಸರಿಡಬೇಕು.
 
ಹಳ್ಳಿಗುಡಿ ಸುತ್ತಮುತ್ತಲ ರೈತರ ಜಮೀನು ಸ್ವಾಧೀನ ರದ್ದುಗೊಳಿಸಿದ ವಿಷಯವನ್ನು ಶೀಘ್ರವೇ ಗೆಜೆಟ್‌ನಲ್ಲಿ ಪ್ರಕಟಿಸಬೇಕು. ಗದುಗಿನ ಭಾಗದಲ್ಲಿ ಜಿಂಕೆ ಪಾರ್ಕ್ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು.

ರುದ್ರಾಕ್ಷಿಮಠದ ಶಿವಬಸವ ಸ್ವಾಮೀಜಿ, ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಕಲ್ಲಯ್ಯಜ್ಜ ಸಾನ್ನಿಧ್ಯ ವಹಿಸಿದ್ದರು. ಸಚಿವರಾದ ಸಿ.ಸಿ.ಪಾಟೀಲ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.