ADVERTISEMENT

ಪುನರಾವರ್ತನೆಯಾದ ಪಠ್ಯಕ್ಕೆ ಹೊರತಾದ ಪ್ರಶ್ನೆಗಳು

​ಪ್ರಜಾವಾಣಿ ವಾರ್ತೆ
Published 16 ಜೂನ್ 2013, 19:59 IST
Last Updated 16 ಜೂನ್ 2013, 19:59 IST

ಬೆಂಗಳೂರು: ಎಂಜಿನಿಯರಿಂಗ್ ಕೋರ್ಸ್‌ಗಳ ಮೂರನೇ ಸೆಮಿಸ್ಟರ್‌ಗೆ ನೇರ ಪ್ರವೇಶ ಬಯಸಿರುವ ಡಿಪ್ಲೊಮಾ ಅಭ್ಯರ್ಥಿಗಳಿಗೆ ಭಾನುವಾರ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಕಳೆದ ವರ್ಷದ ಪ್ರಶ್ನೆಗಳೇ ಪುನರಾವರ್ತನೆ ಆಗಿರುವುದು ಬೆಳಕಿಗೆ ಬಂದಿದೆ.

2013-14ನೇ ಸಾಲಿನ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪರೀಕ್ಷೆಗೆ ಹಾಜರಾಗಿದ್ದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದ ವಿದ್ಯಾರ್ಥಿಗಳು `ಪ್ರಜಾವಾಣಿ'ಗೆ ಪ್ರಶ್ನೆಪತ್ರಿಕೆಗಳ ಪ್ರತಿಯನ್ನು ಒದಗಿಸಿದ್ದು, ಪ್ರಶ್ನೆಗಳು ಪುನರಾವರ್ತನೆ ಆಗಿರುವುದು ಖಚಿತವಾಗಿದೆ.

ಒಟ್ಟು 180 ಅಂಕಗಳನ್ನು ಹೊಂದಿರುವ ಪ್ರಶ್ನೆಪತ್ರಿಕೆ ಮೂರು ವಿಭಾಗಗಳನ್ನು ಒಳಗೊಂಡಿದೆ. `ಎ' ಮತ್ತು `ಬಿ' (ಗಣಿತ ಮತ್ತು ವಿಜ್ಞಾನ) ವಿಭಾಗ ಎಲ್ಲರಿಗೂ ಕಡ್ಡಾಯವಾಗಿದ್ದು, ತಲಾ 40 ಅಂಕಗಳ ಪ್ರಶ್ನೆಗಳನ್ನು ನೀಡಲಾಗಿದೆ. `ಸಿ' ವಿಭಾಗ 100 ಅಂಕಗಳನ್ನು ಹೊಂದಿದ್ದು, ಪ್ರತಿಯೊಂದು ಸಂಯೋಜನೆಗೂ ಪ್ರತ್ಯೇಕ ಪ್ರಶ್ನೆಪತ್ರಿಕೆ ನೀಡಲಾಗಿದೆ.

ಮೇಲಿನ ಮೂರೂ ವಿಭಾಗಗಳಲ್ಲಿ ಪ್ರಶ್ನೆಗಳು ಪುನರಾವರ್ತನೆ ಆಗಿವೆ. ಕಳೆದ ವರ್ಷದ ಪ್ರಶ್ನೆಗಳನ್ನೇ ಯಥಾವತ್ತಾಗಿ ನೀಡಲಾಗಿದೆ. ಪ್ರಶ್ನೆಗಳ ಸಂಖ್ಯೆಯನ್ನು ಮಾತ್ರ ಹಿಂದೆ - ಮುಂದೆ ಮಾಡಲಾಗಿದೆ ಎಂದು ವಿದ್ಯಾರ್ಥಿಗಳು ದೂರಿದರು.

ಕಳೆದ ವರ್ಷ ಪಠ್ಯಕ್ಕೆ ಸೇರದ 20 ಪ್ರಶ್ನೆಗಳನ್ನು ನೀಡಲಾಗಿತ್ತು. ಈ ವಿಷಯವನ್ನು ಪ್ರಾಧಿಕಾರದ ಗಮನಕ್ಕೆ ತಂದ ನಂತರ ಕೃಪಾಂಕ ನೀಡಲಾಗಿತ್ತು. ಇಷ್ಟಾದರೂ ಪ್ರಾಧಿಕಾರ ಎಚ್ಚೆತ್ತುಕೊಂಡಿಲ್ಲ. ಈ ವರ್ಷವೂ ಪಠ್ಯಕ್ಕೆ ಹೊರತಾದ ಪ್ರಶ್ನೆಗಳನ್ನು ನೀಡಲಾಗಿದೆ ಎಂದು ಟೀಕಿಸಿದರು.

`ನಾನು ಪ್ರಶ್ನೆ ಪತ್ರಿಕೆಯನ್ನು ನೋಡಿಲ್ಲ. ಕೆಲ ಪ್ರಶ್ನೆಗಳು ಪ್ರತಿ ವರ್ಷ ಪುನರಾವರ್ತನೆ ಆಗುತ್ತವೆ. ಆ ರೀತಿ ಆಗಿರಬಹುದು ಅಷ್ಟೇ. ಮರು ಪರೀಕ್ಷೆ  ನಡೆಸುವ ಪ್ರಶ್ನೆಯೇ ಇಲ್ಲ. ಪರೀಕ್ಷೆಯಲ್ಲಿ ನಕಲು ಆಗಿಲ್ಲ' ಎಂದು  ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಪಿ.ಕುಲಕರ್ಣಿ `ಪ್ರಜಾವಾಣಿ'ಗೆ ತಿಳಿಸಿದರು.

24,255 ಅಭ್ಯರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದರು. ಈ ಪೈಕಿ 7,099 ಮಂದಿ ಬೆಂಗಳೂರಿನ 14 ಕೇಂದ್ರಗಳಲ್ಲಿ ಪರೀಕ್ಷೆ ತೆಗೆದುಕೊಂಡಿದ್ದರು. ಶೇ 87.39ರಷ್ಟು ಮಂದಿ ಪರೀಕ್ಷೆಗೆ ಹಾಜರಾಗಿದ್ದರು ಎಂದು ತಿಳಿಸಿದರು.

ಡಿಪ್ಲೊಮಾ ಅಭ್ಯರ್ಥಿಗಳಿಗೆ ಹಗಲು ಮತ್ತು ಸಂಜೆ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಎಂಜಿನಿಯರಿಂಗ್ ಮೂರನೇ ಸೆಮಿಸ್ಟರ್‌ಗೆ ನೇರವಾಗಿ ಪ್ರವೇಶ ಪಡೆಯಲು ಅವಕಾಶ ಇದೆ. ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಕಾಲೇಜುಗಳಲ್ಲಿ ಲಭ್ಯವಿರುವ ಸರ್ಕಾರಿ ಕೋಟಾದ ಸೀಟುಗಳಿಗೆ ಪ್ರವೇಶ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ದಾಖಲೆಗಳ ಪರಿಶೀಲನೆ: ವೈದ್ಯಕೀಯ/ದಂತ ವೈದ್ಯಕೀಯ, ಎಂಜಿನಿಯರಿಂಗ್ ಮತ್ತಿತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಹತೆ ಪಡೆದಿರುವ 49,001ರಿಂದ 55000 ರ‌್ಯಾಂಕ್‌ವರೆಗಿನ ಅಭ್ಯರ್ಥಿಗಳಿಗೆ ಸೋಮವಾರ ಮೂಲ ದಾಖಲೆಗಳ ಪರಿಶೀಲನೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT