ADVERTISEMENT

ಪುರಾಣದಿಂದ ಬಂಡಾಯಕ್ಕೆ ಧುಮುಕಿದ ಕುವೆಂಪು: ಹನೂರು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2015, 19:30 IST
Last Updated 20 ಏಪ್ರಿಲ್ 2015, 19:30 IST

ಮೈಸೂರು: ಕುವೆಂಪು ಅವರು ಆರಂಭದಲ್ಲಿ ಪುರಾಣ, ನಂತರ ರಮ್ಯ, ಆಮೇಲೆ ಪಾಶ್ಚಿಮಾತ್ಯ ಸಾಹಿತ್ಯಕ್ಕೆ ಹೆಚ್ಚು ಮಾರುಹೋಗಿ, ಕೊನೆಗೆ ದಲಿತ– ಬಂಡಾಯದ ಆಶಯಕ್ಕೆ ಧುಮುಕಿದರು ಎಂದು ಹಿರಿಯ ಸಾಹಿತಿ ಪ್ರೊ.ಕೃಷ್ಣಮೂರ್ತಿ ಹನೂರು ಅಭಿಪ್ರಾಯಪಟ್ಟರು.

ಡಾ.ಬಾಬು ಜಗಜೀವನರಾಂ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಹಾಗೂ ಭಾರತೀ ಪ್ರಕಾಶನ, ಬಳಗ ಮೈಸೂರು ಸಹಭಾಗಿತ್ವದಲ್ಲಿ ಸೋಮವಾರ ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಸವರಾಜು ಕುಕ್ಕರಹಳ್ಳಿ ಅವರ ‘ಬಾಳಾಟ’ ಕಥಾಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕುವೆಂಪು ಅವರು ವಾಸ್ತವದಲ್ಲಿ ದಲಿತ, ಬಂಡಾಯ ಪರಂಪರೆಯವರು. ಆದರೆ, ಅವರಿಗೆ ಆರಂಭದಲ್ಲಿ ಹೆಚ್ಚು ಕಾಡಿದ್ದು ಪುರಾಣ, ಆ ನಂತರ ರಮ್ಯ ಹಾಗೂ ಪಾಶ್ಚಿಮಾತ್ಯ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡರು. ಅವರ ಅಂತರಂಗದಲ್ಲಿದ್ದ ಬಂಡಾಯ ನಂತರದ ಸಾಹಿತ್ಯದಲ್ಲಿ ಹೊರಹೊಮ್ಮಲು ಆರಂಭಿಸಿತು ಎಂದು ವ್ಯಾಖ್ಯಾನಿಸಿದರು.

‘ಕುವೆಂಪು ಅವರು ಶ್ರಮ ಬದುಕನ್ನು ಗೌರವಿಸುವುದು ನಿಜವಾದರೂ, ‘ಉಳುವ ಯೋಗಿಯ ನೋಡಲ್ಲಿ’ ಎನ್ನುವ ಮೂಲಕ ಯೋಗವನ್ನು ಅದರಲ್ಲಿ ಬೆರೆಸಿದರು. ಆದರೆ, ಶಿವರಾಮ ಕಾರಂತರ ದೃಷ್ಟಿಕೋನ ಬೇರೆ. ಅವರು ಶ್ರಮಜೀವನವನ್ನು ‘ಚೋಮನದುಡಿ’ ಕಾದಂಬರಿಯ ಮೂಲಕ ‘ಸುಡುವಾಸ್ತವ’ವನ್ನು ತೋರಿಸಿದರು. ಇವರಿಬ್ಬರ ಮನಸ್ಸಿನಲ್ಲೂ ಬಂಡಾಯದ ಆಶಯವೇ ಇತ್ತು. ಇವರಿಬ್ಬರನ್ನೂ ಸಮಾನವಾಗಿಯೇ ನಾವು ಸ್ವೀಕರಿಸಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.