
ಮೈಸೂರು: ತಾಲ್ಲೂಕಿನ ಟಿ. ಕಾಟೂರಿನ ತಮ್ಮ ತೋಟದ ಮನೆಯಲ್ಲಿ ಭಾನುವಾರ ನಡೆದ ಪೂಜಾ ಕೈಂಕರ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡಿದ್ದರು.
ನಿಗದಿಯಂತೆ ರಸ್ತೆ ಮಾರ್ಗದ ಮೂಲಕ ಬೆಳಿಗ್ಗೆ 11.30ಕ್ಕೆ ಸಿದ್ದರಾಮಯ್ಯ ಅವರು ಮೈಸೂರಿಗೆ ಬಂದರು. ಟಿ.ಕೆ. ಬಡಾವಣೆಯಲ್ಲಿರುವ ತಮ್ಮ ನಿವಾಸದ ಎದುರು ಪೊಲೀಸರಿಂದ ಗೌರವ ಶ್ರೀರಕ್ಷೆ ಸ್ವೀಕರಿಸಿದರು.
ಪೊಲೀಸ್ ಕಮಿಷನರ್ ಬಿ. ದಯಾನಂದ ಸೇರಿದಂತೆ ಇತರರೊಂದಿಗೆ ಮನೆಯಲ್ಲಿದ್ದ ಸಿದ್ದರಾಮಯ್ಯ ಅವರು ಐದು ನಿಮಿಷಗಳ ಬಳಿಕ ಹೊರಬಂದರು. ಖಾಸಗಿ ಕಾರು ಏರಿ ಟಿ. ಕಾಟೂರು ಕಡೆ ಪ್ರಯಾಣ ಬೆಳೆಸಿದರು. ಮುಖ್ಯಮಂತ್ರಿಯವರ ಬೆಂಗಾವಲು ಪಡೆ, ಅಧಿಕೃತ ಸರ್ಕಾರಿ ಕಾರು ಸೇರಿದಂತೆ ಎಲ್ಲ ವಾಹನ ಹಾಗೂ ಸಿಬ್ಬಂದಿ ಟಿ.ಕೆ. ಬಡಾವಣೆಯ ನಿವಾಸದ ಬಳಿಯೇ ಉಳಿದರು.
ಕೆಲ ಹೊತ್ತಿನ ಬಳಿಕ ನೂತನ ಮೇಯರ್ ಬಿ.ಎಲ್. ಭೈರಪ್ಪ ಅವರು ಮುಖ್ಯಮಂತ್ರಿಯವರನ್ನು ಭೇಟಿಯಾಗಲು ಬಂದರು. ಅದಾಗಲೇ ಅವರು ಖಾಸಗಿ ಕಾರ್ಯಕ್ರಮಕ್ಕೆ ತೆರಳಿದ ಮಾಹಿತಿ ತಿಳಿದು ವಾಪಾಸಾದರು. ಮಧ್ಯಾಹ್ನ 12 ಗಂಟೆಗೆ ತೋಟದ ಮನೆ ತಲುಪಿದ ಮುಖ್ಯಮಂತ್ರಿ ಸಂಜೆ 4 ಗಂಟೆಯವರೆಗೆ ಇದ್ದರು. ಆಪ್ತರು ಸೇರಿದಂತೆ ಸುಮಾರು 45 ಮಂದಿ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದರು.
ಬಳಿಕ ನಗರಕ್ಕೆ ಮರಳಿ ಅಪೊಲೊ ಬಿಜೆಎಸ್ ಆಸ್ಪತ್ರೆಗೆ ಭೇಟಿ ನೀಡಿದರು. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸಪ್ರಸಾದ್ ಅವರ ಆರೋಗ್ಯ ವಿಚಾರಿಸಿದರು. ಸುಮಾರು ಅರ್ಧ ಗಂಟೆ ಅವರೊಂದಿಗೆ ಮಾತುಕತೆ ನಡೆಸಿದರು.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಶ್ರೀನಿವಾಸಪ್ರಸಾದ್ ಅವರು ಗುಣಮುಖರಾಗಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದ್ದು, ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ’ ಎಂದರು.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಮಂಜುಳಾ ಮಾನಸ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಡಾ.ಪುಷ್ಟಾ ಅಮರನಾಥ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಆರ್. ಮೋಹನಕುಮಾರ್ ಹಾಜರಿದ್ದರು.
ಸ್ಪೀಕರ್ ನಿರ್ಧಾರ
ಸೋಮವಾರದಿಂದ ಆರಂಭವಾಗುವ ಅಧಿವೇಶನದಲ್ಲಿ ಯಾವ ಚರ್ಚೆಗಳು ನಡೆಯಬೇಕು ಎಂಬುದನ್ನು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ನಿರ್ಧರಿಸುತ್ತಾರೆ. ವಿರೋಧ ಪಕ್ಷಗಳು ಕೈಗೆತ್ತಿಕೊಳ್ಳುವ ವಿಚಾರಗಳ ಆಧಾರದ ಮೇಲೆ ಚರ್ಚೆಗಳು ನಡೆಯುತ್ತವೆ ಎಂದು ಮುಖ್ಯಮಂತ್ರಿ ತಿಳಿಸಿದರು.
*
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಬಿಜೆಪಿ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದು, ಮಡಿಕೇರಿಯ ಗಲಭೆಗೆ ಬಿಜೆಪಿಯೇ ನೇರ ಹೊಣೆ
- ಸಿದ್ದರಾಮಯ್ಯ,
ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.