
ಬೆಂಗಳೂರು: ಬೇಸಗೆದಿನಗಳು ಕಳೆಯುತ್ತಾ, ಚೈತ್ರದ ಚಿಗುರು ನಳನಳಿಸಲಾರಂಬಿಸಿದೆ. ಅನ್ನದಾತರು ಮುಂಗಾರು ಮಳೆಯತ್ತ ಚಿತ್ತಹರಿಸಿದ್ದಾರೆ.
ಪೂರ್ವ ಮುಂಗಾರಿನ ಮೊದಲ ಮಳೆ ಅಶ್ವಿನಿ ಏ.14ರಿಂದ ಆರಂಭವಾಗಿದ್ದು, ಪಾದಾರ್ಪಣೆ ಮಾಡಿದ ಎರಡನೇ ದಿನ ಹೊಸಪೇಟೆ, ಬೀದರ್‌ನಲ್ಲಿ ತಂಪೆರೆದು, ಮುಂಗಾರಿಗೆ ಮುನ್ನುಡಿ ಬರೆದಿದೆ.
ವಿಪರೀತ ಬಿಸಿಲು ಮತ್ತು ಝಳ ಇದ್ದು, ಮೊದಲ ಮಳೆ ಆರಂಭದಲ್ಲೇ ಬೀದ್ದಿರುವುದು ರೈತರಲ್ಲಿ ಭರವಸೆ ಮೂಡಿಸುತ್ತಿದೆ. ಉತ್ತಮ ಮಳೆಯಾದರೆ ಜನ–ಜಾನುವಾರುಗಳಿಗೆ ಕುಡಿಯಲು ಮತ್ತು ಬಳಕೆಗೆ ನೀರಿನ ಕೊರತೆ ನೀಗುತ್ತದೆ.
ಅಶ್ವಿನಿ ಮತ್ತು ಭರಣಿ, ಕೃತ್ತಿಕಾ ಮಳೆ ಹದವಾದ ಹಸಿಯಾಗುವಂತೆ ಸುರಿದರೆ ಭೂಮಿ ಉಳುಮೆಗೆ ನೆರವಾಗುತ್ತದೆ. ರೈತರು ಭೂಮಿ ಸಿದ್ಧಪಡಿಸಿಕೊಂಡು ಬಿತ್ತನೆಗೆ ತಯಾರಿ ನಡೆಸುತ್ತಾರೆ. ರೋಹಿಣಿ ಮಳೆ ಬಿದ್ದಾಗ ಊಟದ ಜೋಳ ಬಿತ್ತನೆ ಮಾಡುತ್ತಾರೆ. ಏ.26ರವರೆಗೆ ಅಶ್ವಿನಿ ಮಳೆ ಇರಲಿದೆ. ಏ27ರಿಂದ ಭರಣಿ, ಆರಂಭವಾಗಲಿದೆ. ರೈತರ ಪಾಲಿಗೆ ಈ ನಾಲ್ಕು ಮಳೆಗಳು ಅತ್ಯಂತ ಮಹತ್ವದ್ದು ಹಾಗೂ ಫಸಲಿನ ನಿರೀಕ್ಷೆಯನ್ನೂ ಮೂಡಿಸುತ್ತವೆ.
ವಾಡಿಕೆಯಂತೆ ಜೂನ್‌ನಲ್ಲಿ ನೈರುತ್ಯ ಮುಂಗಾರು ಆರಂಭವಾಗಲಿದೆ.
ಹೊಸಪೇಟೆಯಲ್ಲಿ ಬಿರುಗಾಳಿ ಸಮೇತ ಒಂದು ತಾಸು ಜೋರು ಮಳೆ
 ಹೊಸಪೇಟೆ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ ಸುಮಾರು ಒಂದು ಗಂಟೆ ಸತತವಾಗಿ ಮಳೆಯಾಯಿತು.
ಮಧ್ಯಾಹ್ನ ಹನ್ನೆರಡು ಗಂಟೆಗೆ ದಟ್ಟ ಕಾರ್ಮೋಡ ಆವರಿಸಿಕೊಂಡಿತ್ತು. ನಂತರ ಭಾರಿ ಬಿರುಗಾಳಿ ಬೀಸಿದ ಬಳಿಕ ಮಳೆ ಶುರುವಾಯಿತು. ಕೆಂಡದಂತಹ ಬಿಸಿಲಿನಿಂದ ಕಾದು ಕಾವಲಿಯಾಗಿದ್ದ ಇಳೆ ಮಳೆಯಿಂದ ತಂಪಾಗಿದೆ.
ಬೀದರ್‌ನಲ್ಲಿ ಗಾಳಿ ಮಳೆ
 ಬೀದರ್‌ನಲ್ಲಿ ಮಧ್ಯಾಹ್ನ ಜೋರಾಗಿ ಗಾಳಿ ಬೀಸುತ್ತಿದ್ದು, ಮಳೆ ಆರಂಭವಾಗಿದೆ.
ಹೊಸಪೇಟೆಯಲ್ಲಿ ಬಿರುಗಾಳಿ ಸಮೇತ ಸುರಿದ ಜೋರು ಮಳೆಯಲ್ಲಿ ಸಾಗಿದ ಬೈಕ್ ಸವಾರರು. –ಪ್ರಜಾವಾಣಿ ಚಿತ್ರಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.