ಬೆಂಗಳೂರು: ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣದ ಐದನೇ ಆರೋಪಿ ಗಂಗವಾಣಿ ಎಂಬುವವರನ್ನು ಹೈಕೋರ್ಟ್ ಮಂಗಳವಾರ ಆರೋಪ ಮುಕ್ತಗೊಳಿಸಿದೆ.
ಆರೋಪ ರದ್ದತಿ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್.ಎನ್.ಸತ್ಯನಾರಾಯಣ ಅವರಿದ್ದ ಏಕಸದಸ್ಯ ಪೀಠ ನಡೆಸಿತು.
2006ರಲ್ಲಿ ವೆಂಕಟೇಶ್ ಎಂಬುವರು ವಾಣಿಜ್ಯ ಉದ್ದೇಶಕ್ಕಾಗಿ ಪೇಜಾವರ ಶ್ರೀಗಳಿಂದ 12 ಲಕ್ಷ ಸಾಲ ಪಡೆದಿದ್ದು, ಅದನ್ನು ಹಿಂತಿರುಗಿಸಿರಲಿಲ್ಲ. ಈ ಸಂಬಂಧ ತಮ್ಮ ಮೇಲೆ ಹಲ್ಲೆ ನಡೆಸಲಾಯಿತು ಎಂದು ವೆಂಕಟೇಶ್ ಅವರು ಪೇಜಾವರ ಸ್ವಾಮೀಜಿ ಮತ್ತು ಅವರ ಅನುಯಾಯಿಗಳ ಮೇಲೆ ಹನುಮಂತನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಪ್ರಕರಣದಲ್ಲಿ ಅಧೀನ ನ್ಯಾಯಾಲಯ ಪೇಜಾವರರು ಸೇರಿದಂತೆ ನಾಲ್ವರನ್ನು ಆರೋಪ ಮುಕ್ತಗೊಳಿಸಿತ್ತು.
ನಿತ್ಯ ವಿಚಾರಣೆಗೆ ಆದೇಶ: ಮಾನವ ಕಳ್ಳಸಾಗಣೆ ಜಾಲದಿಂದ ರಕ್ಷಿಸಲಾದ ಬಾಂಗ್ಲಾದೇಶ ಮೂಲದ ಯುವತಿಯ ಪ್ರಕರಣದ ವಿಚಾರಣೆಯನ್ನು ಪ್ರತಿನಿತ್ಯ ನಡೆಸುವಂತೆ ಅಧೀನ ನ್ಯಾಯಾಲಯಕ್ಕೆ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.
ಯುವತಿ ಪರವಾಗಿ ‘ಜಸ್ಟಿಸ್ ಅಂಡ್ ಕೇರ್’ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರಿದ್ದ ಏಕಸದಸ್ಯ ಪೀಠ ನಡೆಸಿತು. ಯುವತಿ ಎರಡು ವರ್ಷಗಳಿಂದ ಪುನರ್ವಸತಿ ಕೇಂದ್ರದಲ್ಲಿದ್ದು, ಅಧೀನ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ವಿಳಂಬವಾಗುತ್ತಿದೆ. ಇದರಿಂದಾಗಿ ವಿಚಾರಣೆಯನ್ನು ಶೀಘ್ರ ನಡೆಸುವಂತೆ ಅರ್ಜಿಯಲ್ಲಿ ಕೋರಲಾಗಿತ್ತು. ಯುವತಿಯನ್ನು ಬಾಂಗ್ಲಾದೇಶಕ್ಕೆ ಕಳುಹಿಸಿಕೊಟ್ಟು, ನಂತರ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸುವಂತೆ ಯುವತಿ ಪರ ವಕೀಲರು ಪೀಠಕ್ಕೆ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.