ಬೆಂಗಳೂರು: ಸಹೋದ್ಯೋಗಿಗಳ ಮೇಲೆ ದೌರ್ಜನ್ಯ ನಡೆಸಿರುವ ಪೊಲೀಸರ ಮೇಲೆ ಸರ್ಕಾರ ಶಿಸ್ತು ಕ್ರಮ ಜರುಗಿಸಲೇಬೇಕೆಂದು ಪಟ್ಟು ಹಿಡಿದಿರುವ ವಕೀಲರು ಶುಕ್ರವಾರವೂ ಕಲಾಪ ಬಹಿಷ್ಕರಿಸಿ ಇಲ್ಲಿನ ಸಿಟಿ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ವಕೀಲರ ಸಂಘದ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ಪದಾಧಿಕಾರಿಗಳು ಹೋರಾಟಕ್ಕೆ ಕೈಜೋಡಿಸುವ ಮೂಲಕ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಅಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ನ್ಯಾಯಾಲಯಗಳ ಒಂದು ಸಾವಿರಕ್ಕೂ ಹೆಚ್ಚು ವಕೀಲರು ಹೋರಾಟ ಬೆಂಬಲಿಸಿ ಶುಕ್ರವಾರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವಕೀಲರಿಗೆ ಥಳಿಸಿರುವ ಮತ್ತು ಮಹಿಳಾ ವಕೀಲರೊಂದಿಗೆ ಅನುಚಿತವಾಗಿ ನಡೆದುಕೊಂಡಿರುವ ಪೊಲೀಸರನ್ನು ಅಮಾನತು ಮಾಡಲೇಬೇಕು. ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಸರ್ಕಾರ ಈ ಬೇಡಿಕೆಗಳನ್ನು ಈಡೇರಿಸುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಮೂರ‌್ನಾಲ್ಕು ದಿನಗಳಲ್ಲಿ ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಜೈಲ್ ಭರೋ ಚಳವಳಿ ನಡೆಸಲಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
`ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಅವರ ಕುಮ್ಮಕ್ಕಿನಿಂದಲೇ ಪೊಲೀಸರು ವಕೀಲರ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಆದ್ದರಿಂದ ಮಿರ್ಜಿ ಅವರನ್ನು ವರ್ಗಾವಣೆ ಮಾಡಲೇಬೇಕು. ಸರ್ಕಾರಿ ಹುದ್ದೆಗಳಲ್ಲಿರುವ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು, ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು ಮತ್ತು ಅಡ್ವೊಕೇಟ್ ಜನರಲ್ ಅವರು ಕೂಡಲೇ ರಾಜೀನಾಮೆ ನೀಡಿ ಹೋರಾಟವನ್ನು ಬೆಂಬಲಿಸಬೇಕು~ ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.
ಪ್ರತಿಭಟನೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, `ವಕೀಲರ ಬೇಡಿಕೆಗಳಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಬೇಡಿಕೆಗಳನ್ನು ಈಡೇರಿಸುವವರೆಗೆ ಸರ್ಕಾರದೊಂದಿಗೆ ರಾಜಿ ಪ್ರಶ್ನೆಯೇ ಇಲ್ಲ. ಪೊಲೀಸರಿಂದ ದೌರ್ಜನ್ಯಕ್ಕೆ ಒಳಗಾಗಿರುವ ವಕೀಲರಿಗೆ ಪರಿಹಾರ ನೀಡಬೇಕು. ವಕೀಲರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಪ್ರತ್ಯೇಕ ಸುದ್ದಿವಾಹಿನಿ ಮತ್ತು ಪತ್ರಿಕೆ ಆರಂಭಿಸಲಾಗುತ್ತದೆ~ ಎಂದರು. `ಪೊಲೀಸರು ಮಹಿಳಾ ವಕೀಲರೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದಾರೆ. ಪೊಲೀಸರ ಈ ದೌರ್ಜನ್ಯವನ್ನು ಸಹಿಸಲು ಸಾಧ್ಯವಿಲ್ಲ. ಈ ಬಗ್ಗೆ ಪ್ರಧಾನಮಂತ್ರಿ ಮತ್ತು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ದೂರು ನೀಡಲಾಗುತ್ತದೆ. ಆತ್ಮರಕ್ಷಣೆಗಾಗಿ ಮಹಿಳಾ ವಕೀಲರ ಸೇನೆ ಕಟ್ಟಿ ಅವರಿಗೆ ಕರಾಟೆ ತರಬೇತಿ ನೀಡಲಾಗುತ್ತದೆ~ ಎಂದು ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಹೇಳಿದರು.
ವಕೀಲರು ಸಿಟಿ ಸಿವಿಲ್ ನ್ಯಾಯಾಲಯದಿಂದ ಹೈಕೋರ್ಟ್‌ವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಲು ಉದ್ದೇಶಿಸಿದ್ದರು. ಆದರೆ, ಪೊಲೀಸರು ನಿಷೇಧಾಜ್ಞೆ ಜಾರಿಗೊಳಿಸಿದ್ದರಿಂದ ಪ್ರತಿಭಟನಾ ರ‌್ಯಾಲಿ ನಿರ್ಧಾರದಿಂದ ಹಿಂದೆ ಸರಿದರು. ಪ್ರತಿಭಟನಾ ಸಭೆಯಲ್ಲಿ ಕ್ರಾಂತಿ ಗೀತೆಗಳು ಹಾಗೂ ಕವಿತೆಗಳನ್ನು ಹಾಡಲಾಯಿತು. ವಕೀಲರ ಪ್ರತಿಭಟನೆ ಹಿನ್ನೆಲೆಯಲ್ಲಿ ಸರ್ಕಾರಿ ಕಾಲೇಜಿಗೆ ರಜೆ ಘೋಷಿಸಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಸುತ್ತಮುತ್ತಲ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಮೂರು ಮಂದಿ ಜಂಟಿ ಪೊಲೀಸ್ ಕಮಿಷನರ್‌ಗಳು ಮತ್ತು ಎಂಟು ಡಿಸಿಪಿಗಳು ಸೇರಿದಂತೆ ಒಂದು ಸಾವಿರ ಪೊಲೀಸರು, ರಾಜ್ಯ ಮೀಸಲು ಪೊಲೀಸ್ ಪಡೆ ಹಾಗೂ ಕೇಂದ್ರ ಮೀಸಲು ಪೊಲೀಸ್ ಪಡೆಯ 30 ತುಕಡಿ, ಕ್ಷಿಪ್ರ ಕಾರ್ಯಾಚರಣೆ ಪಡೆಯ (ಆರ್‌ಎಎಫ್) ನಾಲ್ಕು ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿತ್ತು.
ಪೊಲೀಸರ ಧರಣಿ: ಈ ನಡುವೆ ನಗರದ ಬಹುತೇಕ ಠಾಣೆಗಳ ಪೊಲೀಸರು ವಕೀಲರು, ಪೊಲೀಸರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವ ಮೂಲಕ ಸಾಂಕೇತಿಕ ಧರಣಿ ನಡೆಸಿದರು. ಸಹೋದ್ಯೋಗಿಗಳ ಮೇಲೆ ವಕೀಲರು ಕಲ್ಲು ತೂರಾಟ ನಡೆಸಿ ಹಲ್ಲೆ ಮಾಡಿದ್ದಾರೆ. ಅಲ್ಲದೇ ಪೊಲೀಸರ ವಿರುದ್ಧ ಸುಳ್ಳು ದೂರುಗಳನ್ನು ಸಹ ದಾಖಲಿಸಿದ್ದಾರೆ ಎಂದು ಆರೋಪಿಸಿದ ಪೊಲೀಸರು ಇಡೀ ದಿನ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದರು.
ಸಿಐಡಿ ಡಿಜಿಪಿ ಪರಿಶೀಲನೆ: ಸಿಟಿ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಮಾ.2ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯ ಆಂತರಿಕ ತನಿಖೆ ಚುರುಕುಗೊಂಡಿದ್ದು, ಸಿಐಡಿ ಡಿಜಿಪಿ ರೂಪಕ್‌ಕುಮಾರ್ ದತ್ತ ನೇತೃತ್ವದ ಅಧಿಕಾರಿಗಳ ತನಿಖಾ ತಂಡವು ಘಟನಾ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿತು.
ಬೆಳಿಗ್ಗೆ 10 ಗಂಟೆ ಸುಮಾರಿಗೆ ಸ್ಥಳಕ್ಕೆ ಬಂದ ತನಿಖಾ ತಂಡವು ಒಂದು ತಾಸಿಗೂ ಹೆಚ್ಚು ಕಾಲ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿತು. ಪೊಲೀಸರೇ ವಕೀಲರ ಮೇಲೆ ಹಲ್ಲೆ ನಡೆಸಿ ವಾಹನಗಳನ್ನು ಸುಟ್ಟು ಹಾಕಿದ್ದಾರೆ ಎಂದು ಸುಬ್ಬಾರೆಡ್ಡಿ ಹಾಗೂ ವಕೀಲರ ಸಂಘದ ಪದಾಧಿಕಾರಿಗಳು ದತ್ತ ಅವರ ಬಳಿ ದೂರಿದರು. ಘಟನೆ ನಡೆದ ಸಂದರ್ಭದಲ್ಲಿ ಚಿತ್ರೀಕರಿಸಲಾಗಿದ್ದ ಸಿ.ಡಿ ಮತ್ತು ಛಾಯಾಚಿತ್ರಗಳನ್ನು ವಕೀಲರು ತನಿಖಾ ತಂಡಕ್ಕೆ ನೀಡಿದರು.
ಕಕ್ಷಿದಾರರಿಗೆ ತೊಂದರೆ: ಮುಖ್ಯ ನ್ಯಾಯಮೂರ್ತಿಗಳ ಎಚ್ಚರಿಕೆ, ತರಾಟೆ ಯಾವುದನ್ನೂ ಲೆಕ್ಕಿಸದ ವಕೀಲರು ಪ್ರತಿಭಟನೆ, ಬಹಿಷ್ಕಾರವನ್ನು ಮುಂದುವರಿಸಿದ್ದಾರೆ. ವಾರದಿಂದ ಸಿವಿಲ್ ಕೋರ್ಟ್ ಕಲಾಪ ಸ್ಥಗಿತಗೊಂಡಿದೆ. ಶುಕ್ರವಾರವಾದರೂ ಕಲಾಪ ನಡೆಯಬಹುದು ಎಂದು ದೂರದ ಊರುಗಳಿಂದ ಬಂದಿದ್ದ ಕಕ್ಷಿದಾರರು, `ಬಂದ ದಾರಿಗೆ ಸುಂಕವಿಲ್ಲ~ ಎಂದು ಹೋದರು.
ಹೈಕೋರ್ಟ್ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಬಹುತೇಕ ವಕೀಲರು ಸಿವಿಲ್ ಕೋರ್ಟ್‌ನಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಸಭೆಗೆ ತೆರಳಿದ್ದ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಆದಿಯಾಗಿ ಹಲವು ನ್ಯಾಯಮೂರ್ತಿಗಳು ಮಧ್ಯಾಹ್ನ ಒಂದು ಗಂಟೆಗೇ ಕಲಾಪ ಮುಗಿಸಬೇಕಾಗಿ ಬಂತು.
ತನಿಖೆಗೆ ಆದೇಶ: ಈ ಮಧ್ಯೆ, ಸಿವಿಲ್ ಕೋರ್ಟ್‌ನಲ್ಲಿ ನಡೆದಿರುವ ಘಟನೆಗೆ ಪೊಲೀಸರೇ ಕಾರಣ ಎಂದು ದೂರಿ ಬೆಂಗಳೂರು ವಕೀಲರ ಸಂಘವು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ (ಎಸ್‌ಎಚ್‌ಆರ್‌ಸಿ ) ದೂರು ಸಲ್ಲಿಸಿದೆ. ಪೊಲೀಸರು ಇದೇ ರೀತಿ ತಮ್ಮ ಮೇಲೆ ಹಲವು ಬಾರಿ ಹಲ್ಲೆ ನಡೆಸಿರುವುದಾಗಿ ವಕೀಲರು ಆರೋಪಿಸಿದ್ದಾರೆ. ಹಲ್ಲೆ ತಡೆಗೆ ಸಂಬಂಧಿಸಿದಂತೆ ಈವರೆಗೆ ತೆಗೆದುಕೊಂಡಿರುವ ಕ್ರಮ, ಮುಂದೆ ತೆಗೆದುಕೊಳ್ಳುವ ಕ್ರಮ ಇತ್ಯಾದಿಗಳ ಬಗ್ಗೆ ತಿಂಗಳಲ್ಲಿ ವರದಿ ನೀಡುವಂತೆ ಎಸ್‌ಎಚ್‌ಆರ್‌ಸಿ ಸರ್ಕಾರಕ್ಕೆ ಆದೇಶಿಸಿದೆ. ಅಂತೆಯೇ, ಸಿವಿಲ್ ಕೋರ್ಟ್‌ನಲ್ಲಿ ನಡೆದಿರುವ ಘಟನೆ ಕುರಿತಾಗಿಯೂ ವರದಿ ನೀಡಲು ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.