ಚಿಕ್ಕಮಗಳೂರು: ನಗರದ ಬಸವನಹಳ್ಳಿ ಠಾಣೆ ವ್ಯಾಪ್ತಿಯ ಗೌರಿಕಾಲುವೆ ಬಡಾವಣೆಯ ತರಗಿನಪೇಟೆಯಲ್ಲಿ ವ್ಯಕ್ತಿಯೊಬ್ಬ ನಗರ ವೃತ್ತದ ಸರ್ಕಲ್ ಇನ್ಸ್‌ಪೆಕ್ಟರ್ ಮತ್ತು ರಕ್ಷಾ ವಾಹನದ ಹೆಡ್‌ಕಾನ್‌ಸ್ಟೆಬಲ್ ಮೇಲೆ ಬ್ಲೇಡ್ ಮತ್ತು ಚಾಕುವಿನಿಂದ ದಾಳಿ ಮಾಡಿರುವ ಘಟನೆ ಬುಧವಾರ ಸಂಜೆ ನಡೆದಿದೆ.
ನಗರದ ವೃತ್ತದ ಸರ್ಕಲ್ ಇನ್ಸ್‌ಪೆಕ್ಟರ್ ಕೃಷ್ಣರಾಜು ಮತ್ತು ರಕ್ಷಾ ವಾಹನದ ಹೆಡ್‌ಕಾನ್‌ಸ್ಟೆಬಲ್ ಕುಮಾರ್‌ಗೆ ಗಾಯಗಳಾಗಿವೆ. ಇಬ್ಬರೂ ಅದೃಷ್ಟ ವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಬ್ಬರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿ ನಡೆಸಿದ ಆರೋಪಿ ಜಯಣ್ಣ (40) ಎಂಬಾತನನ್ನು ಬಸವನಹಳ್ಳಿ ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿ ಜಯಣ್ಣ ಮಾನಸಿಕ ಅಸ್ವಸ್ಥ ಎಂದು ಪೊಲೀಸರು ಶಂಕಿಸಿದ್ದಾರೆ.
ಘಟನೆ ಹಿನ್ನೆಲೆ: ತರಗಿನಪೇಟೆಯ ಶನೇಶ್ವರ ದೇವಾಲಯದ ಸಮೀಪ ವಾಸವಿರುವ ಜಯಣ್ಣ ತನ್ನ ತಾಯಿ ಮೇಲೆ ತೀವ್ರ ಹಲ್ಲೆ ನಡೆಸಿ, ಮನೆಯಲ್ಲಿದ್ದ ಪಾತ್ರೆ ಸಾಮಾನುಗಳನ್ನು ಹೊರಗೆ ಎಸೆದು ಗಲಾಟೆ ಮಾಡುತ್ತಿದ್ದ. ವೃದ್ಧೆಯ ನೆರವಿಗೆ ಮುಂದಾದ ನೆರೆಹೊರೆಯವರ ಮೇಲೂ ಹಲ್ಲೆ ನಡೆಸಲು ಯತ್ನಿಸಿದ್ದ. ಸ್ಥಳೀಯರು ಸಹಾಯಕ್ಕೆ ರಕ್ಷಾ ಸಿಬ್ಬಂದಿಗೆ ದೂರವಾಣಿ ಕರೆ ಮಾಡಿ, ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಭೇಟಿ ನೀಡಿದ್ದ ರಕ್ಷಾ ಸಿಬ್ಬಂದಿ ಕುಮಾರ್ ಅವರಿಗೆ ಆರೋಪಿ ಜಯಣ್ಣ ಬ್ಲೇಡ್ ಮತ್ತು ಚಾಕುವಿನಿಂದ ಕುತ್ತಿಗೆ, ಮುಖ ಹಾಗೂ ಬೆನ್ನಿನ ಭಾಗಕ್ಕೆ ದಾಳಿ ಮಾಡಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಸರ್ಕಲ್ ಇನ್ಸ್‌ಪೆಕ್ಟರ್ ಕೃಷ್ಣ ರಾಜು ಅವರಿಗೂ ಜಯಣ್ಣ ದೊಣ್ಣೆಯಿಂದ ಹಲ್ಲೆ ಮಾಡಿದ್ದು, ಕೃಷ್ಣರಾಜು ಅವರ ತಲೆಗೆ ಬಲವಾದ ಪೆಟ್ಟುಬಿದ್ದಿದೆ. ಜತೆಗಿದ್ದ ಪೊಲೀಸರು ಇಬ್ಬರು ಗಾಯಾಳುಗಳನ್ನು ತಕ್ಷಣ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರು. ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಆರೋಪಿ ಜಯಣ್ಣ ಗೌರಿಕಾಲುವೆ ನಿವಾಸಿ. ಈತನ ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿರುವ ಆರೋಪದ ಪ್ರಕರಣವೂ ಬಸವನಹಳ್ಳಿ ಠಾಣೆಯಲ್ಲಿ ದಾಖಲಾಗಿದೆ. ಈ ಹಿಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ದಾಖಲಾಗಿದ್ದಾಗ ವೈದ್ಯಕೀಯ ಉಪಕರಣ ನಾಶಪಡಿಸಿರುವ ಆರೋಪದ ಪ್ರಕರಣ ನಗರ ಠಾಣೆಯಲ್ಲಿ ದಾಖಲಾಗಿದೆ. ಅಲ್ಲದೆ, ಬಂಗಾರಪೇಟೆ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಲು ಯತ್ನಿಸಿದ ಆರೋಪದ ಪ್ರಕರಣವೂ ಈತನ ವಿರುದ್ಧ ದಾಖಲಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.