
ಬೆಂಗಳೂರು: ‘ಪೊಲೀಸರು ಠಾಣೆಯನ್ನೇ ಹಫ್ತಾ ವಸೂಲಿ ಕೇಂದ್ರವಾಗಿ ಮಾಡಿಕೊಂಡಿದ್ದಾರೆ. ಮಟ್ಕಾ, ಒಂದಂಕಿ ಲಾಟರಿ, ಜೂಜು, ವೇಶ್ಯಾವಾಟಿಕೆ, ಡಿಸ್ಕೊಥೆಕ್ಗಳು ಎಗ್ಗಿಲ್ಲದೆ ನಡೆಯುತ್ತಿವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಇಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
‘ಪೊಲೀಸರು ಸಮಾಜಘಾತುಕ ಶಕ್ತಿಗಳಿಂದ ಹಣ ಪಡೆದು ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಇದಕ್ಕೆ ಯಾರನ್ನು ಹೊಣೆ ಮಾಡಬೇಕು’ ಎಂದು ನೇರವಾಗಿ ಪ್ರಶ್ನಿಸಿದರು.
ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಅವರು ಮಾತನಾಡಿ, ಪೊಲೀಸ್ ವ್ಯವಸ್ಥೆಯಲ್ಲಿನ ಲೋಪ ದೋಷಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರದ ಎಂಟು ತಿಂಗಳಲ್ಲಿ ನಡೆದ ಪ್ರಮುಖ ಅಪರಾಧ ಪ್ರಕರಣಗಳನ್ನು ಉಲ್ಲೇಖಿಸಿ ಒಂದು ತಾಸಿಗೂ ಹೆಚ್ಚು ಕಾಲ ಮಾತನಾಡಿದರು.
ಹೊಣೆ ಹೊರಬೇಕಾಗುತ್ತದೆ: ಪೊಲೀಸರು ಮನಸ್ಸು ಮಾಡಿದರೆ ಅಕ್ರಮ ಚಟುವಟಿಕೆಗಳನ್ನು 24 ತಾಸಿನೊಳಗೆ ಮಟ್ಟ ಹಾಕಬಹುದು. ಇಂಥ ಚಟುವಟಿಕೆಗಳು ಮುಂದುವರಿದರೆ ಸಂಬಂಧಪಟ್ಟ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ವಲಯ ಐಜಿಪಿಗಳೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
‘ಶಹಾಪುರ ತಾಲ್ಲೂಕಿನಲ್ಲಿ ದಲಿತರು ಮತ್ತು ಸವರ್ಣೀಯರ ನಡುವೆ ಇತ್ತೀಚೆಗೆ ನಡೆದ ಘರ್ಷಣೆಯಲ್ಲಿ ದಲಿತ ಯುವಕ ಸಾವನ್ನಪ್ಪಿದ. ಸ್ಥಳೀಯ ಪೊಲೀಸರಿಗೆ ಗಲಭೆ ಬಗ್ಗೆ ಮೊದಲೇ ಗುಪ್ತಚರ ಮಾಹಿತಿ ಇದ್ದರೂ ತಡೆಯಲು ಮುಂದಾಗಲಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಒಂದು ವ್ಯಾನ್ ನಿಯೋಜಿಸಿದ್ದರೂ ಆ ದುರಂತ ನಡೆಯುತ್ತಿರಲಿಲ್ಲ. ಚಿಕ್ಕಮಗಳೂರಿನ ಮಸೀದಿಯೊಂದರಲ್ಲಿ ಹಂದಿಮಾಂಸ ಎಸೆದು ಕೋಮುಗಲಭೆ ಸೃಷ್ಟಿಸಿದ ಆರೋಪಿ ರಾಜಶೇಖರನನ್ನು ಕೂಡಲೇ ಬಂಧಿಸಲಿಲ್ಲ. ಇದರ ಲಾಭ ಪಡೆದ ಆತ ಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡ’ ಎಂದು ಆಕ್ಷೇಪಿಸಿದರು.
ರಿಯಲ್ ಎಸ್ಟೇಟ್ ಮಾಫಿಯಾ: ‘ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಮೈಸೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳು ಹಣದ ಬಲದಿಂದ ಪೊಲೀಸರ ಸಖ್ಯ ಬೆಳೆಸಿ ಕಾನೂನನ್ನು ದುರ್ಬಳಕೆ ಮಾಡಿಕೊಂಡು ಜನಸಾಮಾನ್ಯರ ಆಸ್ತಿಯನ್ನು ಕಬಳಿಸುತ್ತಿದ್ದಾರೆ. ಇಂಥವರು ರಾಜಕೀಯವಾಗಿ ಎಷ್ಟೇ ಪ್ರಭಾವಿಗಳಾಗಿದ್ದರೂ ಮಣೆ ಹಾಕಬೇಡಿ. ಭೂ ವಿವಾದ ಪ್ರಕರಣಗಳನ್ನು ಇತ್ಯರ್ಥ ಪಡಿಸುವ ಕೆಲಸಕ್ಕೆ ಕೈ ಹಾಕಬೇಡಿ’ ಎಂದು ಎಚ್ಚರಿಸಿದರು.
ಮೆಚ್ಚುಗೆ: ಜೈಲಿನಿಂದ ಪರಾರಿಯಾಗಿದ್ದ ಕೈದಿ ‘ಸೈಕೊ’ ಜೈಶಂಕರ್ ಮರು ಬಂಧನ, ಅಂಕೋಲಾದ ಉದ್ಯಮಿ ಆರ್.ಎನ್.ನಾಯಕ ಅವರ ಹಂತಕರು ಮತ್ತು ಬೆಂಗಳೂರಿನ ಜೈನ ಮಂದಿರದಲ್ಲಿ ನಡೆದಿದ್ದ ಕಳವು ಪ್ರಕರಣದ ಆರೋಪಿಗಳನ್ನು ಶೀಘ್ರವೇ ಬಂಧಿಸುವ ಮೂಲಕ ಪೊಲೀಸರು ಒಳ್ಳೆಯ ಕೆಲಸಗಳನ್ನೂ ಮಾಡಿದ್ದಾರೆ ಎಂದು ಮೆಚ್ಚುಗೆಯ ಮಾತುಗಳನ್ನೂ ಆಡಿದರು.
ಕ್ಯಾಂಟೀನ್ ಸೇವೆ: ಕೇಂದ್ರ ರಕ್ಷಣಾ ಪಡೆಗಳ ಸಿಬ್ಬಂದಿಗೆ ನೀಡಿರುವ ಸಿಎಸ್‌ಡಿ ಕ್ಯಾಂಟೀನ್ ಮಾದರಿಯಲ್ಲೇ ರಾಜ್ಯ ಪೊಲೀಸ್ ಸಿಬ್ಬಂದಿಗೂ ಆ ಸೇವೆಯನ್ನು ಒದಗಿಸುವ ಯೋಜನೆಗೆ ಸಿದ್ದರಾಮಯ್ಯ ಸಮಾವೇಶದಲ್ಲಿ ಚಾಲನೆ ನೀಡಿದರು.
ಈ ಯೋಜನೆಯಡಿ ಸುಮಾರು 13 ಸಾವಿರ ಪೊಲೀಸ್ ಸಿಬ್ಬಂದಿಗೆ ಮತ್ತು ಅವರ ಕುಟುಂಬದವರಿಗೆ ದಿನನಿತ್ಯದ ಬಳಕೆಯ ವಸ್ತುಗಳು ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಸಿಗಲಿವೆ. ಪ್ರಥಮ ಹಂತದಲ್ಲಿ ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ತುಮಕೂರು, ಕೋಲಾರ ಜಿಲ್ಲೆ, ಮೈಸೂರು ನಗರ, ಬೆಂಗ-ಳೂರು ನಗರ ಮತ್ತು ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಈ ಕ್ಯಾಂಟೀನ್‌ಗಳನ್ನು ಆರಂಭಿಸಲಾಗಿದೆ.
ಇನ್‌ಸ್ಪೆಕ್ಟರ್ ಬಂಧನ ಏಕಿಲ್ಲ?
‘ಕಳ್ಳರಿಂದಲೇ ಲಂಚ ಪಡೆದ ಎಚ್‌ಎಎಲ್ ಠಾಣೆ ಇನ್‌ಸ್ಪೆಕ್ಟರ್ ರಾಜೇಶ್ ವಿರುದ್ಧ ಕೇವಲ ಪ್ರಕರಣ ದಾಖಲಿಸಿ ಸೇವೆಯಿಂದ ಅಮಾನತು ಮಾಡಿದ್ದೀರಿ. ಆತ ಇಂಥ ಗಂಭೀರ ಸ್ವರೂಪದ ಅಪರಾಧ ಮಾಡಿದರೂ ಈವರೆಗೆ ಯಾಕೆ ಬಂಧಿಸಿಲ್ಲ. ಪೊಲೀಸರೇ ಈ ರೀತಿ ಭ್ರಷ್ಟಾಚಾರ, ಅಕ್ರಮಗಳಲ್ಲಿ ಭಾಗಿಯಾದರೆ ಸಾರ್ವಜನಿಕರಲ್ಲಿ ಇಲಾಖೆ ಬಗ್ಗೆ ನಂಬಿಕೆ ಹೇಗೆ ಮೂಡುತ್ತದೆ? ಮಲ್ಲೇಶ್ವರದ ಸೇಂಟ್ ಪೀಟರ್ಸ್ ಪೊಂಟಿಫಿಕಲ್ ಸೆಮಿನರಿಯ ರೆಕ್ಟರ್ ಥಾಮಸ್ ಅವರ ಕೊಲೆಯಾಗಿ 10 ತಿಂಗಳಾದರೂ ಆರೋಪಿಯನ್ನು ಏಕೆ ಪತ್ತೆ ಮಾಡಿಲ್ಲ’ ಎಂದು ನಗರ ಪೊಲೀಸ್ ಕಮಿಷನರ್ ರಾಘವೇಂದ್ರ ಔರಾದಕರ್ ಮೇಲೆ ಸಿದ್ದರಾಮಯ್ಯ ಹರಿಹಾಯ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.