ADVERTISEMENT

ಪೊಲೀಸ್ ತರಬೇತಿ ಶಾಲೆಯಲ್ಲೂ ಲಂಚ!

ರೂ 3.56 ಲಕ್ಷ ಸುಲಿಗೆ: ಅಭ್ಯರ್ಥಿಗಳ ಅಳಲು

ರಾಜೇಶ್ ರೈ ಚಟ್ಲ
Published 16 ಡಿಸೆಂಬರ್ 2012, 19:59 IST
Last Updated 16 ಡಿಸೆಂಬರ್ 2012, 19:59 IST
ಪೊಲೀಸ್ ತರಬೇತಿ ಶಾಲೆಯಲ್ಲೂ  ಲಂಚ!
ಪೊಲೀಸ್ ತರಬೇತಿ ಶಾಲೆಯಲ್ಲೂ ಲಂಚ!   

ಹುಬ್ಬಳ್ಳಿ: `ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರೇಟ್ ಘಟಕದಲ್ಲಿರುವ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯಲ್ಲಿ ಭ್ರಷ್ಟಾಚಾರ, ಲಂಚ, ಸುಲಿಗೆ ತಾಂಡವವಾಡುತ್ತಿದೆ. ಇದಕ್ಕೆ ಪೂರಕ ದಾಖಲೆಗಳೂ ನಮ್ಮಲ್ಲಿವೆ. ಈ ಬಗ್ಗೆ ತನಿಖೆ ನಡೆಸಿ ನಮ್ಮಿಂದ ಹೆಚ್ಚುವರಿಯಾಗಿ ಪಡೆದಿರುವ ಹಣವನ್ನು ಭ್ರಷ್ಟ ಅಧಿಕಾರಿಗಳಿಂದ ವಾಪಸ್ ಕೊಡಿಸಿ'

-ಸದ್ಯದಲ್ಲೇ ರಾಜ್ಯದ ವಿವಿಧ ಠಾಣೆಗಳಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿಭಾಯಿಸಲಿರುವ, ಸದ್ಯ ಈ ತಾತ್ಕಾಲಿಕ ತರಬೇತಿ ಶಾಲೆಯಲ್ಲಿ ಅಭ್ಯಾಸ ನಿರತರಾಗಿರುವ 154 ಅಭ್ಯರ್ಥಿಗಳ ಅಳಲು ಇದು !

ಈ ಕುರಿತು ಅವರು ಪೂರಕ ದಾಖಲೆಗಳ ಸಹಿತ ಪೊಲೀಸ್ ಕಮಿಷನರ್ ಬಿ.ಎ.ಪದ್ಮನಯನ ಅವರಿಗೆ ಹೆಸರು ಉಲ್ಲೇಖಿಸದೆ ದೂರು ಸಲ್ಲಿಸಿದ್ದಾರೆ. `ನಮ್ಮ ಆರೋಪಗಳ ಕುರಿತು ವಿಚಾರಣೆ ನಡೆಸಿ ಸೂಕ್ತ ಕ್ರಮ ಜರುಗಿಸಬೇಕು. ಅಕ್ರಮವಾಗಿ ನಮ್ಮಿಂದ ಐದು ತಿಂಗಳ ಅವಧಿಯಲ್ಲಿ ವಸೂಲು ಮಾಡಿರುವ 3.56 ಲಕ್ಷ ರೂಪಾಯಿ ವಾಪಸ್ ಕೊಡಿಸಬೇಕು' ಎಂದು ಭಿನ್ನವಿಸಿದ್ದಾರೆ.

ಅಷ್ಟೇ ಅಲ್ಲ, ದೂರಿನ ಪ್ರತಿಯನ್ನು ಗೃಹ ಸಚಿವ, ಗೃಹ ಕಾರ್ಯದರ್ಶಿ, ಪೊಲೀಸ್ ಮಹಾ ನಿರ್ದೇಶಕ ಮತ್ತು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಿಗೂ (ಆಡಳಿತ ಮತ್ತು ತರಬೇತಿ) ಕಳುಹಿಸಿದ್ದಾರೆ. ದೂರಿನ ಪ್ರತಿ `ಪ್ರಜಾವಾಣಿ'ಗೂ ಲಭ್ಯವಾಗಿದೆ.

`ನಾವು ಈ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದೇವೆ. ಇಲ್ಲಿನ ಮೆಸ್ ನೋಡಿಕೊಳ್ಳುತ್ತಿರುವ ಇಬ್ಬರು ಅಧಿಕಾರಿಗಳು ಒಟ್ಟಾಗಿ ಒಂದು ತಿಂಗಳಿಗೆ ಒಬ್ಬರಿಂದ ತಲಾ ರೂ 300 ಲಂಚ ಪಡೆಯುತ್ತಿದ್ದಾರೆ' ಎಂದು ದೂರಿನಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

`ಅಡುಗೆ ಬಿಲ್ ತಿಂಗಳಿಗೆ 2,000 ರೂ ತೆಗೆದುಕೊಳ್ಳುತ್ತಿದ್ದಾರೆ. ಆದರೆ ನಮಗೆ ತಿಳಿ ಸಾರು ಮತ್ತು ಅನ್ನ ಮಾತ್ರ ಕೊಟ್ಟು ಹೆಚ್ಚು ಹಣ ವಸೂಲು ಮಾಡುವ ಮೂಲಕ ಸುಲಿಗೆ ಮಾಡುತ್ತಿದ್ದಾರೆ. ಅ.14ರಂದು ಶ್ರೀಬಾಲಾಜಿ ಟ್ರೇಡಿಂಗ್ ಎಂಬ ಅಂಗಡಿಯಿಂದ ಖರೀದಿಸಿದ ಅಡುಗೆ ಸಾಮಗ್ರಿ ಬಿಲ್ಲಿನ ಒಟ್ಟು ಮೊತ್ತ ರೂ 73,742 ಇದೆ. ಆದರೆ ಇಷ್ಟೇ ವಸ್ತುಗಳನ್ನು ಬೇರೆ ಅಂಗಡಿಯಲ್ಲಿ ಖರೀದಿಸಿದರೆ ರೂ 61,502 ಆಗುತ್ತದೆ. ಒಂದೇ ಬಿಲ್‌ನಲ್ಲಿ ರೂ 12,240 ವ್ಯತ್ಯಾಸ ಇದೆ.

ಈ ಬಿಲ್‌ನಲ್ಲಿ ಅಕ್ಕಿ ಮೊತ್ತ ರೂ 37,500 ಇದೆ. ಅಷ್ಟೇ ಅಕ್ಕಿ ಬೇರೆ ಕಡೆ ಖರೀದಿಸಿದರೆ ರೂ 33,000 ಆಗುತ್ತದೆ. ಶೇಂಗಾ ಎಣ್ಣೆ 15 ಕೆ.ಜಿ.ಯ 5 ಟಿನ್‌ಗಳಿಗೆ ರೂ  7,648  ಬಿಲ್ ಇದೆ. ಬೇರೆ ಅಂಗಡಿಯಲ್ಲಿ ಖರೀದಿಸಿದರೆ ಇಷ್ಟು ಪ್ರಮಾಣದ ಎಣ್ಣೆ ರೂ  6,700 ಗೇ  ಸಿಗುತ್ತದೆ. ಈ ರೀತಿ ತಿಂಗಳಿಗೆ ಕನಿಷ್ಠ ರೂ 25,000 ಹಣ ಅಡುಗೆ ಪದಾರ್ಥಗಳ ಖರೀದಿ ಒಂದರಲ್ಲಿಯೇ ಪಡೆದುಕೊಳ್ಳುತ್ತಿದ್ದಾರೆ' ಎಂದು ತಿಳಿಸಿ, ಬಿಲ್‌ನ ಪ್ರತಿಯನ್ನೂ ದೂರಿನ ಜೊತೆ ಲಗತ್ತಿಸಿದ್ದಾರೆ.

`ಹೀಗೆ ಒಂದು ತಿಂಗಳಿಗೆ 154 ಶಿಕ್ಷಣಾರ್ಥಿಗಳಿಂದ ಲಂಚದ ರೂಪದಲ್ಲಿ ಒಟ್ಟು ರೂ 46,200 ಮತ್ತು ಅಡುಗೆ ಪದಾರ್ಥ ಖರೀದಿ ಹೆಸರಲ್ಲಿ ರೂ 25,000 ಸೇರಿ ಪ್ರತಿ ತಿಂಗಳಿಗೆ  71,200 ರೂಪಾಯಿಯಂತೆ ವಂಚಿಸಿದ್ದಾರೆ. ಐದು ತಿಂಗಳಲ್ಲಿ ಈ ಮೊತ್ತ ರೂ 3.56 ಲಕ್ಷ ಆಗಿದೆ. ಇದಕ್ಕೆ ಪೂರಕವಾಗಿ ಅಡುಗೆ ಬಿಲ್ ಝೆರಾಕ್ಸ್ ಪ್ರತಿ ನೀಡಿದ್ದೇವೆ' ಎಂದೂ ದೂರಿನಲ್ಲಿ ತಿಳಿಸಿದ್ದಾರೆ.

`ಅತ್ತ ಮುಖ ಮಾಡದಂತೆ ಆದೇಶ'
ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಪದ್ಮನಯನ, `ಶಿಕ್ಷಣಾರ್ಥಿಗಳ ದೂರಿನ ಹಿನ್ನೆಲೆಯಲ್ಲಿ ತರಬೇತಿ ಘಟಕಕ್ಕೆ ನಾನು ಮತ್ತು ಡಿಸಿಪಿ (ಅಪರಾಧ ಮತ್ತು ಸಂಚಾರ) ಭೇಟಿ ನೀಡಿ ಮಾಹಿತಿ ಪಡೆದಿದ್ದೇವೆ. ಭ್ರಷ್ಟಾಚಾರದ ಆರೋಪ ಇರುವ ಅಧಿಕಾರಿಗಳು ಅತ್ತ ಮುಖ ಮಾಡದಂತೆ ಆದೇಶಿಸಿದ್ದೇನೆ. ಆರೋಪಗಳ ಕುರಿತು ತನಿಖೆ ಮುಂದುವರಿದಿದೆ. ಪ್ರಶಿಕ್ಷಣಾರ್ಥಿಗಳಿಗೆ ನೇರವಾಗಿ ನನ್ನ ಬಳಿ ಮಾಹಿತಿ ಹಂಚಿಕೊಳ್ಳುವಂತೆ ತಿಳಿಸಿದ್ದೇನೆ.

ಅಲ್ಲದೆ, ತರಬೇತಿ ಘಟಕದಲ್ಲಿ ಅಡುಗೆ ಉಸ್ತುವಾರಿ ನೋಡಿಕೊಳ್ಳುವಂತೆ ಬೇರೆಯವರಿಗೆ ಸೂಚಿಸಲಾಗಿದೆ. ಯಾವುದೇ ಕಾರಣಕ್ಕೂ ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.