ADVERTISEMENT

`ಪೊಲೀಸ್ ಮಾಹಿತಿದಾರ ಅಲ್ಲ'

​ಪ್ರಜಾವಾಣಿ ವಾರ್ತೆ
Published 14 ಜೂನ್ 2013, 21:00 IST
Last Updated 14 ಜೂನ್ 2013, 21:00 IST

ಶೃಂಗೇರಿ: `ನಕ್ಸಲರು ಇತ್ತೀಚೆಗೆ ನಮ್ಮ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನನ್ನ ಪತಿ ಕೆಂಪಣ್ಣ ಅವರ ಮೇಲೆ ಮಾಡಿರುವ ಆಪಾದನೆಗಳು ಕೇವಲ ಕಾಲ್ಪನಿಕವಾಗಿದ್ದು, ಅವರು ನಕ್ಸಲರ ವಿರುದ್ಧ ಅಥವಾ ಪೊಲೀಸ್ ಮಾಹಿತಿದಾರರಾಗಿ ಕೆಲಸ ಮಾಡುತ್ತಿಲ್ಲ' ಎಂದು ಶೀರ್ಲು ಕೆಂಪಣ್ಣ ಅವರ ಪತ್ನಿ ಶಾರದಾ ತಿಳಿಸಿದ್ದಾರೆ.

ತಮ್ಮ ಮನೆಗೆ ಭಾನುವಾರ ನಕ್ಸಲರು ಭೇಟಿ ನೀಡಿ ಎಚ್ಚರಿಕೆ ಸಂದೇಶ ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, `ನನ್ನ ಪತಿ ಮನೆಯಲ್ಲಿ ಇಲ್ಲದಿದ್ದಾಗ ಬಂದ ನಕ್ಸಲರು, ನನ್ನ ಪತಿಯು ಪೊಲೀಸರಿಗೆ ನಕ್ಸಲರ ಚಲನ ವಲನ ಕುರಿತು ಮಾಹಿತಿ ನೀಡುತ್ತಿದ್ದಾರೆ, ಗಿರಿಜನರು, ಮಾವೋವಾದಿಗಳ ಜತೆ ಕೈಜೋಡಿಸದಂತೆ ಅಪಪ್ರಚಾರ ನಡೆಸುತ್ತಿದ್ದಾರೆ, ಆದಿವಾಸಿಗಳನ್ನು ಒಕ್ಕಲೆಬ್ಬಿಸಲು ದಲ್ಲಾಳಿ ಕೆಲಸ ಮಾಡುತ್ತಿರುವುದಾಗಿ ಅಪಾದಿಸಿದ್ದಾರೆ. ಆದರೆ ಈ ಎಲ್ಲಾ ವಿಚಾರಗಳು ಸತ್ಯಕ್ಕೆ ದೂರವಾದ ಆಪಾದನೆಗಳಾಗಿವೆ' ಎಂದರು.

`ಇತ್ತೀಚೆಗೆ ಪೊಲೀಸರು ಶೀರ್ಲು ಗ್ರಾಮಕ್ಕೆ ಬಂದು ಸಭೆ ನಡೆಸಿದಾಗ ಎಲ್ಲರ ಜೊತೆ ನನ್ನ ಪತಿಯೂ ತೆರಳಿರುವುದನ್ನು ನಕ್ಸಲರು ತಪ್ಪಾಗಿ ಭಾವಿಸಿದಂತಿದೆ. ಸರ್ಕಾರದಿಂದ ಗಿರಿಜನರಿಗೆ ಸಾಕಷ್ಟು ಸೌಲಭ್ಯ ಮತ್ತು ಭೂಮಿ ಕೊಡಿಸುವಲ್ಲಿ ನನ್ನ ಪತಿಯ ಪಾತ್ರವಿದೆ. ಗಿರಿಜನರ ಯಾವುದೇ ಕಷ್ಟ ತೊಂದರೆಗಳಿಗೆ ನನ್ನ ಪತಿಯು ಸ್ಪಂದಿಸುತ್ತಾರೆ. ಯಾವುದೇ ಗಿರಿಜನರು ನಮ್ಮ ಮೇಲೆ ನಕ್ಸಲರಿಗೆ ಯಾವ ದೂರನ್ನೂ ನೀಡುವ ಸಾಧ್ಯತೆ ಇಲ್ಲ. ನಮಗೆ ಗೊತ್ತಿಲ್ಲದೇ ನಮ್ಮಿಂದ ಯಾವುದೇ ತಪ್ಪಾಗಿದ್ದರೂ ತಿದ್ದಿಕೊಳ್ಳುತ್ತೇವೆ. ಪೊಲೀಸರಾಗಲೇ ನಕ್ಸಲರಾಗಲೀ ನಮ್ಮನ್ನು ಶಾಂತಿಯಿಂದ ಬದುಕಲು ಬಿಡಬೇಕು' ಎಂದು ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.