ADVERTISEMENT

ಪೋರನ ಬಾಣಕ್ಕೆ ಕಲಾಂ ತಬ್ಬಿಬ್ಬು!

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2010, 10:50 IST
Last Updated 26 ಡಿಸೆಂಬರ್ 2010, 10:50 IST
ಪೋರನ ಬಾಣಕ್ಕೆ ಕಲಾಂ ತಬ್ಬಿಬ್ಬು!
ಪೋರನ ಬಾಣಕ್ಕೆ ಕಲಾಂ ತಬ್ಬಿಬ್ಬು!   

ಗುಲ್ಬರ್ಗ: ಐಎಎಸ್, ಎಂಜಿನಿಯರ್, ಶಿಕ್ಷಕ, ವೈದ್ಯ, ವಿಜ್ಞಾನಿ ಆಗುವ ಕನಸುಗಳನ್ನು ಬಿತ್ತರಿಸುವ ನೀವು, ರೈತರಾಗಿ ಎಂದು ಮಕ್ಕಳಿಗೆ ಏಕೆ ಹೇಳುವುದಿಲ್ಲ?
-ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಕಲಾಂ ಅವರಿಗೆ ವಿದ್ಯಾರ್ಥಿಯೊಬ್ಬನಿಂದ ಬಂದ ಪ್ರಶ್ನೆ. ನೆರೆದಿದ್ದ ಲಕ್ಷ ಜನರ ಕರಡಾತನವೂ ಅದರ ಬೆನ್ನಲ್ಲೇ ಕೇಳಿಬಂತು. ಕಲಾಂ ಗಂಭೀರರಾದರು.

‘ಇತರ ಎಲ್ಲ ವಲಯಗಳ ನೆರವಿನಿಂದ ಕೃಷಿಯ ಉತ್ಪಾದನೆ ಹೆಚ್ಚಾಗುತ್ತಿದೆ. ವಿಜ್ಞಾನಿ, ಎಂಜಿನಿಯರ್... ಎಲ್ಲರೂ ಈ ನಿಟ್ಟಿನಲ್ಲಿ ರೈತರಿಗೆ ನೆರವಾಗಬೇಕು ಎಂಬುದೇ ನನ್ನ ಅಪೇಕ್ಷೆ’ ಎಂದು ಅವರು ಉತ್ತರಿಸಿದರು. ಕಲಿಕೆಗೆ ಸಂಪೂರ್ಣ ಪ್ರಾಮುಖ್ಯತೆ ನೀಡುವ ನೀವು ಇತರ ಚಟುವಟಿಕೆಗಳನ್ನು ಕಡೆಗಣಿಸುತ್ತೀರಲ್ಲ ಎಂಬ ವಿದ್ಯಾರ್ಥಿನಿಯೊಬ್ಬಳ ಪ್ರಶ್ನೆಗೆ ಉತ್ತರಿಸಿದ ಕಲಾಂ, ‘ನಿಮ್ಮ ಗುರಿ ದೃಢಪಡಿಸಿ. ಅತ್ತ ಕಲಿಕೆಯಲ್ಲಿ ಮುನ್ನಡೆಯಿರಿ’ ಎಂದರು.

ಗುಲ್ಬರ್ಗದ ಶಿವಶರಣ ಉಪ್ಪಿನ ಅವರ ತೋಟದಲ್ಲಿ ನಡೆಯುತ್ತಿರುವ ‘ಕಲಬುರ್ಗಿ ಕಂಪು’ವಿನಲ್ಲಿ ಶನಿವಾರದ ’ಜ್ಞಾನಶಕ್ತಿ ಸಂಗಮ’ ಕಾರ್ಯಕ್ರಮದಲ್ಲಿ ಕಲಾಂ ಮಾತು-ಸಂವಾದ ನಡೆಸಿಕೊಟ್ಟರು. ‘ಗೃಹ ಗ್ರಂಥಾಲಯ’ವೇ ಕುಟುಂಬದ ದೊಡ್ಡ ಆಸ್ತಿ. ಇಪ್ಪತ್ತು ಪುಸ್ತಕಗಳನ್ನಿಟ್ಟು ಮನೆಯಲ್ಲಿ ಗ್ರಂಥಾಲಯ ಆರಂಭಿಸಿ. ಮಕ್ಕಳು ಅದಕ್ಕೆ 200 ಗ್ರಂಥಗಳನ್ನು ಸೇರಿಸಲಿ. ಮೊಮ್ಮಕ್ಕಳ ಕಾಲಕ್ಕೆ ಅದು 2000ಕ್ಕೆ ಏರಲಿ. ಅದಕ್ಕಿಂತ ದೊಡ್ಡ ಖಜಾನೆ ಬೇರೊಂದಿಲ್ಲ ಎಂದು ಆಶಿಸಿದರು. 

ಕನ್ನಡದಲ್ಲೇ ಮಾತು ಆರಂಭಿಸಿದ ಕಲಾಂ, ದೇಶಪ್ರೇಮ, ಪರಿಸರ ಸಂರಕ್ಷಣೆ, ಗುರಿ, ಪರಿಶ್ರಮ  ಕುರಿತು ಪ್ರತಿಜ್ಞೆ ಬೋಧಿಸಿದರು. ಜನಸಾಮಾನ್ಯರ ಮಧ್ಯೆ ಆಸೀನರಾಗಿದ್ದ ‘ಸರಳಸಂತ’ ವಿಜಾಪುರ ಜ್ಞಾನಾಶ್ರಮದ ಸಿದ್ದೇಶ್ವರ ಸ್ವಾಮಿ ಅವರತ್ತ ಪ್ರಸನ್ನತೆಯ ಮುಗುಳ್ನಕ್ಕು ನಮಸ್ಕಾರ ಹೇಳಿದರು. ಸಭಾಂಗಣದ ಒಳಗೂ-ಹೊರಗೂ ವಿದ್ಯಾರ್ಥಿಗಳು ಕಿಕ್ಕಿರಿದು ತುಂಬಿದ್ದರು. ಕಲಾಂ ಭಾಷಣವನ್ನು ಗುರುರಾಜ ಕರ್ಜಗಿ ಕನ್ನಡಕ್ಕೆ ಅನುವಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.