ADVERTISEMENT

ಪೋಷಕರ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ

ಮಕ್ಕಳು ವಾಹನ ಚಲಾಯಿಸಿದರೆ ಪೋಷಕರ ವಿರುದ್ಧ ಕ್ರಮ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 19:30 IST
Last Updated 22 ಅಕ್ಟೋಬರ್ 2017, 19:30 IST
ಪೋಷಕರ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ
ಪೋಷಕರ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ   

ಬೆಂಗಳೂರು: ಮಕ್ಕಳು ವಾಹನ ಓಡಿಸಿ ರಸ್ತೆ ಅಪಘಾತಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಮಕ್ಕಳಿಗೆ ವಾಹನ ಕೊಟ್ಟ ಪೋಷಕರು ಹಾಗೂ ವಾಹನದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸುವುದು ಮಾತ್ರವಲ್ಲದೆ ಮುಲಾಜಿಲ್ಲದೆ ದೋಷಾರೋಪಪಟ್ಟಿ ಸಲ್ಲಿಸುವಂತೆ ಸುತ್ತೋಲೆ ಹೊರಡಿಸಿದೆ.

ಮಕ್ಕಳ ವಾಹನ ಚಾಲನೆ ವಿಚಾರದಲ್ಲಿ ಈವರೆಗೆ ಮೌಖಿಕ ಎಚ್ಚರಿಕೆಯನ್ನಷ್ಟೇ ನೀಡುತ್ತಿದ್ದ ಸರ್ಕಾರ, ಅಪಘಾತಗಳ ಸಂಖ್ಯೆ ಏರಿಕೆಯಾಗುತ್ತಿರುವ ಕಾರಣ ಇಂಥ ಕಠಿಣ ನಿಲುವು ತಾಳಿದೆ. ಈ ಮೂಲಕ ಡ್ರ್ಯಾಗ್‌ ರೇಸ್, ವ್ಹೀಲಿಂಗ್ ಸೇರಿದಂತೆ ವಾಹನಗಳಲ್ಲಿ ಕಸರತ್ತು ನಡೆಸುವ ಮಕ್ಕಳ ಆಟಾಟೋಪಗಳಿಗೆ ಕಡಿವಾಣ ಹಾಕಲು ಸಂಚಾರ ಪೊಲೀಸರಿಗೆ ಮತ್ತಷ್ಟು ಬಲಬಂದಂತಾಗಿದೆ.

‘ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಪೊಲೀಸರು ಮಕ್ಕಳ ವಾಹನೆ ಚಾಲನೆ ವಿರುದ್ಧ ವಿಶೇಷ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. ಇನ್ನು ಮುಂದೆ ಕಾರ್ಯಾಚರಣೆಯು ರಾಜ್ಯವ್ಯಾಪಿ ವಿಸ್ತರಣೆಯಾಗಲಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ಸುತ್ತೋಲೆ ಹೀಗಿದೆ: ‘ಪೋಷಕರು ಹಾಗೂ ವಾಹನಗಳ ಮಾಲೀಕರು 18 ವರ್ಷದೊಳಗಿನ ಮಕ್ಕಳಿಗೆ ಅದರಲ್ಲೂ ಚಾಲನಾ ಪರವಾನಗಿ ಇಲ್ಲದವರಿಗೆ ವಾಹನ ನೀಡುತ್ತಿದ್ದಾರೆ. ಇದರಿಂದ ಜನಸಾಮಾನ್ಯರ ಜೀವಕ್ಕೆ ಅಪಾಯ ಎದುರಾಗುತ್ತಿದೆ. ಈ ರೀತಿ ಅಪಘಾತ ಸಂಭವಿಸಿದ ಸಂದರ್ಭಗಳಲ್ಲಿ ಜೀವಾ ವಿಮಾ ಸಂಸ್ಥೆಗಳು ವಿಮೆ ನೀಡಲು, ‘ಚಾಲಕ ಇನ್ನೂ ಅಪ್ರಾಪ್ತ’ ಎಂಬ ಕಾರಣ ನೀಡಿ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವುದೂ ಹೆಚ್ಚಾಗಿದೆ. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ’ ಎಂದು ಗೃಹ ಇಲಾಖೆ ಅ.12ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದೆ.

ಹೀಗಿವೆ ಸರ್ಕಾರದ ಸೂಚನೆ

* ಮಕ್ಕಳು ಚಾಲನಾ ಪರವಾನಗಿ ಇಲ್ಲದೆ ವಾಹನ ಚಲಾಯಿಸಿ ಅಪಘಾತ ಮಾಡಿದಲ್ಲಿ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿ ದೋಷಾರೋಪ ಪಟ್ಟಿ ಸಲ್ಲಿಸಬೇಕು.
*ಅಪಘಾತಗಳಿಗೆ ಪರೋಕ್ಷವಾಗಿ ಕಾರಣವಾಗುವ ಮಕ್ಕಳ ಪೋಷಕರು ಅಥವಾ ಇತರರ ಹೆಸರುಗಳನ್ನೂ ದೋಷಾರೋಪ ಪಟ್ಟಿಯಲ್ಲಿ ಸೇರಿಸಬೇಕು.
* ಮಕ್ಕಳಿಂದ ಮೊದಲ ಬಾರಿ ಸಂಚಾರ ನಿಯಮ ಉಲ್ಲಂಘನೆಯಾದರೆ ಮಕ್ಕಳಿಗೆ ಹಾಗೂ ಪೋಷಕರಿಗೆ ದಂಡ ವಿಧಿಸಬೇಕು.
* ನಿಯಮ ಉಲ್ಲಂಘನೆ ಪುನರಾವರ್ತನೆಯಾದರೆ ಪ್ರಕರಣ ದಾಖಲಿಸಿ, ದೋಷಾರೋಪ ಪಟ್ಟಿಯನ್ನು ಸಲ್ಲಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.