ADVERTISEMENT

ಪೌಷ್ಟಿಕ ಆಹಾರದ ಕೊರತೆ: ಐವರ ಸಾವು

​ಪ್ರಜಾವಾಣಿ ವಾರ್ತೆ
Published 9 ಜನವರಿ 2012, 19:30 IST
Last Updated 9 ಜನವರಿ 2012, 19:30 IST

ಹಿರೀಸಾವೆ: ಸುಮಾರು ಎರಡು ವರ್ಷಗಳಿಂದ ಇಲ್ಲಿನ ಸಂತೆ ಮೈದಾನದಲ್ಲಿ ವಾಸಿಸುತ್ತಿರುವ ಹಕ್ಕಿ-ಪಿಕ್ಕಿ ಮತ್ತು ಶಿಳ್ಳೆಖ್ಯಾತ ಜನಾಂಗದ 2 ಮಕ್ಕಳು, ಇಬ್ಬರು ಪುರುಷರು ಹಾಗೂ ಒಬ್ಬ ಮಹಿಳೆ ಸೇರಿದಂತೆ ಐದು ಮಂದಿ ಆರು ತಿಂಗಳಲ್ಲಿ ಸತ್ತಿದ್ದಾರೆ.

ಸಾವಿನ ಕಾರಣ ಸಂಬಂಧಿಕರಿಗೂ ಗೊತ್ತಿಲ್ಲ. ಇವರೆಲ್ಲ ಹೋಬಳಿಯ ದಿಡಗ, ನಾಗಮಂಗಲ ತಾಲ್ಲೂಕಿನ ಅರಣಿಯವರು. ಇವರಿಗೆ ಮನೆ ಮತ್ತು ಭೂಮಿ ಇಲ್ಲ. 6 ತಿಂಗಳ ಹಿಂದೆ  ಪುಟ್ಟಮಲ್ಲಿ (35), ಅದಾದ ಒಂದು ತಿಂಗಳ ನಂತರ ಚಂದ್ರಪ್ಪ (45), ಕಳೆದ ಸೆಪೆಂಬರ್‌ನಲ್ಲಿ ಕೃಷ್ಣಪ್ಪ (40), ಒಂದು ತಿಂಗಳ ಹಿಂದೆ ರಾಧಾ ಎಂಬ 7 ತಿಂಗಳ ಮಗು ಸತ್ತಿದೆ. 15 ದಿನಗಳ ಹಿಂದೆ ಜನಿಸಿದ ಮಗು ಸಹ ಸೋಮವಾರ ಮೃತಪಟ್ಟಿತ್ತು. ಹದಿನಾಲ್ಕು ವರ್ಷದ ರಾಧ ಎಂಬಾಕೆ ಕಳೆದ ವರ್ಷ ಕುಮಾರ್ ಎಂಬಾತನನ್ನು ಮದುವೆಯಾಗಿದ್ದಳು.

ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ರಾಧ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆದರೆ ಮಗು ಸರಿಯಾಗಿ ಬೆಳವಣಿಗೆಯಾಗದೆ 1,500 ಗ್ರಾಂ ತೂಕವಿತ್ತು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ರಾಜೀವ್‌ಗಾಂಧಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚಿಸಿದ್ದರು. ಆದರೆ ಹಣವಿಲ್ಲದೆ ಪೋಷಕರು ಮಗುವನ್ನು ತಮ್ಮ ಜೊತೆಯಲ್ಲಿ ಇಟ್ಟುಕೊಂಡಿದ್ದರಿಂದ ಹದಿನೈದು ದಿನಗಳ ಮಗು ಸೋಮವಾರ ಮೃತಪಟ್ಟಿತು.

ಸ್ಥಳಕ್ಕೆ ಶಿಶು ಅಭಿವೃದ್ಧಿ ಅಧಿಕಾರಿ ಗಂಗಪ್ಪಗೌಡ, ಸಮಾಜ ಕಲ್ಯಾಣ ಇಲಾಖೆ ಹೇಮಲತಾ, ಹಿರೀಸಾವೆ ಆಸ್ಪತ್ರೆ ವೈದ್ಯ ಡಾ.ವೈಶಾಖ್ ಅವರು ಭೇಟಿ ನೀಡಿ ಅಲೆಮಾರಿಗಳಿಂದ ವಿಷಯ ಸಂಗ್ರಹಿಸಿದರು.

ಅಂಗನವಾಡಿಯಿಂದ ಮಕ್ಕಳಿಗೆ ಪೌಷ್ಟಿಕ ಆಹಾರ ಹಾಗೂ ಶಾಲೆಗೆ ಹೋಗದೆ ಗುಡಿಸಲಿನಲ್ಲಿರುವ ಮೂವರು ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಲಾಯಿತು. ಎಲ್ಲರ ಆರೋಗ್ಯ ಪರೀಕ್ಷೆ ನಡೆಸಲು ನಿರ್ಧರಿಸಲಾಯಿತು.

`ಹಳ್ಳಿಗಳಲ್ಲಿ ತಲೆಕೂದಲು ವ್ಯಾಪಾರ ಮಾಡುವುದು. ಸಣ್ಣ ಪ್ರಾಣಿಗಳನ್ನು ಬೇಟೆಯಾಡುವುದು ನಮ್ಮ ಜೀವನ, ಸರಿಯಾದ ಆಹಾರ ದೊರಕದೆ ತೊಂದರೆ ಅನುಭವಿಸುತ್ತಿದ್ದೇವೆ~ ಎನ್ನುತ್ತಾರೆ ಹಕ್ಕಿಪಿಕ್ಕಿ ಜನಾಂಗದ ಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.