ADVERTISEMENT

ಪ್ರಜಾ ತೀರ್ಪು ಇಂದು

​ಪ್ರಜಾವಾಣಿ ವಾರ್ತೆ
Published 14 ಮೇ 2018, 19:41 IST
Last Updated 14 ಮೇ 2018, 19:41 IST
ಪ್ರಜಾ ತೀರ್ಪು ಇಂದು
ಪ್ರಜಾ ತೀರ್ಪು ಇಂದು   

ಬೆಂಗಳೂರು: ಮುಂದಿನ ಐದು ವರ್ಷ ರಾಜ್ಯದ ಅಧಿಕಾರದ ಚುಕ್ಕಾಣಿ ಯಾರ ಬಳಿ ಇರಬೇಕು ಎಂದು ಮೂರುವರೆ ಕೋಟಿಗೂ ಹೆಚ್ಚಿನ ಮತದಾರರು ಬರೆದಿರುವ ‘ಪ್ರಜಾ ತೀರ್ಪು’ ಮಂಗಳವಾರ ಪ್ರಕಟವಾಗಲಿದೆ.

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳಿಗೆ ಇದೇ 12ರಂದು ಮತದಾನ ನಡೆದಿತ್ತು. 5.02 ಕೋಟಿ ಮತದಾರರ ಪೈಕಿ ಶೇ 72.36ರಷ್ಟು ಮಂದಿ ತಮ್ಮ ‘ಹಕ್ಕು’ ಚಲಾಯಿಸುವ ಮೂಲಕ ಚಾರಿತ್ರಿಕ ದಾಖಲೆಯನ್ನೇ ನಿರ್ಮಿಸಿದರು. ಒಟ್ಟು 2,622 ಅಭ್ಯರ್ಥಿಗಳ ಪೈಕಿ ಯಾರು ವಿಧಾನಸಭೆಯ ಮೆಟ್ಟಿಲು ಹತ್ತಲಿದ್ದಾರೆ ಎಂಬುದು ಮತ ಎಣಿಕೆಯಲ್ಲಿ ನಿಚ್ಚಳವಾಗಲಿದೆ.

ಮತದಾನೋತ್ತರ ಸಮೀಕ್ಷೆಗಳ ಪೈಕಿ ಒಂದೆರಡು ಸಮೀಕ್ಷೆಗಳು ಕಾಂಗ್ರೆಸ್ ಅಥವಾ ಬಿಜೆಪಿ ಬಹುಮತ ಪಡೆಯಲಿವೆ ಎಂದು ಬಿಂಬಿಸಿವೆ. ಬಹುತೇಕ ಸಮೀಕ್ಷೆ
ಗಳು ಅತಂತ್ರ ವಿಧಾನಸಭೆಯ ಭವಿಷ್ಯ ನುಡಿದಿವೆ. ಇದು ರಾಜಕೀಯ ನೇತಾರರಲ್ಲಿ ಸ್ವಲ್ಪ ಮಟ್ಟಿಗಿನ ತಲ್ಲಣ ಹುಟ್ಟಿಸಿದೆ. ಹೀಗಾಗಿ, ರಾಜಕೀಯ ಪಕ್ಷಗಳ ಒಳಾಂಗಣದಲ್ಲಿ ತರಹೇವಾರಿ ಲೆಕ್ಕಾಚಾರ, ತರ್ಕ, ಹೊಂದಾಣಿಕೆಯ ಮುನ್ನಂದಾಜುಗಳು ಶುರುವಾಗಿವೆ. ಮತದಾರ ಬರೆದ ‘ಭವಿಷ್ಯ’ ಯಾರ ಪರವಾಗಿರಲಿದೆ ಎಂಬುದು ಮತಯಂತ್ರ ತೆರೆದು ಎಣಿಕೆ ಮುಗಿಯುವವರೆಗೆ ನಿಗೂಢವಾಗಿರುವುದರಿಂದಾಗಿ ಕನ್ನಡ ನಾಡಿನಲ್ಲಿ ಮಾತ್ರವಲ್ಲದೇ, ಭರತ ಖಂಡದಲ್ಲೇ ಕುತೂಹಲ ಮೂಡಿಸಿದೆ.

ADVERTISEMENT

ಬೆಳಿಗ್ಗೆ 10ಗಂಟೆ ಹೊತ್ತಿಗೆ ಯಾವ ಪಕ್ಷ ಮುನ್ನಡೆ ಸಾಧಿಸಲಿದೆ ಎಂಬುದರ ಕುರುಹುಗಳು ಕಾಣಿಸಲಿವೆ. 11 ಗಂಟೆ ಸುಮಾರಿಗೆ ಗೆಲುವು ಯಾರ ಕಡೆಗಿದೆ ಎಂಬ ರೇಖೆಗಳು ಕಾಣಿಸಿಕೊಂಡರೆ, ಮಧ್ಯಾಹ್ನ 12 ಗಂಟೆಗೆ ಅಧಿಕಾರ ಯಾರ ಮಡಿಲಿಗೆ ಸೇರಲಿದೆ ಎಂಬ ಸ್ಪಷ್ಟ ಚಿತ್ರಣ ಸಿಗಲಿದೆ. ಅತಂತ್ರ–ಸ್ವತಂತ್ರವೋ ಎಂಬ ನಿಖರ ಮಾಹಿತಿಯೂ ಗೊತ್ತಾಗಲಿದೆ. 2 ಗಂಟೆ ಹೊತ್ತಿಗೆ 222 ಕ್ಷೇತ್ರಗಳಲ್ಲಿ ಯಾರು ಗೆದ್ದಿದ್ದಾರೆ ಎಂಬ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ ಎಂದು ಚುನಾವಣಾ ಆಯೋಗದ ಮೂಲಗಳು ಹೇಳಿವೆ.

ಕಣದಲ್ಲಿರುವ ಪ್ರಮುಖರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಬಿಜೆಪಿ ಸಂಸದ ಬಿ. ಶ್ರೀರಾಮುಲು ತಲಾ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ, ವಿರೋಧ ಪಕ್ಷದ ನಾಯಕರಾದ ಜಗದೀಶ ಶೆಟ್ಟರ್, ಕೆ.ಎಸ್. ಈಶ್ವರಪ್ಪ, ಅತ್ಯಂತ ಹಿರೀಕರಾದ ಕಾಗೋಡು ತಿಮ್ಮಪ್ಪ, ಶಾಮನೂರು ಶಿವಶಂಕರಪ್ಪ, ಎ.ಬಿ.ಮಾಲಕರಡ್ಡಿ, ಸಿ.ಎಂ.ಉದಾಸಿ, ಎಂ.ಸಿ.ಮನಗೂಳಿ ಕಣದಲ್ಲಿದ್ದಾರೆ.

‘ವಿಜಯೋತ್ಸವದಲ್ಲಿ ಪಟಾಕಿ ನಿರ್ಬಂಧ’

ಬೆಂಗಳೂರು: ಚುನಾವಣೆಯಲ್ಲಿ ಗೆದ್ದವರು ವಿಜಯೋತ್ಸವ ಆಚರಿಸಬಹುದು. ಆದರೆ, ಪಟಾಕಿ ಸಿಡಿಸಬಾರದು ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಅಲ್ಲದೆ, ಭಾರಿ ಸದ್ದು ಗದ್ದಲ ಮಾಡುವ ಧ್ವನಿ ವರ್ಧಕಗಳನ್ನೂ ಬಳಸುವಂತಿಲ್ಲ. ಪರಿಸರದ ಕಾಳಜಿಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು. ಮದ್ಯ ಮಾರಾಟಕ್ಕೂ ಅವಕಾಶವಿಲ್ಲ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.