ADVERTISEMENT

ಪ್ರತ್ಯೇಕ ಅಪಘಾತ: 6 ಜನ ಬಲಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2012, 19:30 IST
Last Updated 26 ಜನವರಿ 2012, 19:30 IST

ವಿಜಾಪುರ/ಗದಗ:  ವಿಜಾಪುರ ಜಿಲ್ಲೆಯಲ್ಲಿ ಎರಡು ಕಡೆ ಮತ್ತು ಗದಗ ಜಿಲ್ಲೆಯಲ್ಲಿ ಒಂದು ಕಡೆ ಸೇರಿದಂತೆ ಗುರುವಾರ ಸಂಭವಿಸಿದ ಮೂರು ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು ಆರು ಜನರು ಸಾವಿಗೀಡಾಗಿದ್ದಾರೆ.

ವಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕನ್ನೊಳ್ಳಿ ಕಂಟಿಹಳ್ಳ ಬಳಿ ಲಾರಿ-ಕಾರು ಮುಖಾಮುಖಿ ಡಿಕ್ಕಿಯಲ್ಲಿ ಕೇರಳದ ಎರ್ನಾಕುಲಂ ಮೂಲದ ಡಿ.ಪಿ.ವಿಶ್ವನಾಥನ್ (52) ಹಾಗೂ ಅವರ ಪತ್ನಿ ಶೀಲಾ (44) ಮೃತಪಟ್ಟಿದ್ದಾರೆ.

ಕಾರಿನಲ್ಲಿ ಹಿಂದಿನ ಆಸನದಲ್ಲಿ ಕುಳಿತಿದ್ದ ಅವರ ಮಗ ವಿನೀತ್‌ಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಇವರು ಶಹಾಬಾದ್‌ದಿಂದ ಮಹಾರಾಷ್ಟ್ರದ ಮಹಾಬಳೇಶ್ವರಕ್ಕೆ ಹೊರಟಿದ್ದರು ಎನ್ನಲಾಗಿದೆ. ವಿಶ್ವನಾಥನ್ ಅವರು ಅಲ್ಸಟೋಂ ಪ್ರಾಜೆಕ್ಟ್ ಇಂಡಿಯಾ ಕಂಪೆನಿಯಲ್ಲಿ ಅಧಿಕಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಚಡಚಣ ವರದಿ: ವಿಜಾಪುರ ಜಿಲ್ಲೆಯ ಚಡಚಣ ಬಳಿಯ ಹೊರ್ತಿ ಹತ್ತಿರ ಡಂಪರ್ ಮತ್ತು ಮೋಟರ್‌ಸೈಕಲ್ ಮಧ್ಯೆ ಡಿಕ್ಕಿ ಸಂಭವಿಸಿ ಬೈಕ್ ಸವಾರರಾದ ಚಡಚಣದ ಸಂತೋಷ ದೇವಪ್ಪ ಬನಸೋಡೆ (25) ಮತ್ತು ಪರಶುರಾಮ ಅಣ್ಣಪ್ಪ ಕೋಳಿ(28) ಗುರುವಾರ ಮೃತಪಟ್ಟಿದ್ದಾರೆ. ಈ ಇಬ್ಬರೂ ಬೈಕ್ ಮೇಲೆ ವಿಜಾಪುರಕ್ಕೆ ಹೊರಟಾಗ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ಲಕ್ಷ್ಮೇಶ್ವರ ವರದಿ: ಹೊಲದಲ್ಲಿ ಮಲಗಿದ್ದವರ ಮೇಲೆ ಕೊಳವೆಬಾವಿ ಕೊರೆಯುವ ವಾಹನ ಹಾಯ್ದು ಇಬ್ಬರು ಸಾವಿಗೀಡಾದ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಉಂಡೇನಹಳ್ಳಿ ಕ್ರಾಸ್ ಹತ್ತಿರ ಗುರುವಾರ ಬೆಳಗಿನ ಜಾವ ಸಂಭವಿಸಿದೆ.

ಸುವರ್ಣಗಿರಿ ತಾಂಡಾದ ರಮೇಶ ಟೋಪಣ್ಣ ಕಾರಭಾರಿ (29) ಹಾಗೂ ಸೂರಣಗಿ ಗ್ರಾಮದ ನಿಂಗಪ್ಪ ಮಲ್ಲಪ್ಪ ಹಳ್ಳಿ (36) ಮೃತಪಟ್ಟಿದ್ದಾರೆ. ಸುವರ್ಣಗಿರಿ ತಾಂಡಾದ ಲಕ್ಷ್ಮಣ ಲಮಾಣಿ ಎಂಬುವವರ ಹೊಲದಲ್ಲಿ ಕೆಳವೆಬಾವಿ ಕೊರೆಯಲು ಬುಧವಾರ ರಾತ್ರಿ ವಾಹನ ಬಂದಿತ್ತು. ಬೋರ್‌ವೆಲ್ ಕೊರೆಯುವುದನ್ನು ನೋಡುವ ಸಲುವಾಗಿ ರಮೇಶ ಮತ್ತು ನಿಂಗಪ್ಪ ಅವರು ಹೊಲಕ್ಕೆ ಬಂದಿದ್ದರು. ರಾತ್ರಿ ಬಹಳ ಹೊತ್ತಿನವರೆಗೆ ಬೋರ್‌ವೆಲ್ ಕೊರೆಯುವ ಕಾರ್ಯ ನಡೆಯಿತು. ಆದ್ದರಿಂದ ಅವರು ಹೊಲದಲ್ಲಿಯೇ ಮಲಗಿದ್ದರು.

ಬೆಳಗಿನ ಜಾವ 4ರ ಸುಮಾರಿಗೆ ಚಾಲಕನು ವಾಹನವನ್ನು ಹಿಂದಕ್ಕೆ ತೆಗೆದುಕೊಂಡಾಗ ಅಲ್ಲಿಯೇ ಮಲಗ್ದ್ದಿದವರ ಮೇಲೆ ಹಾಯ್ದು ಈ ದುರ್ಘಟನೆ ಸಂಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.