ADVERTISEMENT

ಪ್ರತ್ಯೇಕ ಧರ್ಮಕ್ಕಾಗಿ ಎಲ್ಲರೂ ಒಂದಾಗಿ ಹೋಗುತ್ತೇವೆ: ಈಶ್ವರ ಖಂಡ್ರೆ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2017, 19:30 IST
Last Updated 8 ಡಿಸೆಂಬರ್ 2017, 19:30 IST
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ   

ಬೆಂಗಳೂರು: ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ಎಲ್ಲರೂ ಒಟ್ಟಾಗಿ ಹೋರಾಟ ಮಾಡುವ ದಿನಗಳು ಮುಂದೆ ಬರಲಿವೆ ಎಂದು ಪೌರಾಡಳಿತ ಸಚಿವ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ವಿಶ್ವಾಸ ವ್ಯಕ್ತಪಡಿಸಿದರು.

ಪ್ರತ್ಯೇಕ ಧರ್ಮದ ಬೇಡಿಕೆ ಇಂದು ನಿನ್ನೆಯದಲ್ಲ. 30 ವರ್ಷಗಳಿಂದಲೂ ಮಹಾಸಭಾ ಇದಕ್ಕೆ ಬೇಡಿಕೆ ಇಡುತ್ತಲೇ ಬಂದಿದೆ. ಈ ಹಿಂದೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದಾಗ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು ಎಂದು ಶುಕ್ರವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ವೀರಶೈವ ಪದ ವಚನ ಸಾಹಿತ್ಯದಲ್ಲಿದೆ. ಲಿಂಗಾಯತ ಪದ ರೂಢಿಯಲ್ಲಿದೆ. ಎಲ್ಲರೂ ಒಂದೇ ಧರ್ಮಕ್ಕೆ ಸೇರಿದವರು. ಎಲ್ಲರೂ ಒಟ್ಟಿಗೆ ಸೇರಿ ಪ್ರತ್ಯೇಕ ಧರ್ಮದ ವಿಷಯದಲ್ಲಿ ಹೋರಾಟ ನಡೆಸುತ್ತೇವೆ’ ಎಂದು ಹೇಳಿದರು. ಪ್ರತ್ಯೇಕ ಧರ್ಮದ ವಿಷಯದಲ್ಲಿ ಎಲ್ಲರೂ ಒಟ್ಟಾಗಿ ಬಂದರೆ ಕೇಂದ್ರಕ್ಕೆ ಶಿಫಾರಸ್ಸು ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ADVERTISEMENT

ನಗರೋತ್ಥಾನ 3ನೇ ಹಂತದ ₹3,000 ಕೋಟಿ ಮೊತ್ತದ ಯೋಜನೆಗಳಿಗೆ ಅನುಮೋದಿಸಿ ಟೆಂಡರ್ ಕರೆಯಲಾಗಿದೆ ಎಂದರು.

ಬೀದರ್ ಜಿಲ್ಲೆ ಭಾಲ್ಕಿ ಪಟ್ಟಣದ ಕುಡಿಯುವ ನೀರಿನ ಯೋಜನೆ ಇದರಲ್ಲಿ ಸೇರಿದೆ. ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸದ್ಯದಲ್ಲೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದರು.

ಬಹಳ ವರ್ಷಗಳಿಂದ ಕುಂಟುತ್ತಾ ಸಾಗಿದ್ದ ಕಾರಂಜಾ ಯೋಜನೆ ಪೂರ್ಣಗೊಳಿಸಲು ₹500 ಕೋಟಿ ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಎಲ್ಲ ನಾಲೆಗಳ ಆಧುನೀಕರಣದ ಕೆಲಸ ಈ ವರ್ಷ ಕೆಲಸ ಆರಂಭವಾಗಲಿದ್ದು, ಮುಂದಿನ ವರ್ಷ ಕಾಮಗಾರಿ ಪೂರ್ಣಗೊಳ್ಳಲಿವೆ ಎಂದು ಖಂಡ್ರೆ ಹೇಳಿದರು. ಬಸವ ಕಲ್ಯಾಣ ಅಭಿವೃದ್ದಿ ಸೇರಿದಂತೆ ಕಾರಂಜಾದಿಂದ ಭಾಲ್ಕಿ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.