ADVERTISEMENT

ಪ್ರತ್ಯೇಕ ಸ್ಥಾನಮಾನ: ಭುಗಿಲೆದ್ದ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2011, 18:35 IST
Last Updated 26 ಫೆಬ್ರುವರಿ 2011, 18:35 IST

ಗುಲ್ಬರ್ಗ: ಹೈದರಾಬಾದ್ ಕರ್ನಾಟಕ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ವಿಶೇಷ ಸ್ಥಾನಮಾನ ನೀಡುವ ಸಂಬಂಧ ಸಂವಿಧಾನದ 371ನೇ ಕಲಂ ತಿದ್ದುಪಡಿ ಮಾಡಬೇಕು ಎಂಬ ಬೇಡಿಕೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಗುಲ್ಬರ್ಗ ವಿಭಾಗ ವ್ಯಾಪ್ತಿಯ ಎಲ್ಲ ಜಿಲ್ಲೆಗಳಲ್ಲಿ ಆಕ್ರೋಶ ಭುಗಿಲೆದ್ದಿದೆ.

ರಾಜ್ಯಸಭಾ ಸದಸ್ಯ ಕೆ.ಬಿ.ಶಾಣಪ್ಪ ಮಂಡಿಸಿದ ಖಾಸಗಿ ಮಸೂದೆ ಮೇಲೆ ಶುಕ್ರವಾರ ನಡೆದ ಚರ್ಚೆಯಲ್ಲಿ ಗೃಹಸಚಿವ ಪಿ.ಚಿದಂಬರಂ, ವಿಶೇಷ ಸ್ಥಾನಮಾನದ ಬೇಡಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಚಳವಳಿ ತೀವ್ರ ಸ್ವರೂಪ ಪಡೆದುಕೊಂಡಿದೆ.

ಸಂವಿಧಾನದ 371ನೇ ಕಲಂ ತಿದ್ದುಪಡಿಗೆ ಆಗ್ರಹಿಸಿ ಒಂದು ವಾರದಿಂದ ಪ್ರತಿಭಟನೆಗಳು ನಡೆಯುತ್ತಿದ್ದು, ಗೃಹಸಚಿವರ ಹೇಳಿಕೆಯಿಂದ ಪ್ರತಿಭಟನೆ ತೀವ್ರಗೊಂಡಿದೆ. ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ, ಕನ್ನಡಪರ ಸಂಘ ಸಂಸ್ಥೆಗಳು ಮತ್ತಿತರ ಸಂಘಟನೆಗಳ ಕಾರ್ಯಕರ್ತರು ಗುಲ್ಬರ್ಗ, ಯಾದಗಿರಿ, ರಾಯಚೂರು, ಬೀದರ್ ಜಿಲ್ಲಾ ಕೇಂದ್ರಗಳಲ್ಲದೇ ಕೆಲ ತಾಲ್ಲೂಕು ಕೇಂದ್ರಗಳಲ್ಲೂ  ಪ್ರತಿಭಟನೆ ಆರಂಭಿಸಿದ್ದಾರೆ.

ಕುಷ್ಟಗಿಯಲ್ಲಿ ನಡೆಯುತ್ತಿರುವ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, ಕೇಂದ್ರದ ನಿರ್ಧಾರವನ್ನು ಖಂಡಿಸುವ ನಿರ್ಣಯವನ್ನೂ ಆಂಗೀಕರಿಸಲು ನಿರ್ಧರಿಸಲಾಗಿದೆ.

ಶನಿವಾರ ಸ್ವಯಂಪ್ರೇರಿತ ಪ್ರತಿಭಟನೆ ನಡೆಸಿ, ‘ಈ ಭಾಗದ ಜನರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದಿದ್ದರೆ ತೆಲಂಗಾಣ ಮಾದರಿಯಲ್ಲಿ ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ಚಾಲನೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಯಾದಗಿರಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಉಭಯ ಬಣಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಾರಾಯಣಗೌಡ ಬಣದ ವತಿಯಿಂದ ರಸ್ತೆತಡೆ ಚಳವಳಿ ನಡೆಯಿತು. ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಉತ್ತರ ಕರ್ನಾಟಕ ಘಟಕದ ವತಿಯಿಂದ ಶನಿವಾರ ಮಧ್ಯಾಹ್ನ ಇಲ್ಲಿಯ ಶಾಸ್ತ್ರಿ ವೃತ್ತದಲ್ಲಿ ಪಿ.ಚಿದಂಬರಂ ಪ್ರತಿಕೃತಿ ದಹನ ಮಾಡಲಾಯಿತು. ಘೋಷಣೆಯ ಮೂಲಕ ಚಿದಂಬರಂ ಹೇಳಿಕೆಯನ್ನು ಖಂಡಿಸಿದರು.

ನಂತರ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ನಡೆಸಿ ಮನವಿ ಸಲ್ಲಿಸಿದರು. ಬೀದರ್‌ನಲ್ಲಿ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಜಿಲ್ಲಾ ಘಟಕದ ಕಾರ್ಯಕರ್ತರು ಚಿದಂಬರಂ ಪ್ರತಿಕೃತಿಗೆ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು. ರಾಯಚೂರಿನಲ್ಲಿ ಕರ್ನಾಟಕ ರಕ್ಷಣಾವೇದಿಕೆಯ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರು ಅಂಬೇಡ್ಕರ್ ಪ್ರತಿಮೆ ಬಳಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು. ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಮತ್ತು ಜಯ ಕರ್ನಾಟಕ ಸಂಘಟನೆಗಳ ಮುಖಂಡರೂ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.