ADVERTISEMENT

ಪ್ರಮುಖ ಆರೋಪಿ ಪೊಲೀಸ್ ವಶಕ್ಕೆ

ಮೂಡುಬಿದಿರೆ ವಿಗ್ರಹ ಕಳವು ಪ್ರಕರಣ

​ಪ್ರಜಾವಾಣಿ ವಾರ್ತೆ
Published 29 ಜುಲೈ 2013, 19:59 IST
Last Updated 29 ಜುಲೈ 2013, 19:59 IST
ಮೂಡುಬಿದಿರೆ ಸಿದ್ಧಾಂತ ಮಂದಿರದಿಂದ ಬೆಲೆಬಾಳುವ ವಿಗ್ರಹ ಕಳವು ಮಾಡಿದ ಪ್ರಮುಖ ಆರೋಪಿ ಒಡಿಶಾದ ಸಂತೋಷ್‌ದಾಸ್‌ನನ್ನು ಪೊಲೀಸರು ಸೋಮವಾರ ಬೆಳಿಗ್ಗೆ ವಿಚಾರಣೆಗಾಗಿ ಗುರುಬಸದಿ ಆವರಣಕ್ಕೆ ಕರೆ ತಂದರು
ಮೂಡುಬಿದಿರೆ ಸಿದ್ಧಾಂತ ಮಂದಿರದಿಂದ ಬೆಲೆಬಾಳುವ ವಿಗ್ರಹ ಕಳವು ಮಾಡಿದ ಪ್ರಮುಖ ಆರೋಪಿ ಒಡಿಶಾದ ಸಂತೋಷ್‌ದಾಸ್‌ನನ್ನು ಪೊಲೀಸರು ಸೋಮವಾರ ಬೆಳಿಗ್ಗೆ ವಿಚಾರಣೆಗಾಗಿ ಗುರುಬಸದಿ ಆವರಣಕ್ಕೆ ಕರೆ ತಂದರು   

ಮೂಡುಬಿದಿರೆ: ಗುರುಬಸದಿಯ ಸಿದ್ಧಾಂತ ಮಂದಿರದಿಂದ ಇದೇ 5ರಂದು ರಾತ್ರಿ ಬೆಲೆಬಾಳುವ ವಿಗ್ರಹಗಳನ್ನು ಕಳವು ಮಾಡಿದ ಪ್ರಮುಖ ಆರೋಪಿ ಒಡಿಶಾ ಮೂಲದ ಸಂತೋಷ್‌ದಾಸ್ ಅಲಿಯಾಸ್ ಘನಶ್ಯಾಂದಾಸ್‌ನನ್ನು (32) ಪೊಲೀಸರು ಸೋಮವಾರ ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ 11 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಯಿತು.

ಆಂಧ್ರಪ್ರದೇಶ ಪೊಲೀಸರು ಮಂಗಳೂರು ಪೊಲೀಸರ ಸಹಕಾರದಲ್ಲಿ ಆರೋಪಿಯನ್ನು ಆಂಧ್ರದ ಶ್ರೀಕಾಕುಲಂನಲ್ಲಿ ಶನಿವಾರ ಬಂಧಿಸಿ ನ್ಯಾಯಾಲಯದ ಆದೇಶದಂತೆ ಹೆಚ್ಚಿನ ತನಿಖೆಗಾಗಿ ಮಂಗಳೂರು ಪೊಲೀಸರಿಗೆ ಹಸ್ತಾಂತರಿಸಿದ್ದರು. ಹೆಚ್ಚಿನ ತನಿಖೆಯ ಅಗತ್ಯ ಇರುವುದರಿಂದ ಆರೋಪಿಯನ್ನು ತಮ್ಮ ವಶಕ್ಕೆ ಒಪ್ಪಿಸಬೇಕು ಎಂಬ ಪೊಲೀಸರ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿತು.

ಇದರ್ ಸೇ ನಹೀಂ...ಉದರ್‌ಸೇ.. ಸಿದ್ಧಾಂತ ಮಂದಿರಕ್ಕೆ ಯಾವ ದಾರಿಯಲ್ಲಿ ಹೋದದ್ದು ಎಂದು ಪೊಲೀಸರು ಆರೋಪಿಯನ್ನು ಸೋಮವಾರ ಬೆಳಿಗ್ಗೆ ಜೈನ್‌ಪೇಟೆ ಬಳಿ ವಾಹನದಲ್ಲಿ ಕೂರಿಸಿಕೊಂಡು ಪ್ರಶ್ನಿಸಿದಾಗ ಒಮ್ಮೆ `ಇದರ್‌ಸೇ' ಎಂದು ಪ್ರಾರಂಭದಲ್ಲಿ ಲೆಪ್ಪದ ಬಸದಿ ತೋರಿಸಿದ ನಂತರ ರಸ್ತೆಯ ಎಡಬದಿಯ ಓಣಿಯನ್ನು ತೋರಿಸಿದರೆ ಅಲ್ಲಿಂದ `ಇದರ್‌ಸೇ ನಹೀಂ ಉದರ್‌ಸೇ' ಎಂದು ಧವಳಾ ಕಾಲೇಜು ಆವರಣವನ್ನು ತೋರಿಸಿದ್ದ. ಕಳ್ಳತನ ವೇಳೆ ಆರೋಪಿ ಸಿದ್ಧಾಂತ ಮಂದಿರಕ್ಕೆ ಹೋಗಿದ್ದ ದಾರಿಯ ಬಗ್ಗೆ ನಿಖರವಾಗಿ ತಿಳಿಸದೆ ಪೊಲೀಸರನ್ನು ಗೊಂದಲಕ್ಕೀಡು ಮಾಡಿದ. ಕೋಟಿ ಬಸದಿ ಆವರಣದ ಹೊರಗಡೆ ಆರೋಪಿ ಬಳಕೆ ಮಾಡಿ ಬಿಟ್ಟು ಹೋಗಿದ್ದ ಪೈಪ್ ರಿಂಚ್ ಪತ್ತೆಯಾಗಿದ್ದು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮಠದ ವ್ಯವಸ್ಥಾಪಕರ ವಿಚಾರಣೆ: ಸಿದ್ಧಾಂತ ಮಂದಿರದ ದರ್ಶನ ಪಡೆಯುವ ಯಾತ್ರಿಕರು ಜೈನಮಠದಲ್ಲಿ ನಿಗದಿತ ಹಣ ಪಾವತಿಸಿ ರಶೀದಿ ಪಡೆದು ಕೊಳ್ಳಬೇಕು. ನಂತರ ಅವರನ್ನು ಅಲ್ಲಿನ ವ್ಯವಸ್ಥಾಪಕ ಉದಯ ಕುಮಾರ್ ದರ್ಶನಕ್ಕೆ ಕರೆದುಕೊಂಡು ಹೋಗುತ್ತಾರೆ. ಯಾತ್ರಿಕನ ವೇಷದಲ್ಲಿ ಸಂತೋಷ್‌ದಾಸ್ ಕೂಡ ಸಿದ್ಧಾಂತ ಮಂದಿರದ ದರ್ಶನ ಪಡೆದಿರುವುದರಿಂದ ವ್ಯವಸ್ಥಾಪಕರ ಪಾತ್ರದ ಬಗ್ಗೆ ವಿಚಾರಿಸಲು ಉದಯಕುಮಾರ್ ಅವರನ್ನು ಪೊಲೀಸರು ಪ್ರಶ್ನಿಸಿದ್ದಾರೆ.

ಅಮೂಲ್ಯ ವಿಗ್ರಹಗಳು: ಮೊದಲು ಗುರುಬಸದಿಯಲ್ಲಿದ್ದ ಈ ಸಿದ್ಧಾಂತ ಮೂರ್ತಿಗಳ ದರ್ಶನಕ್ಕೆ 1980ರಲ್ಲಿ ಬಸದಿಯ ಹಿಂದೆ ರತ್ನತ್ರಯ ಸಿದ್ಧಾಂತ ಮಂದಿರ ರೂಪಿಸಿ ದೂರದ ಯಾತ್ರಿಕರಿಗೆ ಅವಕಾಶ ಕಲ್ಪಿಸಲಾಗಿತ್ತು. ಜೀವದಯಾಷ್ಟಮಿಯ ದಿನ ಈ ಸಿದ್ಧಾಂತ ದರ್ಶನಕ್ಕೆ ಮುಕ್ತ ಅವಕಾಶ ನೀಡಲಾಗುತ್ತಿದೆ. ವಜ್ರ, ವೈಢೂರ್ಯ, ಮರಕತ, ಮಾಣಿಕ್ಯ, ಕೆಂಪು, ನೀಲ, ಬೆಳ್ಳಿ, ಬಂಗಾರ, ಸ್ಫಟಿಕ, ಗೋಮೇದಿಕ, ಮುತ್ತು, ಹವಳ, ಗರುಡ ಮಣಿಯ ಅಮೂಲ್ಯ ಮೂರ್ತಿಗಳು ಧವಲತ್ರಯ ಗ್ರಂಥಗಳು ಇಲ್ಲಿನ ಅಮೂಲ್ಯ ಆಸ್ತಿ.

ಶ್ರವಣಬೆಳಗೊಳ ಮತ್ತು ಹೊಂಬುಜದಲ್ಲಿ ಇದೇ ಮಾದರಿಯ ಸಿದ್ಧಾಂತ ಮಂದಿರವಿದ್ದರೂ ಮೂಡುಬಿದಿರೆಯದ್ದು ಪಾರಂಪರಿಕ, ಪ್ರಾಚೀನ ಮತ್ತು ಅಪರೂಪದ ಹಿರಿತನ ಹೊಂದಿದೆ. ದೇಶ-ವಿದೇಶಗಳ ಜೈನಶ್ರಾವಕರಿಗೆ ಈ ಕಾರಣಕ್ಕಾಗಿಯೇ ಮೂಡುಬಿದಿರೆಯ ಬಸದಿಗಳು ಮತ್ತು ಸಿದ್ಧಾಂತ ಮಂದಿರ ದರ್ಶನ ಮಹತ್ವದ್ದಾಗಿದೆ.

2000 ವರ್ಷದ ಇತಿಹಾಸ: ಕ್ರಿ.ಪೂ. 3ನೇ ಶತಮಾನದಿಂದ ಕ್ರಿ.ಶ 2-3 ಶತಮಾನಕ್ಕೆ ಸಂಬಂಧಪಟ್ಟ ಮೂರ್ತಿಗಳು ಇವು ಎಂದು ವಿಶ್ಲೇಷಿಸಲಾಗಿದೆ. ಚಂದ್ರಗುಪ್ತ ಮೌರ್ಯನ ಕಾಲದಲ್ಲಿ ಭದ್ರ ಬಾಹುಮುನಿಗಳು 12 ವರ್ಷಗಳ ಕಾಲ ಬರಗಾಲದ ಸಂದರ್ಭ ದಕ್ಷಿಣಕ್ಕೆ ಬಂದಿದ್ದಾಗ ಜತೆಗೆ ಅನೇಕ ರತ್ನದ ಮೂರ್ತಿಗಳು ರಾಜರು ಹಾಗೂ ಸಾಮಂತರು ಹಿಡಿದುಕೊಂಡು ಬಂದಿದ್ದರು.

ಅವರಿಂದ ರಕ್ಷಣೆ ಅಸಾಧ್ಯವಾದ ಕಾರಣ ದಾನ ನೀಡುವ ಪದ್ಧತಿಯ ಪ್ರಕಾರ ಇಲ್ಲಿನ ಗುರುಪೀಠಕ್ಕೆ ನೀಡಲಾಗಿತ್ತು. ಮಂಗಳೂರು ಪೊಲೀಸ್ ಆಯುಕ್ತ ಮನೀಶ್ ಖರ್ಬಿಕರ್ ಮಾರ್ಗದರ್ಶನದಲ್ಲಿ ರಚಿಸಿದ 5 ಪೊಲೀಸ್ ತಂಡಗಳು ಆರೋಪಿಗಳನ್ನು ಪತ್ತೆಹಚ್ಚಿವೆ.

ADVERTISEMENT

ಕಳವಾಗಿರುವ ಮೂರ್ತಿಗಳು
ಮುಕ್ಕಾಲು ಅಡಿ ಎತ್ತರದ ಬಂಗಾರದ ಚಂದ್ರನಾಥ ಸ್ವಾಮಿಯ ಮೂರ್ತಿ 1, ಮೂರೂವರೆ ಇಂಚು ಎತ್ತರದ  ವಜ್ರದ ಚಂದ್ರಪ್ರಭ ಸ್ವಾಮಿಯ ಮೂರ್ತಿ 1, ಪಚ್ಚೆ ಪಾರ್ಶ್ವನಾಥ 1, ಎರಡೂವರೆ ಇಂಚಿನ ಗಜ ಮುತ್ತು ಚಂದ್ರ ಪ್ರಭ, ಬಂಗಾರದ ಉಂಗುರದಲ್ಲಿರುವ ಮಹಾವೀರ, ಮುಕ್ಕಾಲು ಅಡಿ ಎತ್ತರದ ಬಂಗಾರದ ಪಂಚ ಪರಮೇಷ್ಠಿ ಮೂರ್ತಿ 1, ವಾಸು ಪೂಜ್ಯ ಮಾಣಿಕ್ಯ, ನೀಲದ ಅರಿಹಂತ, ನೇಮಿನಾಥ ಮತ್ತು ಮುನಿ ಸುವ್ರತ ತೀರ್ಥಂಕರರ ಮೂರು ಮೂರ್ತಿಗಳು, ಸ್ಪಟಿಕ ಮುನಿ ಸುವ್ರತ, ಮುತ್ತಿನ ಬಾಹುಬಲಿ, ಬಂಗಾರದ 5 ಇಂಚಿನ ಪಾರ್ಶ್ವನಾಥ ಮೂರ್ತಿ, ಸ್ಫಟಿಕ ರತ್ನ ಅರ್ಹನಾಥ, ನೀಲ ಮಲ್ಲಿನಾಥ ಮೂರ್ತಿಗಳು ಕಳವಾದ ಅಮೂಲ್ಯ ಮೂರ್ತಿಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.