ADVERTISEMENT

ಪ್ರಮೋದ್‌ ಮುತಾಲಿಕ್‌ ಚುನಾವಣಾ ಕಣಕ್ಕೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2017, 19:30 IST
Last Updated 1 ನವೆಂಬರ್ 2017, 19:30 IST
ಪ್ರಮೋದ್ ಮುತಾಲಿಕ್‌
ಪ್ರಮೋದ್ ಮುತಾಲಿಕ್‌   

ಚಿಕ್ಕಮಗಳೂರು: ‘ಹಿಂದುತ್ವಕ್ಕೆ ಬಲತುಂಬಲು ರಾಜಕೀಯಶಕ್ತಿಗಳಿಸುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಚಿಕ್ಕಮಗಳೂರು, ಶೃಂಗೇರಿ, ವಿಜಯಪುರ, ಬೆಳಗಾವಿ ಉತ್ತರ, ತೆರದಾಳ ಕ್ಷೇತ್ರಗಳ ಪೈಕಿ ಒಂದರಲ್ಲಿ ಕಣಕ್ಕಿಳಿಯುತ್ತೇನೆ’ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್  ಸ್ಪಷ್ಟಪಡಿಸಿದರು.

‘ರಾಜಕೀಯಶಕ್ತಿ ಇಲ್ಲದೆ ಸಂಘಟನೆಯ ಹೋರಾಟ ಗಾಳಿಗುದ್ದಾಟವಾಗುತ್ತದೆ. ಹೀಗಾಗಿ. ರಾಜಕೀಯ ಪ್ರವೇಶ ಅನಿವಾರ್ಯವಾಗಿದೆ. ಕ್ಷೇತ್ರ ಆಯ್ಕೆ ನಿಟ್ಟಿನಲ್ಲಿ ಕಾರ್ಯಕರ್ತರು ಸಮೀಕ್ಷೆಯಲ್ಲಿ ತೊಡಗಿದ್ದಾರೆ. ಸಮೀಕ್ಷೆ ಅಂಶಗಳನ್ನು ಆಧರಿಸಿ ಕ್ಷೇತ್ರ ನಿರ್ಧರಿಸುತ್ತೇನೆ’ ಎಂದು ಅವರು ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಹಲವು ಬಾರಿ ಮನವಿ ಮಾಡಿದರೂ ಬಿಜೆಪಿ ನಮ್ಮ ಮನವಿಗೆ ಸ್ಪಂದಿಸಿಲ್ಲ. ಶಿವಸೇನೆ ಜತೆ ಕೈಜೋಡಿಸುವ ಕುರಿತು ಎರಡು ಸುತ್ತಿನ ಮಾತುಕತೆ ನಡೆದಿದೆ. ಮುಂಬೈನಲ್ಲಿ ಇದೇ 10ರಂದು ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು. ಮೈತ್ರಿ ಕೈಗೂಡದಿದ್ದರೆ, ಪಕ್ಷೇತರವಾಗಿಯದರೂ ಸ್ಪರ್ಧಿಸುವುದು ಖಚಿತ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

‘ಜೇವರ್ಗಿ, ಕಲಬುರ್ಗಿಯಲ್ಲಿ ಧರಣಿ’: ‘ಶ್ರೀರಾಮ ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ವಿರುದ್ಧ ಸುಳ್ಳು ಕೇಸು ದಾಖಲಿಸಲಾಗಿದೆ. ರಾಜ್ಯ ಸರ್ಕಾರವು ಹಿಂದೂಗಳ ದಮನ ನೀತಿ ಅನುಸರಿಸುತ್ತಿದೆ’ ಎಂದು ಮುತಾಲಿಕ್ ಆರೋಪಿಸಿದರು.

ಸ್ವಾಮೀಜಿ ಮತ್ತು 40 ಮಂದಿಯನ್ನು ಬಂಧಿಸಿರುವುದನ್ನು ಖಂಡಿಸಿ ಗುರುವಾರ ಜೇವರ್ಗಿ ಮತ್ತು ಕಲಬುರ್ಗಿಯಲ್ಲಿ ಧರಣಿ ಮಾಡುತ್ತೇವೆ’ ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.