ADVERTISEMENT

ಪ್ರವಾಸೋದ್ಯಮ ಇಲಾಖೆಗೆ ಜೋಗದ ಬಂಗಲೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 19:30 IST
Last Updated 8 ಅಕ್ಟೋಬರ್ 2012, 19:30 IST
ಪ್ರವಾಸೋದ್ಯಮ ಇಲಾಖೆಗೆ ಜೋಗದ ಬಂಗಲೆ
ಪ್ರವಾಸೋದ್ಯಮ ಇಲಾಖೆಗೆ ಜೋಗದ ಬಂಗಲೆ   

ಕಾರ್ಗಲ್: ವಿಶ್ವವಿಖ್ಯಾತ ಜೋಗ ಜಲಪಾತದ `ರಾಜಾ ಫಾಲ್ಸ್~ ನೆತ್ತಿಯ ಮೇಲಿರುವ ಸುಮಾರು 200 ವರ್ಷಗಳಷ್ಟು ಹಳೆಯ ಬ್ರಿಟಿಷ್ ಬಂಗಲೆಯನ್ನು ಪ್ರವಾಸೋದ್ಯಮ ಇಲಾಖೆಯ ಸುಪರ್ದಿಗೆ ವಹಿಸುವ ಮಹತ್ವದ ನಿರ್ಣಯವನ್ನು ಭಾನುವಾರ ನಡೆದ ಜೋಗ ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಅಂಗೀಕರಿಸಲಾಗಿದೆ.

ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷರ ವಶದಲ್ಲಿದ್ದ ಮುಂಬಯಿ ಪ್ರಾಂತ್ಯದ ಗಡಿಭಾಗದಲ್ಲಿ ಬ್ರಿಟಿಷ್ ಬಂಗಲೆಯನ್ನು, ನಂತರದ ದಿನಗಳಲ್ಲಿ `ಬಾಂಬೆ ಟಿಬಿ~ ಎಂದು ಕರೆಯಲಾಗುತ್ತಿತ್ತು. ದೇಶಕ್ಕೆ ಸ್ವಾತಂತ್ರ್ಯ ದೊರಕಿದ ನಂತರ ಒಕ್ಕೂಟ ವ್ಯವಸ್ಥೆಗಳ ಆಡಳಿತದಂತೆ ಕರ್ನಾಟಕ ರಾಜ್ಯದ ಉತ್ತರ ಕನ್ನಡದ ಕಾರವಾರ ಜಿಲ್ಲೆಗೆ `ಬಾಂಬೆ ಟಿಬಿ~ ಪ್ರದೇಶ ಸೇರಿ ಹೋಗಿತ್ತು.

ಜಲಪಾತದ ಸೌಂದರ್ಯವನ್ನು ಸವಿಯಲು ಪ್ರವಾಸಿಗರಿಗೆ ಮೀಸಲಾಗಿದ್ದ 2 ಪ್ರಮುಖ ಸ್ಥಳಗಳ ಪೈಕಿ ಮೈಸೂರು ಬಂಗಲೆ ಒಂದಾದರೆ, `ಬಾಂಬೆ ಟಿಬಿ~ ಇನ್ನೊಂದಾಗಿತ್ತು. ಈ ಎರಡು ಪ್ರಮುಖ ತಾಣಗಳಿಂದ ಜಲಪಾತದ ಸೌಂದರ್ಯವನ್ನು ವಿಭಿನ್ನ ಕೋನಗಳಿಂದ ಪ್ರವಾಸಿಗರು ಸವಿಯುತ್ತಿದ್ದರು.

ಇವುಗಳಲ್ಲಿ ಮೈಸೂರು ಬಂಗಲೆ ಪ್ರದೇಶ ಜೋಗ ನಿರ್ವಹಣಾ ಪ್ರಾಧಿಕಾರದ ವ್ಯಾಪ್ತಿಗೆ ಸೇರಿದ್ದರಿಂದ ಹಲವು ಮಜಲುಗಳಲ್ಲಿ ಅಭಿವೃದ್ಧಿ ಸಾಧಿಸಿತ್ತು. ಆದರೆ, ಉತ್ತರ ಕನ್ನಡ ಜಿಲ್ಲೆಯ ಲೋಕೋಪಯೋಗಿ ಇಲಾಖೆಯ ಆಡಳಿತಕ್ಕೆ ಒಳಪಟ್ಟಿದ್ದ `ಬಾಂಬೆ ಟಿಬಿ~ ಪ್ರದೇಶ ಮಾತ್ರ ಅಭಿವೃದ್ಧಿಯನ್ನು ಸಾಧಿಸದೆ ತೀರಾ ಹಿಂದುಳಿದಿತ್ತು.

ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಉನ್ನತ ವ್ಯಕ್ತಿಗಳು ಬಂದು, ಉಳಿದು ಹೋಗಿದ್ದರು ಎಂಬ ಹೆಗ್ಗಳಿಕೆ ಬಿಟ್ಟರೆ ಇಲ್ಲಿ ಬೇರೇನು ಮಹತ್ವದ ಸಾಧನೆಯನ್ನು ಸಾಧಿಸಲು ಆಗಿರಲಿಲ್ಲ. ಪ್ರಾಧಿಕಾರದ ಸಭೆಯಲ್ಲಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಕೈಗೊಂಡ ನಿರ್ಣಯ ಮಹತ್ವದ ಮೈಲುಗಲ್ಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.