ಬೆಂಗಳೂರು: ಕಳೆದ ಮೂರು ದಶಕಗಳಲ್ಲಿ ಲೋಕಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಗಣನೀಯ ಬದಲಾವಣೆ ಆಗಿದೆ. ಸದಸ್ಯರು ಕೇಳುವ ಪ್ರಶ್ನೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ.
ಬೆಂಗಳೂರಿನ ರಿಜೋರ್ಸ್ ಸಂಶೋಧನಾ ಪ್ರತಿಷ್ಠಾನ (ಆರ್‌ಆರ್‌ಎಫ್) ಲೋಕಸಭೆ ಕಾರ್ಯಕಲಾಪದ ಕುರಿತು ಅಧ್ಯಯನ ನಡೆಸಿದೆ. ಈ ಕುರಿತು ಸಿದ್ಧಪಡಿಸಿರುವ ವರದಿಯಲ್ಲಿ ಲೋಕಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ ಎಂದು ಉಲ್ಲೇಖಿಸಿದೆ.
15ನೇ ಲೋಕಸಭೆ ಅವಧಿಯಲ್ಲಿ ಸಂಸದರು 4,16,843 ಪ್ರಶ್ನೆಗಳನ್ನು ಸಂಸತ್ತಿನ ಸಚಿವಾಲಯಕ್ಕೆ ಸಲ್ಲಿಸಿದ್ದರು. ಈ ಪೈಕಿ ಕೆಲವು ಪ್ರಶ್ನೆಗಳನ್ನು ಒಟ್ಟಿಗೆ ಜೋಡಿಸಲಾಯಿತು. ಬಳಿಕ 76,501 ಪ್ರಶ್ನೆಗಳನ್ನು ಸದನದಲ್ಲಿ ಪ್ರಸ್ತಾಪಿಸಲು ಅವಕಾಶ ನೀಡಲಾಯಿತು. 3,40,342 ಪ್ರಶ್ನೆಗಳನ್ನು ತಿರಸ್ಕರಿಸಲಾಗಿತ್ತು.
542 ದಿನಗಳ ಸಂಸತ್ ಕಲಾಪದಲ್ಲಿ ಒಟ್ಟು 76,501 ಪ್ರಶ್ನೆಗಳ ಪೈಕಿ 6,181 (ಶೇ 0.08ರಷ್ಟು) ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಿಸಲಾಗಿದೆ. ಉಳಿದ ಪ್ರಶ್ನೆಗಳಿಗೆ ಲಿಖಿತ ಮೂಲಕ ಉತ್ತರ ನೀಡಲಾಗಿದೆ. ಇದೇ ಅವಧಿಯಲ್ಲಿ ಸಂಸದರು 590 ಉಪ ಪ್ರಶ್ನೆಗಳನ್ನು ಕೇಳಿದ್ದಾರೆ.
ರಸಪ್ರಶ್ನೆ ಸ್ಪರ್ಧೆಯಂತೆ!: ಸಂಸದರು ಕೇಳುವ ಪ್ರಶ್ನೆಗಳ ಸಂಖ್ಯೆಯಲ್ಲಿ ಹೆಚ್ಚಳವಾದರೂ, ಅವುಗಳ ಗುಣಮಟ್ಟದಲ್ಲಿ ಕುಸಿತ ಕಂಡುಬಂದಿರುವುದನ್ನು ಆರ್‌ಆರ್‌ಎಫ್ ದಾಖಲಿಸಿದೆ. ಕೆಲವು ಸಂಸದರು ಅತ್ಯಂತ ಸುಲಭವಾಗಿ ಮಾಹಿತಿ ದೊರಕಬಹುದಾದ ವಿಷಯಗಳ ಬಗ್ಗೆಯೂ ಲೋಕಸಭೆಯಲ್ಲಿ ಪ್ರಶ್ನೆ ಕೇಳಿದ್ದರು.
ಅವರು ಪ್ರಶ್ನೆ ಕೇಳುವಾಗ ತಮ್ಮ ಬುದ್ಧಿಯನ್ನು ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ, ಆ ಪ್ರಶ್ನೆಯಿಂದ ಯಾವ ರೀತಿ ಜನರಿಗೆ ಅನುಕೂಲ ಆಗುತ್ತದೆ ಎಂಬುದನ್ನೂ ಯೋಚಿಸಿರಲಿಲ್ಲ. ಇದರಿಂದ ಸಂಸತ್ತಿನ ಸಮಯ ವ್ಯರ್ಥವಾಯಿತು. ಅವರು ಹೆಚ್ಚು ಪ್ರಶ್ನೆ ಕೇಳಿದರು ಎಂಬುದಷ್ಟೇ ಕಡತಗಳಲ್ಲಿ ಉಳಿಯಿತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಕೆಲವರು ಪ್ರೌಢಶಾಲೆಗಳ ಮಟ್ಟದಲ್ಲಿ ನಡೆಯುವ ರಸಪ್ರಶ್ನೆಗಳಿಗೆ ಸಮನಾದ ಪ್ರಶ್ನೆಗಳನ್ನೂ ಸಂಸತ್ತಿನಲ್ಲಿ ಕೇಳಿದ್ದಾರೆ. ಸರ್ಕಾರಿ ಆಡಳಿತ ಯಂತ್ರಕ್ಕೆ ಸಂಬಂಧವೇ ಇಲ್ಲದ ಹಾಗೂ ಸಮಾಜಕ್ಕೆ ಕೊಡುಗೆ ನೀಡುವಂತಹ ಅಥವಾ ಚರ್ಚೆಗೆ ಹಚ್ಚುವಂತ ವಿಷಯಗಳೇ ಈ ಪ್ರಶ್ನೆಗಳಲ್ಲಿ ಅಡಕವಾಗಿರಲಿಲ್ಲ. ಸಂಸತ್ತಿನಲ್ಲಿ ಕೇಳಲಾದ ದೊಡ್ಡ ಸಂಖ್ಯೆಯ ಪ್ರಶ್ನೆಗಳನ್ನು ಬಳಸಿಕೊಂಡರೆ ಪ್ರೌಢಶಾಲೆಗಳಲ್ಲಿ ಒಳ್ಳೆಯ ರಸಪ್ರಶ್ನೆ ಕಾರ್ಯಕ್ರಮ ನಡೆಸಬಹುದಿತ್ತು ಎಂದು ಆರ್‌ಆರ್‌ಎಫ್ ಹೇಳಿದೆ.
‘ಆಂಧ್ರಪ್ರದೇಶ ದೇಶದ ಏರೋಸ್ಪೇಸ್ ತಾಣವಾಗಿ ಗಣನೀಯ ಪ್ರಮಾಣದಲ್ಲಿ ಬೆಳೆಯುತ್ತಿದೆಯೇ? ಹಾಗಿದ್ದಲ್ಲಿ ವಿವರಗಳನ್ನು ಒದಗಿಸುವುದು’ ಎಂಬ ಕಾಂಗ್ರೆಸ್ ಸಂಸದ ಲಗಡಪಾಟಿ ರಾಜಗೋಪಾಲ್ ಕೇಳಿದ್ದ ಪ್ರಶ್ನೆಯನ್ನು ಪ್ರತಿಷ್ಠಾನವು ವರದಿಯಲ್ಲಿ ಉಲ್ಲೇಖಿಸಿದೆ. ಇಂತಹ ಹಲವು ಪ್ರಶ್ನೆಗಳನ್ನು ನಮ್ಮ ಸಂಸದರು ಲೋಕಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಕೇಳಿದ್ದರು ಎಂದು ದಾಖಲಿಸಿದೆ.
ಇನ್ನು ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ವೆಬ್‌ಸೈಟ್‌ನಲ್ಲೇ ದೊರೆಯಬಹುದಾದಂತಹ ಮಾಹಿತಿಗಳ ಬಗ್ಗೆಯೂ ಕೆಲವು ಸಂಸದರು ಪ್ರಶ್ನೆಗಳನ್ನು ಕೇಳಿದ್ದಾರೆ.
ಆಂಧ್ರಪ್ರದೇಶದ ಮಚಲೀಪಟ್ಟಣ ಕ್ಷೇತ್ರದ ಸಂಸದ ಕಾವೂರಿ ಸಾಂಬಶಿವರಾವ್ ಅವರು ರಾಷ್ಟ್ರೀಯ ಜ್ಞಾನ ಆಯೋಗದ ಶಿಫಾರಸುಗಳ ಬಗ್ಗೆ ಕೇಳಿದ್ದ ಪ್ರಶ್ನೆಯನ್ನು ಅಧ್ಯಯನ ವರದಿಯಲ್ಲಿ ಇದಕ್ಕೆ ಉದಾಹರಣೆಯಾಗಿ ನೀಡಲಾಗಿದೆ.
‘ಆಯೋಗ ವೆಬ್‌ಸೈಟ್‌ನಲ್ಲಿ ಶಿಫಾರಸುಗಳು, ವರದಿಗಳ ಬಗ್ಗೆ ಸಮಗ್ರ ಮಾಹಿತಿ ದೊರೆಯುತ್ತಿದೆ. ಅಲ್ಲದೇ ಇಂತಹ ವಿಚಾರಗಳಲ್ಲಿ ಅಧಿಕಾರಿಗಳನ್ನು ನೇರವಾಗಿ ಸಂಪರ್ಕಿಸಿ ಮಾಹಿತಿ ಪಡೆಯಲು ಸಂಸದರಿಗೆ ಅವಕಾಶ ಇರುತ್ತದೆ. ಇಲಾಖೆಗಳ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಬಗ್ಗೆಯೂ ಸದನದಲ್ಲಿ ಪ್ರಶ್ನೆ ಕೇಳುವುದು ಕಾಲಹರಣವಷ್ಟೇ ಆಗುತ್ತದೆ’ ಎಂಬ ಅಭಿಪ್ರಾಯ ವರದಿಯಲ್ಲಿದೆ.
ಬಾಕಿ ಉಳಿಯುತ್ತಿರುವ ಭರವಸೆಗಳು: ಸದನದಲ್ಲಿ ಸರ್ಕಾರ ನೀಡುವ ಭರವಸೆಗಳು ಅನುಷ್ಠಾನಕ್ಕೆ ಬಾರದಿರುವ ಪ್ರಕರಣಗಳ ಸಂಖ್ಯೆಯಲ್ಲೂ ಗಣನೀಯ ಏರಿಕೆ ಆಗಿದೆ ಎಂಬುದನ್ನು ಆರ್‌ಆರ್‌ಎಫ್ ಗುರುತಿಸಿದೆ. ಲೋಕಸಭೆಯಲ್ಲಿ ಕೇಂದ್ರ ಸರ್ಕಾರವು ನೀಡಿರುವ 3,160 ಭರವಸೆಗಳನ್ನು ಇನ್ನೂ ಈಡೇರಿಸಿಲ್ಲ ಎಂಬ ಅಂಕಿಅಂಶವನ್ನೂ ವರದಿಯಲ್ಲಿ ನೀಡಿದೆ.
20 ವರ್ಷಗಳಿಗಿಂತ ಹಳೆಯ ಐದು, 15ರಿಂದ 20 ವರ್ಷಗಳಷ್ಟು ಹಳೆಯ 12, 10ರಿಂದ 15 ವರ್ಷಗಳಷ್ಟು ಹಳೆಯ 83 ಹಾಗೂ 5ರಿಂದ ಹತ್ತು ವರ್ಷಗಳಷ್ಟು ಹಳೆಯ 394 ಭರವಸೆಗಳು ಇನ್ನೂ ಬಾಕಿ ಇವೆ. ಮೂರರಿಂದ ಐದು ವರ್ಷ ಅವಧಿಯ 946 ಮತ್ತು ಒಂದರಿಂದ ಮೂರು ವರ್ಷ ಅವಧಿಯ 1,720 ಭರವಸೆಗಳನ್ನು ಇನ್ನೂ ಈಡೇರಿಸಿಲ್ಲ ಎಂಬ ಮಾಹಿತಿ ಇದೆ.
ರಾಜೀವ್ ಭರವಸೆಯೂ ಬಾಕಿ!
ರಾಜೀವ್ ಗಾಂಧಿ ಅವರು ಪ್ರಧಾನಿ ಹುದ್ದೆಯಲ್ಲಿದ್ದ ಅವಧಿಯಲ್ಲಿ ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ನೀಡಿದ್ದ ಎಂಟು ಭರವಸೆಗಳು ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ ಎಂಬ ಅಂಶವನ್ನು ಆರ್‌ಆರ್‌ಎಫ್ ಅಧ್ಯಯನ ವರದಿಯಲ್ಲಿ ದಾಖಲಿಸಿದೆ.
ಯುಪಿಎ ಎರಡನೇ ಅವಧಿಯಲ್ಲಿ ಲೋಕಸಭೆಯಲ್ಲಿ 4,493 ಭರವಸೆಗಳನ್ನು ನೀಡಿತ್ತು. ಈ ಪೈಕಿ 1,258 (ಶೇ 27.99) ಭರವಸೆಗಳನ್ನು ಈಡೇರಿಸಲಾಗಿದೆ. 3,235 (ಶೇ 72.01) ಭರವಸೆಗಳು ಇನ್ನೂ ಬಾಕಿ ಉಳಿದಿವೆ ಎಂಬ ಮಾಹಿತಿಯೂ ವರದಿಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.