ADVERTISEMENT

ಪ್ರಸಾದ್‌–ಜಿ.ಟಿ.ದೇವೇಗೌಡ ಮತ್ತೆ ಭೇಟಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2017, 19:41 IST
Last Updated 13 ಅಕ್ಟೋಬರ್ 2017, 19:41 IST

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ, ಜೆಡಿಎಸ್‌ ಮುಖಂಡ ಎಚ್.ವಿಶ್ವನಾಥ್ ಅವರು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ವಿ.ಶ್ರೀನಿವಾಸಪ್ರಸಾದ್ ಅವರ ನಿವಾಸಕ್ಕೆ ಶುಕ್ರವಾರ ತೆರಳಿ ಮಾತುಕತೆ ನಡೆಸಿದರು.

ಈ ಮೂವರು ವಾರದ ಅವಧಿಯಲ್ಲಿ ಎರಡನೇ ಸಲ ಭೇಟಿಯಾಗಿ ಮಾತುಕತೆ ನಡೆಸಿರುವುದು ಜಿಲ್ಲೆಯ ರಾಜಕೀಯ ಹಾಗೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಅವರನ್ನು ಸೋಲಿಸಲು ಯಾವ ತಂತ್ರ ಅನುಸರಿಸಬೇಕು ಎಂಬ ಕುರಿತು ಈ ಮೂವರು ನಾಯಕರು ಕಳೆದ ಸಲ ಚರ್ಚಿಸಿದ್ದರು. ಶುಕ್ರವಾರದ ಭೇಟಿ ಅದರ ಮುಂದುವರಿದ ಭಾಗ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಪ್ರಸಾದ್‌ ನನ್ನ ಆತ್ಮೀಯ ಗೆಳೆಯ. ಆದ್ದರಿಂದ ಅವರ ಮನೆಗೆ ಭೇಟಿ ಕೊಟ್ಟಿದ್ದೇನೆ. ಜಿಲ್ಲೆಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಒಂದು ತಾಸಿಗೂ ಅಧಿಕ ಚರ್ಚೆ ನಡೆಸಿದ್ದೇವೆ’ ಎಂದು ಜಿ.ಟಿ.ದೇವೇಗೌಡ ಪ್ರತಿಕ್ರಿಯಿಸಿದ್ದಾರೆ.

‘ಪ್ರಸಾದ್‌ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಣಕ್ಕಿಳಿಯುವ ನನಗೆ ಬೆಂಬಲ ನೀಡಲಿದ್ದಾರೆ. ನಾವು ಬೇರೆ ಬೇರೆ ಪಕ್ಷದಲ್ಲಿ ಇದ್ದರೂ ಗುರಿ ಒಂದೇ ಆಗಿದೆ’ ಎಂದಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ಕಾಂಗ್ರೆಸ್‌ ಮುಕ್ತ ಮಾಡುವ ಗುರಿ ಇಟ್ಟುಕೊಂಡಿದ್ದಾರೆ. ಮೈಸೂರು, ಚಾಮರಾಜನಗರ ಜಿಲ್ಲೆಗಳನ್ನು ಕಾಂಗ್ರೆಸ್‌ ಮುಕ್ತ ಮಾಡುವುದು ನಮ್ಮ ಗುರಿ ಎಂದು ಪ್ರಸಾದ್‌ ತಿಳಿಸಿದ್ದಾರೆ. ಅದಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.