ADVERTISEMENT

ಪ್ರಾಸಿಕ್ಯೂಷನ್‌ ವಿಭಾಗದ ಆಡಳಿತಾಧಿಕಾರಿಯಾಗಿ ನಾರಾಯಣ ಸ್ವಾಮಿ

​ಪ್ರಜಾವಾಣಿ ವಾರ್ತೆ
Published 3 ಮೇ 2018, 19:40 IST
Last Updated 3 ಮೇ 2018, 19:40 IST

ಬೆಂಗಳೂರು: 2014ರ ಸಾಲಿನಲ್ಲಿ 197 ಸಹಾಯಕ ಪಬ್ಲಿಕ್‌ ಪ್ರಾಸಿಕ್ಯೂಟರ್‌ (ಎಪಿಪಿ) ಹುದ್ದೆಗಳ ನೇಮಕ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಆರೋಪಿ ನಾರಾಯಣ ಸ್ವಾಮಿ ಅವರನ್ನು ಬೆಂಗಳೂರು ನಗರದ ಪ್ರಾಸಿಕ್ಯೂಷನ್‌ ವಿಭಾಗದ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.

‘ನಾರಾಯಣ ಸ್ವಾಮಿ ವಿರುದ್ಧದ ಲೋಕಾಯುಕ್ತ ವಿಚಾರಣೆ ಬಾಕಿ ಇರಿಸಿ, ಖಾಲಿ ಇರುವ ಆಡಳಿತಾಧಿಕಾರಿ ಹುದ್ದೆಗೆ ನೇಮಕ ಮಾಡಲಾಗಿದೆ’ ಎಂದು ಗೃಹ ಇಲಾಖೆಯ ಅಧೀನ ಕಾರ್ಯದರ್ಶಿ ಮೇ 2ರಂದು ಆದೇಶ ಹೊರಡಿಸಿದ್ದಾರೆ. ‘ಈ ಆದೇಶ ತಕ್ಷಣವೇ ಜಾರಿಗೆ ಬರಲಿದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ನಾರಾಯಣ ಸ್ವಾಮಿ ಪ್ರಾಸಿಕ್ಯೂಷನ್‌ ನಿರ್ದೇಶನಾಲಯದ ಕೇಂದ್ರ ಸ್ಥಾನಿಕ ಸಹಾಯಕ ಅಧಿಕಾರಿಯಾಗಿದ್ದರು. ಈ ಪ್ರಕರಣದಲ್ಲಿ ಇವರನ್ನು 2017ರ ಮಾರ್ಚ್‌ 30ರಂದು ಬಂಧಿಸಲಾಗಿತ್ತು. ಎರಡು ತಿಂಗಳಿಗೂ ಹೆಚ್ಚು ಕಾಲ ಇವರು ನ್ಯಾಯಾಂಗ ಬಂಧನದಲ್ಲಿದ್ದರು.

ADVERTISEMENT

‌ಬಿಜೆಪಿ– ಕಾಂಗ್ರೆಸ್‌ ಕಾರ್ಯಕರ್ತರ ಹೊಡೆದಾಟ

ದಾವಣಗೆರೆ: ಇಲ್ಲಿನ ದುಗ್ಗಮ್ಮನ ದೇಗುಲದ ಬಳಿ ಗುರುವಾರ ರೋಡ್ ಷೋ ನಡೆಸುವ ವೇಳೆ ಮುಖಾಮುಖಿಯಾದ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹೊಡೆದಾಟ ನಡೆದಿದೆ.

‘ಕಾಂಗ್ರೆಸ್ ಕಾರ್ಯಕರ್ತರು ಎದುರು‌ ಬಂದಾಗ ಬಿಜೆಪಿ ಕಾರ್ಯಕರ್ತರು ‘ಮೋದಿ ಮೋದಿ’ ಎಂದು ಕೂಗಿದರು. ಇದರಿಂದ ಕುಪಿತರಾದ ಕಾಂಗ್ರೆಸ್ ಅಭ್ಯರ್ಥಿ ‘ಬಿಜೆಪಿಯವರದ್ದು ಜಾಸ್ತಿ ಆಯ್ತು ನೋಡಿಕೊಳ್ರೋ’ ಎಂದು ಹಿಂಬಾಲಕರಿಗೆ ಹೇಳಿದರು. ಆಗ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದರು’ ಎಂದು ಬಿಜೆಪಿ ಅಭ್ಯರ್ಥಿ ಯಶವಂತರಾವ್ ಜಾಧವ್ ಆರೋಪಿಸಿದರು. ಬಸವನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಇದು ಬಿಜೆಪಿ– ಕಾಂಗ್ರೆಸ್‌ ಕಾರ್ಯಕರ್ತರು ನಡುವಿನ ಗಲಾಟೆ. ಇದರಲ್ಲಿ ನನ್ನ ಪಾತ್ರವೇನು ಇಲ್ಲ. ಯಶವಂತರಾವ್‌ ಜಾಧವ್‌ ತಮ್ಮನ್ನು ಪೈಲ್ವಾನ್‌ ಎಂದುಕೊಂಡಿದ್ದಾರೆ. ಜಾಸ್ತಿ ಹಾರಾಡಿದರೆ ಅವರಿಗೆ ಕಾರ್ಯಕರ್ತರೇ ಪಾಠ ಕಲಿಸುತ್ತಾರೆ’ ಶಾಸಕ ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯಿಸಿದರು.

ಯೋಧ ನಾಪತ್ತೆ

ಶಿರಸಿ: ವಿಧಾನಸಭೆ ಚುನಾವಣೆಯ ಪ್ರಯುಕ್ತ ಯಲ್ಲಾಪುರ ಕ್ಷೇತ್ರ ವ್ಯಾಪ್ತಿಯ ತಾಲ್ಲೂಕಿನ ದಾಸನಕೊಪ್ಪ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಅರೆಸೇನಾ ಪಡೆಯ ಸಿಬ್ಬಂದಿ, ಮಹಾರಾಷ್ಟ್ರದ ಕೆ. ಗಣೇಶ ಬಾಬುರಾವ್ ನಾಪತ್ತೆಯಾಗಿದ್ದಾರೆ.

ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.