ADVERTISEMENT

ಬಂಡಾಯ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಗಡುವು

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2013, 19:59 IST
Last Updated 19 ಏಪ್ರಿಲ್ 2013, 19:59 IST

ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್‌ನ ಬಂಡಾಯ ಅಭ್ಯರ್ಥಿಗಳ ಮನವೊಲಿಸಿ ಅವರನ್ನು ಕಣದಿಂದ ಹಿಂದೆ ಸರಿಸುವ ಪ್ರಯತ್ನ ಮುಂದುವರಿದಿದೆ. ಶನಿವಾರ ಮಧ್ಯಾಹ್ನದ ವೇಳೆಗೆ ನಾಮಪತ್ರ ವಾಪಸ್ ಪಡೆಯದೆ ಇದ್ದರೆ ಬಂಡಾಯ ಅಭ್ಯರ್ಥಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಎಐಸಿಸಿ ವೀಕ್ಷಕರು ಹಾಗೂ ಆಯಾ ಜಿಲ್ಲಾ ಘಟಕದ ಅಧ್ಯಕ್ಷರು ಶುಕ್ರವಾರ ಬಂಡಾಯ ಅಭ್ಯರ್ಥಿಗಳು ಕಣದಲ್ಲಿ ಇರುವ ಕ್ಷೇತ್ರಗಳಿಗೆ ತೆರಳಿ ಅವರ ಮನವೊಲಿಸುವ ಪ್ರಯತ್ನ ನಡೆಸಿದರು. ಮನವಿಗೆ ಸ್ಪಂದಿಸಿ ಕಣದಿಂದ ಹಿಂದೆ ಸರಿದರೆ ಮುಂದಿನ ದಿನಗಳಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ನೀಡಲಾಗುತ್ತದೆ. ಕಣದಲ್ಲೇ ಉಳಿದರೆ ಪಕ್ಷದಿಂದ ಉಚ್ಚಾಟಿಸಲಾಗುತ್ತದೆ ಎನ್ನಲಾಗಿದೆ.

ಶನಿವಾರ ಮಧ್ಯಾಹ್ನ 3 ಗಂಟೆವರೆಗೂ ನಾಮಪತ್ರ ವಾಪಸ್ ಪಡೆಯಲು ಅವಕಾಶ ಇದೆ. ಅಲ್ಲಿಯವರೆಗೂ ಮನವೊಲಿಕೆ ಪ್ರಯತ್ನ ಮುಂದುವರಿಯಲಿದೆ. ಎಐಸಿಸಿಯ 12 ಮಂದಿ ವೀಕ್ಷಕರು ಬಂಡಾಯ ಶಮನಕ್ಕಾಗಿ ನಿಯೋಜನೆಗೊಂಡಿದ್ದು, ಅವರಿಗೆ ವಹಿಸಿರುವ ಜಿಲ್ಲೆ, ಕ್ಷೇತ್ರಗಳಿಗೆ ತೆರಳಿ ಬಂಡಾಯ ಅಭ್ಯರ್ಥಿಗಳ ಮನವೊಲಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.

ಟಿಕೆಟ್ ಹಂಚಿಕೆ ಮಾಡುವಾಗ ಕೆಲವೆಡೆ ವ್ಯತ್ಯಾಸಗಳು ಆಗಿರುವುದು ನಿಜ. ಆಕಾಂಕ್ಷಿಗಳು ಹೆಚ್ಚಾಗಿರುವುದರಿಂದ ಎಲ್ಲರನ್ನೂ ಸಮಾಧಾನಪಡಿಸುವುದು ಕಷ್ಟದ ಕೆಲಸ. ಎಷ್ಟೇ ಎಚ್ಚರಿಕೆ ವಹಿಸಿದರೂ ಕೆಲವರಿಗೆ ಅನ್ಯಾಯ ಆಗುತ್ತದೆ. ರಾಜಕೀಯದಲ್ಲಿ ಇದೆಲ್ಲ ಸಹಜ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡರೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.

ಚಿಕ್ಕಬಳ್ಳಾಪುರ, ಮಂಡ್ಯ, ದಾವಣಗೆರೆ, ಶಿವಮೊಗ್ಗ, ಹಾವೇರಿ, ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಬಸವನಗುಡಿಯಲ್ಲಿ ಕೆ.ಚಂದ್ರಶೇಖರ್, ರಾಜಾಜಿನಗರದಲ್ಲಿ ಜಿ.ಪದ್ಮಾವತಿ, ಬೆಂಗಳೂರು ದಕ್ಷಿಣದಲ್ಲಿ ಸುಷ್ಮಾ ರಾಜಗೋಪಾಲರೆಡ್ಡಿ, ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಹನುಮಂತರಾಯಪ್ಪ, ಚಿಕ್ಕಬಳ್ಳಾಪುರದಲ್ಲಿ ಆಂಜಿನಪ್ಪ, ಶ್ರೀರಂಗಪಟ್ಟಣದಲ್ಲಿ ರವೀಂದ್ರ ಶ್ರೀಕಂಠಯ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಂಡಾಯದ ಭೀತಿ ಎದುರಾಗಿದೆ.

ಮುದ್ದೇಬಿಹಾಳ, ಮುಳಬಾಗಲು, ಕೆ.ಆರ್.ಪೇಟೆ, ಕುಣಿಗಲ್, ದೊಡ್ಡಬಳ್ಳಾಪುರ ಕ್ಷೇತ್ರಗಳಲ್ಲಿ ಜೆಡಿಎಸ್‌ನ ಬಂಡಾಯ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಮಾಜಿ ಸ್ಪೀಕರ್ ಕೃಷ್ಣ ಅವರು ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಟಿಕೆಟ್ ನಿರಾಕರಿಸಿದ ಜೆಡಿಎಸ್ ವರಿಷ್ಠರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ವಂಚಿತ ಬಿ.ಮುನೇಗೌಡ, ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಮಾಜಿ ಸಚಿವ ಸಿ.ಚೆನ್ನಿಗಪ್ಪ ಇಲ್ಲಿ ಜೆಡಿಎಸ್‌ನ ಅಧಿಕೃತ ಅಭ್ಯರ್ಥಿ. ಜೆಡಿಎಸ್ ಮುಖಂಡರು ಸಹ ಬಂಡಾಯ ಅಭ್ಯರ್ಥಿಗಳ ಮನವೊಲಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ರೇವಣ್ಣ, ಹನುಮಂತಯ್ಯ ವಕ್ತಾರರಾಗಿ ನೇಮಕ
ಕಾಂಗ್ರೆಸ್ ಟಿಕೆಟ್ ವಂಚಿತರಾದ ಮಾಜಿ ಸಚಿವ ಎಚ್.ಎಂ.ರೇವಣ್ಣ, ಡಾ.ಎಲ್.ಹನುಮಂತಯ್ಯ ಅವರನ್ನು ಕೆಪಿಸಿಸಿ ವಕ್ತಾರರನ್ನಾಗಿ ನೇಮಕ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಪ್ರಕಟಣೆಯಲ್ಲಿ ತಿಳಿಸಿದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT