ADVERTISEMENT

ಬಂಡಾಯ ಶಮನಕ್ಕೆ ರಾಯಭಾರ

ಇನ್ನೂ ಅಂತಿಮವಾಗದ 47 ಕ್ಷೇತ್ರದ ಅಭ್ಯರ್ಥಿಗಳು: ಕಾಂಗ್ರೆಸ್‌ಗೆ ತಪ್ಪದ ತಲೆನೋವು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2013, 19:32 IST
Last Updated 7 ಏಪ್ರಿಲ್ 2013, 19:32 IST

ಬೆಂಗಳೂರು: ವಿಧಾನಸಭೆಯ 177 ಸ್ಥಾನಗಳಲ್ಲಿ ಕಣಕ್ಕೆ ಇಳಿಯಲಿರುವ ಕಾಂಗ್ರೆಸ್ ಹುರಿಯಾಳುಗಳ ಪಟ್ಟಿ ಪ್ರಕಟವಾದ ನಂತರ, ಟಿಕೆಟ್ ವಂಚಿತರು ಮತ್ತು ಆಕಾಂಕ್ಷಿಗಳು ಬೆಂಗಳೂರಿನ ಕೆಪಿಸಿಸಿ ಕಚೇರಿ ಎದುರು ನಡೆಸಿದ ಪ್ರತಿಭಟನೆ ಈಗ ತಣ್ಣಗಾಗಿರಬಹುದು. ಆದರೆ ಇನ್ನೂ 47 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸುವ ಜವಾಬ್ದಾರಿ ಕಾಂಗ್ರೆಸ್ ವರಿಷ್ಠರ ಮೇಲಿದೆ.

224 ಕ್ಷೇತ್ರಗಳಿಗೆ ಒಟ್ಟು 2,040 ಆಕಾಂಕ್ಷಿಗಳಿದ್ದರು. 214 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಕಳೆದ ಶುಕ್ರವಾರವೇ ಪ್ರಕಟಿಸಲು ಕಾಂಗ್ರೆಸ್ ವರಿಷ್ಠರು ಸಿದ್ಧವಾಗಿದ್ದರು. ಆದರೆ ಪ್ರತಿಭಟನೆಯ ಕಾವು ಹೆಚ್ಚಾಗಬಹುದು ಎಂಬ ಕಾರಣಕ್ಕೆ, ಈ ನಿರ್ಧಾರದಿಂದ ಹಿಂದೆ ಸರಿದರು. ಇನ್ನೊಂದು ಪಟ್ಟಿ ಇದೇ 10ರಂದು ಬಿಡುಗಡೆಯಾಗುವ ಸಂಭವ ಇದೆ.

ಎಲ್ಲ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಪ್ರಕಟವಾದ ನಂತರ ಎದುರಾಗಬಹುದಾದ ಪ್ರತಿಭಟನೆ, ಬಂಡಾಯವನ್ನು ಶಮನಗೊಳಿಸಲು ಪಕ್ಷದ 28 ಹಿರಿಯ ಮುಖಂಡರನ್ನು ಸಜ್ಜುಗೊಳಿಸಲಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ಎಸ್.ಭೋಸರಾಜು ತಿಳಿಸಿದರು.

ಟಿಕೆಟ್ ಆಕಾಂಕ್ಷಿಗಳಾದ ಹಲವರು ಇನ್ನೂ ದೆಹಲಿಯಲ್ಲೇ ಬೀಡುಬಿಟ್ಟಿದ್ದಾರೆ. ಟಿಕೆಟ್‌ಗೆ ಲಾಬಿ ನಡೆಸಲು ದೆಹಲಿಗೆ ತೆರಳಿದ್ದ ಮುಖಂಡ ಶಾಮನೂರು ಶಿವಶಂಕರಪ್ಪ ಅವರು ಶನಿವಾರ ವಾಪಸಾಗಿದ್ದಾರೆ. ದಾವಣಗೆರೆ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಡಿ. ಬಸವರಾಜ್, ಶಾಸಕ ಸಂತೋಷ್ ಲಾಡ್ ಮತ್ತು ಬಿ.ಕೆ. ಸಂಗಮೇಶ್ವರ, ಕೆ.ಸಿ.ಕೊಂಡಯ್ಯ, ವಿ.ಆರ್. ಸುದರ್ಶನ್, ತೇಜಸ್ವಿನಿ ಮತ್ತಿತರರು ದೆಹಲಿಯಲ್ಲೇ ಬೀಡುಬಿಟ್ಟಿದ್ದಾರೆ.

ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಬೆಂಬಲಿಗರ ವಲಯದಲ್ಲಿ ಗುರುತಿಸಿಕೊಂಡಿರುವ ಕೊಂಡಯ್ಯ ಅವರಿಗೆ ಬಳ್ಳಾರಿ ನಗರ ಕ್ಷೇತ್ರದಿಂದ ಟಿಕೆಟ್ ದೊರೆಯುವ ಬಗ್ಗೆ ಖಚಿತತೆ ಇಲ್ಲ. `ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬ ಇಚ್ಛೆ ಇದೆ. ಬಳ್ಳಾರಿಯಲ್ಲಿ ರೆಡ್ಡಿ ಸಹೋದರರ ಗಣಿ ಮಾಫಿಯಾವನ್ನು ಬಯಲುಮಾಡಲು ನನ್ನಿಂದಾದ ಕೆಲಸ ಮಾಡಿದ್ದೇನೆ. ಆದರೆ, ರಾಜ್ಯದ ಕೆಲವು ಮುಖಂಡರು ನನ್ನ ವಿರುದ್ಧ ಕೆಲಸ ಮಾಡುತ್ತಿರುವಂತಿದೆ' ಎಂದು ಕೊಂಡಯ್ಯ ಅಸಮಾಧಾನ ವ್ಯಕ್ತಪಡಿಸಿದರು.

`ನನಗೆ ಟಿಕೆಟ್ ದೊರೆಯುವ ಭರವಸೆ ಇದೆ. ಬಿಜೆಪಿ ಸೇರುವ ಇರಾದೆ ನನಗಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ' ಎಂದು ಕಲಘಟಗಿ ಶಾಸಕ ಸಂತೋಷ್ ಲಾಡ್ ಹೇಳಿದರು. ಭದ್ರಾವತಿ ಕ್ಷೇತ್ರದಲ್ಲಿ ಸಿ.ಎಂ. ಇಬ್ರಾಹಿಂ ಅವರಿಗಿಂತ ಸಂಗಮೇಶ್ವರ ಅವರಿಗೇ ಹೆಚ್ಚಿನ ಪ್ರಾಶಸ್ತ್ಯ ದೊರೆಯಬಹುದು.

ಎಲ್.ಆರ್. ಶಿವರಾಮೇಗೌಡ ಅವರ ಪುತ್ರ ಚೇತನ್ ಗೌಡ ಅವರನ್ನು ಪದ್ಮನಾಭನಗರ ಕ್ಷೇತ್ರದಿಂದ ಕಣಕ್ಕೆ ಇಳಿಸಲು ಮಾಜಿ ಸಂಸದ ಅಂಬರೀಷ್ ಮತ್ತು ಶಾಸಕ  ಡಿ.ಕೆ. ಶಿವಕುಮಾರ್ ಒತ್ತಡ ತರುತ್ತಿದ್ದಾರೆ. ಆದರೆ ಧರ್ಮಸಿಂಗ್ ಅವರು ಈ ಕ್ಷೇತ್ರದಿಂದ ಗುರಪ್ಪ ನಾಯ್ಡು ಅವರನ್ನು ಕಣಕ್ಕೆ ಇಳಿಸಲು ಪ್ರಯತ್ನ ನಡೆಸಿದ್ದಾರೆ.

ದೇವನಹಳ್ಳಿ ಕ್ಷೇತ್ರದಲ್ಲಿ ಟಿಕೆಟ್‌ಗೆ ಹಾಲಿ ಶಾಸಕ ವೆಂಕಟಸ್ವಾಮಿ ಮತ್ತು ಮುನಿನರಸಯ್ಯ ನಡುವೆ ಪೈಪೋಟಿ ಏರ್ಪಟ್ಟಿದೆ. ಕೇಂದ್ರ ಸಚಿವ ಎಂ. ವೀರಪ್ಪ ಮೊಯಿಲಿ ಅವರು ವೆಂಕಟಸ್ವಾಮಿ ಪರ ಇಲ್ಲ ಎಂದು ಗೊತ್ತಾಗಿದೆ.

ಟಿಕೆಟ್ ಸಿಗದ ನಿರಾಸೆ: ಡಾ. ನಾಗಪ್ಪ, ಮಹಿಮಾ `ಕೈ'ಗೆ ಬೈ?
ದಾವಣಗೆರೆ: ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಮಾಡಿದ ನಂತರ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಅಸಮಾಧಾನ ತೀವ್ರಗೊಂಡಿದೆ. ಹರಿಹರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಡಾ.ವೈ. ನಾಗಪ್ಪ ಕಾಂಗ್ರೆಸ್‌ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ.

`ಕಾಂಗ್ರೆಸ್‌ನ  ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರು ಹಾಗೂ ಗ್ರಾಮಾಂತರ ಭಾಗದ ಜನರ ಒತ್ತಡಕ್ಕೆ ಮಣಿದು ಪಕ್ಷದ ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ಅದಕ್ಕೂ ಮೊದಲು ಕೆಪಿಸಿಸಿ ನಿರ್ಧಾರ ತಿಳಿದುಕೊಳ್ಳುತ್ತೇನೆ' ಎಂದು ನಾಗಪ್ಪ ಭಾನುವಾರ ಹರಿಹರದಲ್ಲಿ ಹೇಳಿಕೆ ನೀಡಿದ್ದಾರೆ.

`ಕ್ಷೇತ್ರದಲ್ಲಿ ಹೊಸಬರಿಗೆ ಟಿಕೆಟ್ ನೀಡುವ ಮುನ್ನ ನಗರದ ಹಾಗೂ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್‌ನ ಅಭಿಪ್ರಾಯಗಳಿಗೆ ಮನ್ನಣೆ ನೀಡಿಲ್ಲ ಎಂದು ಆರೋಪಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಚುನಾಯಿತ ಪ್ರತಿನಿಧಿಗಳು ರಾಜೀನಾಮೆ ನೀಡುತ್ತಿದ್ದೇವೆ' ಎಂದು ನಗರ ಬ್ಲಾಕ್ ಅಧ್ಯಕ್ಷ ಬಿ. ಸಿಗ್ಬತ್ ಉಲ್ಲಾ ಹಾಗೂ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ಪರಮೇಶ್ವರಪ್ಪ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್‌ಗೆ ಮಹಿಮಾ ವಿದಾಯ?
ಚನ್ನಗಿರಿ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ನಿರೀಕ್ಷೆಯಲ್ಲಿದ್ದ ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲರ ಪುತ್ರ ಮಹಿಮಾ ಪಟೇಲ್, ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನಗೊಂಡಿದ್ದು, ಏ. 9ರ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿಕೆ ನೀಡಿದ್ದಾರೆ.

ಕಾರ್ಯಕರ್ತರ ಪ್ರತಿಭಟನೆ
ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ `ಹೊರಗಿನವರಾದ' ಮಾಜಿ ಸಚಿವ ಕೆ. ಶಿವಮೂರ್ತಿ ನಾಯ್ಕ ಅವರಿಗೆ ಟಿಕೆಟ್ ನೀಡಿರುವುದನ್ನು ವಿರೋಧಿಸಿ  ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ದಾವಣಗೆರೆಯಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.

ಬ್ಲಾಕ್ ಕಾಂಗ್ರೆಸ್ ಅಭಿಪ್ರಾಯಕ್ಕೆ ಮನ್ನಣೆ ನೀಡದ ಕಾಂಗ್ರೆಸ್ ಧೋರಣೆ ಖಂಡಿಸಿ ಮಾಯಕೊಂಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ. ಹನುಮಂತಪ್ಪ ಸೇರಿದಂತೆ ಹಲವರು ರಾಜೀನಾಮೆ ನೀಡಿದ್ದಾರೆ. ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಬಿ.ಎಚ್. ವೀರಭದ್ರಪ್ಪ ಅವರೂ, ಕಾಂಗ್ರೆಸ್ ಧೋರಣೆ ಖಂಡಿಸಿ ಭಾನುವಾರ ಪ್ರತಿಭಟನೆ ನಡೆಸಿದರು.

ಅಭ್ಯರ್ಥಿಗಳ ಆಯ್ಕೆಗೆ 9-10ರಂದು ಸಭೆ
ಬಾಕಿ ಉಳಿದಿರುವ 47 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸುವ ಸಂಬಂಧ ಮಂಗಳವಾರ ಮತ್ತು ದೆಹಲಿಯಲ್ಲಿ ಗೋವಾದ ಮಾಜಿ ಮುಖ್ಯಮಂತ್ರಿ ಲುಸಿಯಾನ್ಹೊ ಫೆಲೆರೊ ನೇತೃತ್ವದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪರಿಶೀಲನಾ ಸಮಿತಿ ಸಭೆ ನಡೆಯಲಿದೆ. ಬಳಿಕ ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯುವ ಸಾಧ್ಯತೆ ಇದೆ.

`ಏಪ್ರಿಲ್ 9 ಮತ್ತು 10ರಂದು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪರಿಶೀಲನಾ ಸಮಿತಿ ಸಭೆ ನಿಗದಿಯಾಗಿದೆ. ಸಮಿತಿಯ ಸದಸ್ಯರಾಗಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಆಹ್ವಾನ ಬಂದಿದೆ. ಏ.10ರಂದು ಕೇಂದ್ರ ಚುನಾವಣಾ ಸಮಿತಿ ಸಭೆ ಸೇರಿ ಅಭ್ಯರ್ಥಿಗಳ ಪಟ್ಟಿಗೆ ಅನುಮೋದನೆ ನೀಡುವ ಸಂಭವವಿದೆ' ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.