ADVERTISEMENT

ಬಂಡೀಪುರ ರೈಲು ಮಾರ್ಗಕ್ಕೆ ವಿರೋಧ

ಯೋಜನೆ ಕುರಿತು ಚರ್ಚಿಸಲು ಇಂದು ಕರ್ನಾಟಕ-ಕೇರಳ ಸಿ.ಎಂ.ಗಳ ಸಭೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2013, 19:59 IST
Last Updated 2 ಜನವರಿ 2013, 19:59 IST
ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರ ತಡೆಗಟ್ಟಲು ಕರ್ನಾಟಕ ಸರ್ಕಾರ ಪರ್ಯಾಯ ಮಾರ್ಗದ ದುರಸ್ತಿ ಕಾರ್ಯ ಕೈಗೆತ್ತಿಕೊಂಡಿದೆ.
ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರ ತಡೆಗಟ್ಟಲು ಕರ್ನಾಟಕ ಸರ್ಕಾರ ಪರ್ಯಾಯ ಮಾರ್ಗದ ದುರಸ್ತಿ ಕಾರ್ಯ ಕೈಗೆತ್ತಿಕೊಂಡಿದೆ.   

ಬೆಂಗಳೂರು: ನಂಜನಗೂಡು ಮತ್ತು ಕೇರಳದ ನಿಲಂಬೂರ್ ನಡುವೆ ಸಂಪರ್ಕ ಕಲ್ಪಿಸುವ ಉದ್ದೇಶಿತ ರೈಲು ಮಾರ್ಗ ಯೋಜನೆಗೆ ವೈಲ್ಡ್‌ಲೈಫ್ ಮ್ಯಾಟರ್ಸ್‌ ಸಂಸ್ಥೆ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ (ಜ. 3) ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಈ ಯೋಜನೆ ಸಂಬಂಧ ಚರ್ಚಿಸಲು ಸಭೆ ಸೇರಲಿದ್ದಾರೆ.

`ರೂ 3,384 ಕೋಟಿ ಮೊತ್ತದ ಈ ರೈಲು ಮಾರ್ಗ ಯೋಜನೆ, 22 ಕಿ.ಮೀ. ದೂರ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದೊಳಗೆ ಹಾಯ್ದು ಹೋಗುತ್ತದೆ. ಪರಿಸರ ಮತ್ತು ಆರ್ಥಿಕ ಎರಡೂ ದೃಷ್ಟಿಯಿಂದ ಇದು ಕಾರ್ಯಸಾಧು ಎನಿಸದ ಯೋಜನೆಯಾಗಿದೆ' ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ.

`ಒಡಿಶಾದಲ್ಲಿ ಚಲಿಸುವ ರೈಲಿಗೆ ಸಿಲುಕಿ ಐದು ಕಾಡಾನೆಗಳು ದಾರುಣವಾಗಿ ಸಾವನ್ನಪ್ಪಿದ ಘಟನೆ ಇನ್ನೂ ಹಸಿರಾಗಿದೆ. ಇಂತಹ ಸನ್ನಿವೇಶದಲ್ಲಿ ಭಾರತದ ಉತ್ಕೃಷ್ಟ ಜೀವವೈವಿಧ್ಯ ತಾಣವಾದ ಹುಲಿ ಸಂರಕ್ಷಿತ ಪ್ರದೇಶವನ್ನು ಸೀಳಿಕೊಂಡು ಹೋಗುವ ಈ ರೈಲು ಮಾರ್ಗ ಏಕೆ ಬೇಕು' ಎಂದು ಪ್ರಶ್ನೆ ಹಾಕಿದೆ.

`ವನ್ಯಜೀವಿಗಳ ಆವಾಸಸ್ಥಾನವನ್ನು ಛಿದ್ರ ಮಾಡುವುದರಿಂದ ಆಗುವ ಪರಿಣಾಮಗಳನ್ನು ಅಸ್ಸಾಂ, ಪಶ್ಚಿಮ ಬಂಗಾಳ ಹಾಗೂ ಜಾರ್ಖಂಡ್‌ಗಳಲ್ಲಿ ರೈಲಿಗೆ ಸಿಲುಕಿ ಸಾವನ್ನಪ್ಪಿದ ವನ್ಯಪ್ರಾಣಿಗಳ ಸಂಖ್ಯೆಯೇ ಹೇಳುತ್ತದೆ. ಬಂಡೀಪುರದ ವನ್ಯಜೀವಿಗಳಿಗೆ ಅದೇ ರೀತಿಯ ಗಂಡಾಂತರವನ್ನು ಈ ಹೊಸ ರೈಲು ಯೋಜನೆ ತರಲಿದೆ' ಎಂದು ಅದು ಆತಂಕ ವ್ಯಕ್ತಪಡಿಸಿದೆ.

`ಕೇಂದ್ರ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯ ಗಜ ಕಾರ್ಯಪಡೆಯು ಸಲ್ಲಿಸಿರುವ ವರದಿಯಂತೆ 1987ರಿಂದ ಇದುವರೆಗೆ 150 ಆನೆಗಳು ಭಾರತದಲ್ಲಿ ರೈಲಿಗೆ ಸಿಲುಕಿ ಸಾವನ್ನಪ್ಪಿವೆ. ರೈಲ್ವೆ ಮಂಡಳಿಗೆ ಸಲ್ಲಿಸಿದ ಪೂರ್ವಭಾವಿ ಸ್ಥಳಾನ್ವೇಷಣೆ ಮತ್ತು ದಟ್ಟಣೆ ಸಮೀಕ್ಷಾ ವರದಿ ಹುಲಿ ಸಂರಕ್ಷಿತ ಪ್ರದೇಶ ತಪ್ಪಿಸಿ ಬೇರೆ ಮಾರ್ಗವನ್ನು ಗುರುತಿಸಬೇಕು ಎನ್ನುವ ಶಿಫಾರಸು ಮಾಡಿದೆ. ಇಂತಹ ಸನ್ನಿವೇಶದಲ್ಲಿ ಮುಖ್ಯಮಂತ್ರಿಗಳು ಯೋಜನೆಗೆ ಆತುರ ತೋರುತ್ತಿರುವುದು ಸರಿಯಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದೆ.

`ಬಂಡೀಪುರದ ಹೃದಯಭಾಗದ ಮೂಲಕ ಸಾಗುವ ರಾಷ್ಟ್ರೀಯ ಹೆದ್ದಾರಿ 67 ಹಾಗೂ 212ರಲ್ಲಿ ರಾತ್ರಿ ವಾಹನ ಸಂಚಾರವನ್ನು ಪುನರಾರಂಭಿಸುವ ವಿಚಾರವೂ ಮುಖ್ಯಮಂತ್ರಿಗಳ ಸಭೆಯ ಪಟ್ಟಿಯಲ್ಲಿದೆ. ಈ ವಿಷಯ ನ್ಯಾಯಾಲಯದಲ್ಲಿ ಇದ್ದರೂ ಕೇರಳ ಸರ್ಕಾರ ರಾತ್ರಿ ಸಂಚಾರ ನಿಷೇಧವನ್ನು ತೆರವುಗೊಳಿಸಲು ಯತ್ನಿಸುತ್ತಲೇ ಇದೆ. ಬೆಂಗಾವಲು ವಾಹನಗಳನ್ನು ಬಳಸಿ ರಾತ್ರಿ ವೇಳೆ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸುವ ಪ್ರಸ್ತಾವವನ್ನು ತಳ್ಳಿ ಹಾಕಲಾಗಿತ್ತು' ಎಂದು ಸಂಸ್ಥೆ ಹೇಳಿದೆ.

`ಕೇಂದ್ರ ಸರ್ಕಾರ ರಾತ್ರಿ ವಾಹನ ಸಂಚಾರ ನಿಷೇಧವನ್ನು ಸಮರ್ಥಿಸಿ ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರವನ್ನು ಸಲ್ಲಿಸಿದೆ. ಕರ್ನಾಟಕ ಸರ್ಕಾರ ಒಪ್ಪಿದಲ್ಲಿ ಕೇಂದ್ರದ ಮೇಲೆ ಒತ್ತಡ ತಂದು ನಿಷೇಧ ತೆರವುಗೊಳಿಸಲು ಯತ್ನಿಸುವ ಉದ್ದೇಶವನ್ನು ಕೇರಳ ಸರ್ಕಾರ ಹೊಂದಿದೆ' ಎಂದು ಅದು ತಿಳಿಸಿದೆ.

ಕರ್ನಾಟಕದ ಹೈಕೋರ್ಟ್ ಹುಣಸೂರು- ಗೋಣಿಕೊಪ್ಪ- ಕುಟ್ಟ- ರ್ಟ್ಟಿಕುಲಂ ಮಾರ್ಗವಾಗಿ ಇರುವ ಪರ್ಯಾಯ ದಾರಿಯನ್ನು ದುರಸ್ತಿಗೊಳಿಸಲು ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು. ಈಗಾಗಲೇ ಅದಕ್ಕೆ ಹಣ ಬಿಡುಗಡೆ ಮಾಡಲಾಗಿದ್ದು, ಕಾರ್ಯ ಪ್ರಗತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ರೈಲು ಮಾರ್ಗ ಅಗತ್ಯವಿಲ್ಲ ಎಂಬುದು ಸಂಸ್ಥೆಯ ಅನಿಸಿಕೆಯಾಗಿದೆ.

`ದೇಶದ ಬೆಳವಣಿಗೆಗೆ ಅಭಿವೃದ್ಧಿ ಯೋಜನೆಗಳು ಅವಶ್ಯ. ಆದರೆ, ನಮ್ಮ ನೈಸರ್ಗಿಕ ತಾಣಗಳ ಬಗೆಗೂ ನಾವು ಆಲೋಚಿಸಬೇಕು. ಈ ನಿಟ್ಟಿನಲ್ಲಿ ಎರಡೂ ಸರ್ಕಾರಗಳು ವನ್ಯಜೀವಿ ರಕ್ಷಣೆಗೆ ಪ್ರಾಮುಖ್ಯತೆ ನೀಡಬೇಕು' ಎಂದು ಅದು ಆಗ್ರಹಿಸಿದೆ.

ಒತ್ತಾಯ: ರಾಷ್ಟ್ರೀಯ ಹೆದ್ದಾರಿ 67 ಹಾಗೂ 212ರಲ್ಲಿ ವಿಧಿಸಿರುವ ರಾತ್ರಿ ಸಂಚಾರ ನಿಷೇಧವನ್ನು ಯಾವುದೇ ಕಾರಣಕ್ಕೂ ತೆರವುಗೊಳಿಸಬಾರದು ಎಂದು ಕಣ್ಣೂರು ಜಿಲ್ಲಾ ಪರಿಸರ ಸಮಿತಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದೆ. ನಿಷೇಧ ತೆರವುಗೊಳಿಸಿದರೆ ವನ್ಯಜೀವಿ ಸಂಕುಲ ಅಪಾಯದಲ್ಲಿ ಸಿಲುಕಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.